ನೀವೆಲ್ಲಾ ಸೇವೆಯಲ್ಲಿರಲು ಅನ್‌ಫಿಟ್‌: ಸಿಎಂ ಕಿಡಿ

| Published : Jun 19 2024, 01:16 AM IST

ನೀವೆಲ್ಲಾ ಸೇವೆಯಲ್ಲಿರಲು ಅನ್‌ಫಿಟ್‌: ಸಿಎಂ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿ.ನಾಗೇಂದ್ರ ರಾಜೀನಾಮೆ ನಂತರ ತಮ್ಮ ಬಳಿಯಲ್ಲಿಯೇ ಇರುವ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರುಬಿ.ನಾಗೇಂದ್ರ ರಾಜೀನಾಮೆ ನಂತರ ತಮ್ಮ ಬಳಿಯಲ್ಲಿಯೇ ಇರುವ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಕುತೂಹಲಕಾರಿ ಸಂಗತಿಯೆಂದರೆ, ಸಭೆಯಲ್ಲಿ ವಾಲ್ಮೀಕಿ ಮಹರ್ಷಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ.ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಎರಡೂ ಇಲಾಖೆಗಳ ಸಭೆಯಲ್ಲಿ, ಆಶ್ರಮ ಶಾಲೆಯ ಮಕ್ಕಳು, ಆರ್ಥಿಕ ಹಿಂದುಳಿದವರು, ದಲಿತ ಮಕ್ಕಳ ಶಿಕ್ಷಣದ ಬಗೆಗಿನ ನಿರ್ಲಕ್ಷ್ಯ ಹಾಗೂ ಫಲಾನುಭವಿಗಳ ಗುರುತಿಸುವಲ್ಲಿ ವಿಳಂಬದ ಕುರಿತಂತೆ ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಒಂದು ಹಂತದಲ್ಲಿ ಬಡವರು, ದಲಿತರು, ಆದಿವಾಸಿ, ಬುಡಕಟ್ಟು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ದರೆ ನೀವು ಸೇವೆಯಲ್ಲಿರಲು ‘ಅನ್‌ಫಿಟ್‌’ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ವಸತಿ ನಿಲಯಕ್ಕೆ ಖುದ್ದು ಭೇಟಿ ನೀಡಿ:ವಸತಿ ನಿಲಯಗಳಲ್ಲಿನ ನೈಜ ಪರಿಸ್ಥಿತಿ ಅರಿತು, ಅಲ್ಲಿನ ಸಮಸ್ಯೆ ನಿವಾರಿಸಲು ಸಂಬಂಧಪಟ್ಟ ಅಧಿಕಾರಿಗಳು ಸಂಜೆ ವೇಳೆಗೆ ವಸತಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಬೇಕು. ಅಲ್ಲಿನ ಶುಚಿ ಕಿಟ್‌, ಆಹಾರ ಪದಾರ್ಥ ವಿತರಣೆ ಸಮರ್ಪಕವಾಗಿ ಆಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು ಎಂದು ಸಿಎಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಇದೇ ವೇಳೆ ಆದಿವಾಸಿ ಬುಟ್ಟಕಟ್ಟು ವಸತಿ ಶಾಲೆಗಳಲ್ಲಿ ರಾತ್ರಿ ವೇಳೆ ಮಕ್ಕಳು ಇರುವುದಿಲ್ಲ. ಊಟದ ನಂತರ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು. ಅದಕ್ಕೆ ಸಿಎಂ ಸಿದ್ದರಾಮಯ್ಯ, ಎಲ್ಲ ಸೌಲಭ್ಯಗಳಿದ್ದೂ, ಮಕ್ಕಳನ್ನು ಏತಕ್ಕಾಗಿ ಮನೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಪ್ರಶ್ನಿಸಿದರಲ್ಲದೆ, ವಸತಿ ಶಾಲೆಗಳಲ್ಲಿನ ಸೌಲಭ್ಯದ ಬಗ್ಗೆ ಪೋಷಕರಿಗೆ ತಿಳಿಸಬೇಕು ಎಂದರು.ಇದೇ ವೇಳೆ ಅನುದಾನ ಲಭ್ಯವಿದೆ ಎಂಬ ಕಾರಣಕ್ಕೆ ಬೇಡಿಕೆ ಇಲ್ಲದಿದ್ದರೂ ಹಾಸಿಗೆ, ಬೆಡ್‌ಶೀಟ್‌ಗಳನ್ನು ಖರೀದಿಸುವುದನ್ನು ಸಹಿಸುವುದಿಲ್ಲ. ಅನಗತ್ಯವಾಗಿ 4ಜಿ ವಿನಾಯಿತಿ ಪಡೆದು ಖರೀದಿಸುವ ಬದಲು ಟೆಂಡರ್‌ ಪ್ರಕ್ರಿಯೆ ನಡೆಸಿಯೇ ಎಲ್ಲ ಖರೀದಿ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಸೇವೆಯಲ್ಲಿರಲು ‘ಅನ್‌ಫಿಟ್‌’ ನೀವು:

ಬಡವರು, ದಲಿತರ ಮಕ್ಕಳನ್ನು ಅಧಿಕಾರಿಗಳು ಸರಿಯಾಗಿ ನೋಡಿಕೊಳ್ಳಬೇಕು. ಅವರಿಗೆ ನೀಡುವ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಬೇಕು. ಅದರ ಬಗ್ಗೆ ನಿರ್ಲಕ್ಷ್ಯವಹಿಸಿದರೆ ನೀವು ಸೇವೆಯಲ್ಲಿರಲೇ ಅನ್‌ಫಿಟ್‌. ವಸತಿ ಶಾಲೆಗಳು ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಕಲಿಕೆಯಲ್ಲಿ ಹಿಂದುಳಿದವರನ್ನು ಬುದ್ಧಿವಂತರಾಗಿಸಬೇಕು ಎಂದು ಸಿಎಂ ತಿಳಿಸಿದರು.ಕೇರಳ/ ಒಡಿಶಾ ಮಾದರಿ ಅನುಸರಿಸಿ:

ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಹಿರಿಯ ಕೆಎಎಸ್‌ ಅಧಿಕಾರಿಯನ್ನು ನಿರ್ದೇಶಕರನ್ನಾಗಿ ನೇಮಿಸುವುದು ಸೂಕ್ತ ಎಂದು ಅಧಿಕಾರಿಗಳು ನೀಡಿದ ಸಲಹೆಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ, ಈ ಕುರಿತು ಪ್ರಸ್ತಾವನೆ ಸಲ್ಲಿಸಿ. ಅದರ ಜತೆಗೆ ಕೇರಳ ಮಾದರಿಯಲ್ಲಿ ಆಡಳಿತ ಮತ್ತು ಸಂಶೋಧನಾ ವಿಭಾಗಗಳ ಪ್ರತ್ಯೇಕ ರಚನೆ ಅಥವಾ ಒಡಿಶಾ ರಾಜ್ಯದಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದು, ಪರಿಶೀಲಿಸುವಂತೆ ಸೂಚಿಸಿದರು.

ಅಧಿಕಾರಿಗಳಿಗೆ ತರಾಟೆ

ಸಭೆಯಲ್ಲಿ 2023-24ನೇ ಸಾಲಿನಲ್ಲಿ ನಿಗಮಕ್ಕೆ ನೀಡಲಾಗಿರುವ 263 ಕೋಟಿ ರು. ಅನುದಾನದಲ್ಲಿ ಯೋಜನೆಗಳ ಅನುಷ್ಠಾನಕ್ಕಾಗಿರುವ ಹಿನ್ನಡೆ ಕುರಿತಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಫಲಾನುಭವಿಗಳ ಆಯ್ಕೆ ಮಾಡದಿರುವ ಕುರಿತು ಪ್ರಶ್ನಿಸಿದರು. ಅದಕ್ಕುತ್ತರಿಸಿದ ಅಧಿಕಾರಿಗಳು, ಶಾಸಕರು ಫಲಾನುಭವಿಗಳ ಪಟ್ಟಿ ನೀಡಿಲ್ಲ. ಆಯ್ಕೆ ಮಾಡಬೇಕಾದ ಫಲಾನುಭವಿಗಳ ಸಂಖ್ಯೆ ಕಡಿಮೆ ಇರುವ ಕಾರಣ ಸಂದಿಗ್ಧ ಪರಿಸ್ಥಿತಿ ಎದುರಾಗುವಂತಾಗಿದ್ದು, ಶಾಸಕರು ಆಸಕ್ತಿ ತೋರುತ್ತಿಲ್ಲ ಎಂದರು.ಅದಕ್ಕೆ ಸಿಎಂ, ಫಲಾನುಭವಿಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಕ್ರೀಡಾ ಇಲಾಖೆಗೆ ಲೋಕೋಪಯೋಗಿ ಎಂಜಿನಿಯರ್‌ಗಳ ನೇಮಕ:

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಗತಿ ಪರಿಶೀಲನೆ ವೇಳೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ 120 ತಾಲೂಕುಗಳಲ್ಲಿನ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ವಿಳಂಬದ ಬಗ್ಗೆ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ, ಇಲಾಖೆ ಕಾಮಗಾರಿಗಳ ಯೋಜನೆ ರೂಪಿಸಲು ಮತ್ತು ಮೇಲ್ವಿಚಾರಣೆಗೆ ಲೋಕೋಪಯೋಗಿ ಇಲಾಖೆಯಿಂದ ಇಬ್ಬರು ಎಂಜಿನಿಯರ್‌ ರನ್ನು ಇಲಾಖೆಗೆ ನೇಮಿಸಿಕೊಳ್ಳುವಂತೆ ಸೂಚಿಸಿದರು. ಅಲ್ಲದೆ ಇಲಾಖೆಯ ಎಲ್ಲ ಕಾಮಗಾರಿಗಳನ್ನು ಟೆಂಡರ್‌ ಪ್ರಕ್ರಿಯೆ ನಡೆಸಿಯೇ ನೀಡಬೇಕು ಎಂದು ತಿಳಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ ಕುರಿತಂತೆ ಯಾವುದೇ ಪ್ರಕ್ರಿಯೆ ನಡೆಯದ ಕುರಿತು ಅಸಮಧಾನ ವ್ಯಕ್ತಪಡಿಸಿದ ಸಿಎಂ, ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚಿಸಿದರು.