ಯಜ್ಞ-ಯಾಗ ಮಾಡಲು ಕಷ್ಟ ಎನ್ನುವವರೂ ಕೂಡ ಕೇವಲ ಸಮರ್ಪಕ ಪ್ರಾಣಾಯಾಮದಿಂದ ಉನ್ನತಿಯನ್ನು ಕಾಣಬಹುದು.
ಸರಿಯಾದ ಉಸಿರಾಟವೇ ತಪಸ್ಸು ಮತ್ತು ಮೋಕ್ಷ ಸಾಧನ, ಉಸಿರಾಟದ ಹಿಂದಿದೆ ಅದ್ಭುತ ರಹಸ್ಯ: ಕೇವಲ ಉಸಿರಿನಿಂದಲೇ ತಿಳಿಯಬಹುದು ಭವಿಷ್ಯ!ಕನ್ನಡಪ್ರಭ ವಾರ್ತೆ ಗೋಕರ್ಣ
ಯಜ್ಞ-ಯಾಗ ಮಾಡಲು ಕಷ್ಟ ಎನ್ನುವವರೂ ಕೂಡ ಕೇವಲ ಸಮರ್ಪಕ ಪ್ರಾಣಾಯಾಮದಿಂದ ಉನ್ನತಿಯನ್ನು ಕಾಣಬಹುದು. ಉಸಿರಾಟವನ್ನು ಸರಿಯಾದ ಕ್ರಮದಲ್ಲಿ ಮಾಡಿದಾಗ ಅದೇ ತಪಸ್ಸು, ಸಿದ್ಧಿ ಮತ್ತು ಮೋಕ್ಷ ಸಾಧನವಾಗುತ್ತದೆ. ಹಾಗೂ ಈ ಪ್ರಪಂಚದಲ್ಲಿ ಆನಂದವನ್ನು, ಆರೋಗ್ಯವನ್ನು ಪ್ರಾಣಾಯಾಮ ನೀಡುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.ಅಶೋಕೆಯ ಮೂಲಮಠದ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಬುಧವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಉಸಿರಾಟದ ಸೂಕ್ಷ್ಮಗಳ ಕುರಿತಾಗಿ ಪ್ರವಚನವನ್ನು ಅನುಗ್ರಹಿಸುತ್ತಾ, ಮೂಲಬಂಧ ಸಹಿತ ಪ್ರಾಣಾಯಾಮ ಮಾಡಿದರೆ ಮಹಿಳೆಯರ ಹೆಣ್ಣುತನವೇ ನಷ್ಟವಾಗಬಹುದು. ಆದರೆ ಪುರುಷರು ಪ್ರಾಣಾಯಾಮ ಮುಂತಾದ ಸಾಧನೆಗಳಿಂದ ಸಿದ್ಧಿಸಿಕೊಳ್ಳುವುದನ್ನು ಮಹಿಳೆಯರು ಕೇವಲ ಭಾವದಿಂದಲೇ ಪಡೆದುಕೊಳ್ಳಬಹುದು. ಮಹಿಳೆಯರಿಗೆ ಭಾವವೇ ಪ್ರಧಾನವಾಗಿದ್ದು, ಅದರಿಂದಲೇ ಅವರಿಗೆ ಎಲ್ಲವೂ ಸಿದ್ಧಿಸುತ್ತದೆ ಎಂದು ವಿವರಿಸಿದರು.
ಮೂಗಿನ ಎಡ ಹೊಳ್ಳೆಯಿಂದ ಉಸಿರಾಟವಾದರೆ ಚಂದ್ರನಾಡಿಯ ಉಸಿರಾಟ ಎಂದೂ, ಬಲ ಹೊಳ್ಳೆಯ ಉಸಿರಾಟವನ್ನು ಸೂರ್ಯನಾಡಿಯ ಉಸಿರಾಟ ಎನ್ನಲಾಗುತ್ತದೆ. ಎರಡು ಹೊಳ್ಳೆಯಿಂದ ಉಸಿರಾಟವಾದರೆ ಅದು ಸುಷುಮ್ನಾ ನಾಡಿಯ ಉಸಿರಾಟವಾಗಿದ್ದು, ಸುಷುಮ್ನಾ ಉಸಿರಾಟಕ್ಕೆ ಆಧ್ಯಾತ್ಮಿಕ ಮಹತ್ವವಿದೆ. ಎಡನಾಡಿಯ ಉಸಿರಾಟ ಸೌಮ್ಯು ಕಾರ್ಯಗಳಿಗೆ ಸೂಕ್ತವಾದರೆ, ಕಠಿಣವಾದ ಕೆಲಸಗಳನ್ನು ಮಾಡುವಾಗ ಬಲನಾಡಿಯ ಉಸಿರಾಟ ಅಗತ್ಯವಾಗಿದೆ ಎಂದು ಉಸಿರಾಟದ ಹಿಂದಿರುವ ಮರ್ಮವನ್ನು ತಿಳಿಸಿದರು.ಉಸಿರಾಟವು ನಮ್ಮ ಅರಿವಿಗೇ ಬರದೆಯೇ ನಡೆಯುತ್ತಿದೆ. ಆದರೆ ಉಸಿರನ್ನು ಗಮನಿಸಿದಾಗ ಅದಕ್ಕೆ ಅದ್ಭುತ ಶಕ್ತಿ ತಂದುಕೊಳ್ಳಬಹುದು. ಉಸಿರಾಟದ ಅಧ್ಯಯನಕ್ಕೆ ಸಂಬಂಧಿಸಿದ್ದನ್ನು ಸ್ವರಶಾಸ್ತ್ರ ಎನ್ನಲಾಗುತ್ತದೆ. ಉಸಿರಾಟವನ್ನು ಆಧರಿಸಿಯೇ ಎಲ್ಲವನ್ನೂ ಅರಿತುಕೊಳ್ಳಬಹುದಾಗಿದ್ದು, ಗ್ರಹಗತಿಗಳನ್ನು ನೋಡದೆಯೇ, ಕೇವಲ ಉಸಿರನ್ನು ಆಧರಿಸಿ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದು. ಗ್ರಹಗಳು ಫಲಾಫಲಗನ್ನು ಕೊಡುವಾಗ ಅದಕ್ಕೆ ತಕ್ಕಂತಹ ಶ್ವಾಸವನ್ನು ಉಂಟುಮಾಡುತ್ತವೆ ಎಂಬ ಉಸಿರಾಟದ ಹಿಂದಿರುವ ರಹಸ್ಯಗಳನ್ನು ತಿಳಿಸಿದರು. ಕೇವಲ ಗಾಳಿಯನ್ನು ಸೇವಿಸಿ ಜೀವಿಸಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಪಾರ್ವತಿ, ಧೃವ, ಭಗೀರಥ, ವಿಶ್ವಾಮಿತ್ರ ಮುಂತಾದವರ ಉದಾಹರಣೆ ನೀಡಿ, ದೃಢಮನಸ್ಸಿನಿಂದ ಸರಿಯಾದ ಕ್ರಮದಲ್ಲಿ ಇದ್ದಾಗ ಗಾಳಿಯನ್ನು ಸೇವಿಸಿಯೂ ಬದುಕಬಹುದು ಎಂದರು.
ಮುಳ್ಳೇರಿಯಾ ಹವ್ಯಕ ಮಂಡಲದ ಚಂದ್ರಗಿರಿ, ನೀರ್ಚಾಲು, ಕುಂಬಳೆ, ಪಳ್ಳತಡ್ಕ, ಈಶ್ವರಮಂಗಲ, ಪೆರಡಾಲ ಹವ್ಯಕ ವಲಯಗಳ ಪರವಾಗಿ ವಿನೋದ ಮರದಮೂಲೆ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೀತಾರಾಮ ಕೆದಿಲಾಯ ಶ್ರೀಗಳ ಆಶೀರ್ವಾದ ಪಡೆದರು. ಅಜಿತ್ ಗುಡ್ಗೆ, ಕೆ.ಎನ್. ಹೆಗಡೆ, ನಂದನ ಸಂಪ, ರಾಹುಲ್, ದೇವಕಿ ಜಿ. ಭಟ್, ಸುಬ್ರಹ್ಮಣ್ಯ ಕೆರೆಮೂಲೆ, ಮಹೇಶಕೃಷ್ಣ ತೇಜಸ್ವಿ, ಶ್ರೀಕೃಷ್ಣ ಶರ್ಮಾ, ಕೃಷ್ಣ ಪ್ರತೀಕ, ದಿನಪ್ರಧಾನರಾಗಿ ಗಣಪತಿ ಸುಬ್ರಾಯ ಭಟ್ ಕಲ್ಲಾಳ ದಂಪತಿಗಳು ಉಪಸ್ಥಿತರಿದ್ದರು.