ಭಕ್ತರ ಮನದಲ್ಲಿ ನೆಲೆಯೂರಿದ ಯೋಗಿ ಪುಟ್ಟರಾಜರು: ಡೊಳ್ಳಿನ

| Published : Sep 14 2024, 01:53 AM IST

ಸಾರಾಂಶ

ಪುಟ್ಟರಾಜರು ಅವಿಶ್ರಾಂತವಾಗಿ ಸಂಗೀತ, ಸಾಹಿತ್ಯ, ಸಾಮಾಜಿಕ,ಶೈಕ್ಷಣಿಕ, ಅಂಧ, ಅನಾಥರ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡು ೯೮ ವಸಂತಗಳನ್ನು ಪೂರೈಸಿದ ಮಹಾನ್ ಚೇತನ

ಗಜೇಂದ್ರಗಡ: ಭಕ್ತರ ಹೃದಯದಲ್ಲಿ ನೆಲಸಿರುವ ಗದುಗಿನ ವೀರೇಶ್ವರ ಪುಣ್ಯಾಶ್ರಮದ ನಡೆದಾಡುವ ದೇವರು ಡಾ.ಪುಟ್ಟರಾಜ ಕವಿ ಗವಾಯಿಗಳವರು ನಮ್ಮೊಂದಿಗೆ ಇಲ್ಲದಿರಬಹುದು. ಭಕ್ತರ ಮನದಲ್ಲಿ ಸದಾ ನೆಲೆಯೂರಿದ ಯೋಗಿಯಾಗಿದ್ದಾರೆ ಎಂದು ಕಾರಕೂನ ಸಂಘದ ಅಧ್ಯಕ್ಷ ಶ್ರೀಕಾಂತ ಡೊಳ್ಳಿನ ಹೇಳಿದರು.

ಪಟ್ಟಣದ ಜಗಜ್ಯೋತಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಸಿದ್ಧಿ ವಿನಾಯಕನ ದೇವಸ್ಥಾನದಲ್ಲಿ ಕಾರಕೂನ ಸಂಘದ ವತಿಯಿಂದ ಗಾನಯೋಗಿ ಲಿಂ.ಡಾ. ಪಂ.ಪುಟ್ಟರಾಜ ಗವಾಯಿಗಳವರ ೧೪ನೇ ಪುಣ್ಯಾರಾಧನೆ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಲಿಂಗೈಕ್ಯರಾಗಿದ್ದು, ಅವರ ನೆನಪಿಗೆ ಅಂಧ, ಅನಾಥರ ಕಾಳಜಿಯ ಮಹತ್ಕಾರ್ಯಗಳ ನೆನಪು ಮಾತ್ರ ಎಂದೆಂದಿಗೂ ಅಜರಾಮರ. ಅವರ ಸ್ಥಾನದಲ್ಲಿ ಈಗ ಕಲ್ಲಯ್ಯಜ್ಜನವರು ಪುಣ್ಯಾಶ್ರಮದ ಕಾರ್ಯ ಮುನ್ನಡೆಸುತ್ತಿದ್ದಾರೆ. ಜತೆಗೆ ಅಂಧ,ಅನಾಥ ಮಕ್ಕಳ ಸೇವೆಯಲ್ಲಿ ತೊಡಗಿದ್ದಾರೆ ಎಂದರು.

ವೀರೇಶ ಸಂಗಮದ ಮಾತನಾಡಿ,ಪುಟ್ಟರಾಜರು ಅವಿಶ್ರಾಂತವಾಗಿ ಸಂಗೀತ, ಸಾಹಿತ್ಯ, ಸಾಮಾಜಿಕ,ಶೈಕ್ಷಣಿಕ, ಅಂಧ, ಅನಾಥರ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡು ೯೮ ವಸಂತಗಳನ್ನು ಪೂರೈಸಿದ ಮಹಾನ್ ಚೇತನ ಎಂದರು.

ಈ ವೇಳೆ ರವಿ ಪವಾರ, ಕುಮಾರ ಸಂಗಮದ, ಮಂಜು ಸಂಗನಾಳ, ಬಸವರಾಜ ಜಾಲಿಯಳ, ಈರಪ್ಪ ಉಳ್ಳಾಗಡ್ಡಿ, ಕಳಕಪ್ಪ ಹಿರೇಕೊಪ್ಪ, ವೀರೇಶ ಗೌರಿಮಠ, ಪ್ರವೀಣ್ ಕರಮುಡಿ, ನರಸಪ್ಪ ಕುಷ್ಟಗಿ ಹಾಗೂ ಶ್ರಮಜೀವಿ ಸಂಘದ ಅಧ್ಯಕ್ಷ ಪರಶುರಾಮ ಕಲಾಲ, ಬಸವರಾಜ ಸುರಕೊಡ, ಕುಬೇರ ಹೊಸಮನಿ, ಯಶವಂತ ಪವಾರ, ಕೃಷ್ಣ ಘೋರ್ಪಡೆ ಸೇರಿದಂತೆ ವರ್ತಕ ಸಂಘ ಹಾಗೂ ಶ್ರಮಜೀವಿಗಳ ಸಂಘ ಹಾಗೂ ರೈತ ಬಾಂಧವರು ಭಾಗವಹಿಸಿದ್ದರು.