ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪ್ರದೀಪ್ ಈಶ್ವರ್ ಬುಂಡೆ ದಾಸ, ಪುಕ್ಕಲು ಜೋಗಿ. ಎಚ್ಡಿಕೆ ಸೇರಿದಂತೆ ಹಿರಿಯ ನಾಯಕರ ಬಗ್ಗೆ ಡೈಲಾಗ್ ಹೊಡೆದ ಮಾತ್ರಕ್ಕೆ ನೀನು ದೊಡ್ಡ ಲೀಡರ್ ಆಗಲು ಸಾಧ್ಯವಿಲ್ಲ ಶಾಸಕ ಎಚ್.ಟಿ.ಮಂಜು ಕಿಡಿಕಾರಿದರು.ತಾಲೂಕಿನ ಬೂಕನಕೆರೆ ಹೋಬಳಿಯ ಬಣ್ಣೇನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಅವರ ಕುಟುಂಬದ ವಿರುದ್ಧ ಅತ್ಯಂತ ಕೆಳಮಟ್ಟದಲ್ಲಿ ಮಾತನಾಡುತ್ತಿರುವ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಾನು ಮತ್ತು ನೀನು ಇಬ್ಬರೂ ಇದೇ ಮೊದಲ ಬಾರಿಗೆ ಶಾಸಕರಾಗಿದ್ದೇವೆ. ನಮ್ಮ ನಡೆಯಿಂದ ಶಾಸಕತ್ವದ ಘನತೆ ಮತ್ತು ಗೌರವಕ್ಕೆ ಚ್ಯುತಿ ಬಾರದಂತೆ ಇರಬೇಕು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಅವಧಿಗೆ ನಾಡಿನ ಮುಖ್ಯಮಂತ್ರಿಯಾಗಿದ್ದವರು. ಅವರ ಬಗ್ಗೆ ಮಾತನಾಡುವಾಗ ನಾಲಿಗೆಯಲ್ಲಿ ಹಿಡಿತವಿರಲಿ ಎಂದು ಎಚ್ಚರಿಸಿದರು.ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿತ್ವ ನಿನ್ನದಲ್ಲ. ನಿನ್ನ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಟ್ರೋಲ್ ಮಾಡುತ್ತಿದ್ದಾರೆ. ನಿನಗೆ ಮಾನ ಮರ್ಯಾದೆ ಎನ್ನುವುದೇ ಇಲ್ಲ. ಎಲ್ಲವನ್ನು ಬಿಟ್ಟು ನಿಂತಿದ್ದೀಯಾ ಎಂದು ಟೀಕಿಸಿದರು.
ನೀನು ಬುಂಡೇದಾಸ, ಮುಕುಲ್ ಜೋಗಿ. ಹಿರಿಯರ ಬಗ್ಗೆ ಲಘುವಾಗಿ ಡೈಲಾಗ್ ಹೊಡೆದ ಮಾತ್ರಕ್ಕೆ ನೀನು ದೊಡ್ಡ ಲೀಡರ್ ಆಗಲು ಸಾಧ್ಯವಿಲ್ಲ. ನನ್ನಂತೆಯೇ ನೀನು ಒಬ್ಬ ಸಾಮಾನ್ಯ ಶಾಸಕ. ಕೆಲವು ಸಂಘಟನೆಗಳು ನಿನಗೆ ಹೊಡೆಯಲು ಚಪ್ಪಲಿ ಹಿಡಿದು ನಿಂತಿದ್ದವು. ಆಗ ನೀನು ಪೊಲೀಸ್ ರಕ್ಷಣೆಯಲ್ಲಿ ಹೋಗಿದ್ದೆ. ಅದನ್ನು ನೀನು ನೆನಪು ಮಾಡಿಕೋ. ಶಾಸಕತ್ವದ ಘನತೆ ಗೌರವಗಳಿಗೆ ಚ್ಯುತಿಬಾರದಂತೆ ನಾಲಿಗೆಯನ್ನು ಬಿಗಿ ಹಿಡಿದು ಮಾತನಾಡುವಂತೆ ಸಲಹೆ ನೀಡಿದರು.
ಕುಮಾರಸ್ವಾಮಿ ಅವರು ಪಂಚೆ ಅಂಗಿ ಬಿಟ್ಟರೆ ಬಳಸುವ ಎಲ್ಲವೂ ದುಬಾರಿ ಬೆಲೆಯ ವಸ್ತುಗಳನ್ನು ಬಳಸುತ್ತಾರೆ ಎಂದು ಹೇಳಿಕೆ ಸರಿಯಲ್ಲ. ಕುಮಾರಣ್ಣ ಜನರಿಗೆ ಮೋಸ ಮಾಡಿ ಹಣ ಸಂಪಾದಿಸಿಲ್ಲ. ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಜಮೀನುಗಳನ್ನು ಡಿ ನೋಟಿಫಿಕೇಷನ್ ಮಾಡಿ ಅಥವಾ ಗಣಿಗಾರಿಕೆ ಮಾಡಿ ಹಣ ಸಂಪಾದಿಸಿಲ್ಲ. ಅವರು ಸಿನಿಮಾ ನಿರ್ಮಾಪಕರಾಗಿ ಬಂದ ಲಾಭದಲ್ಲಿ ಒಂದಷ್ಟು ಆಸ್ತಿ ಗಳಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಕುಮಾರಣ್ಣ ಕೊಂಡುಕೊಂಡಿರುವ ಆಸ್ತಿ ಒಂದು ಎಕರೆಗೆ ಒಂದು ಕೋಟಿ ಎಂದು ಹೇಳಿಕೆ ನೀಡಿದ್ದೀಯಾ. ಕುಮಾರಣ್ಣ ನೆನ್ನೆ ಮೊನ್ನೆ ಆಸ್ತಿ ಸಂಪಾದನೆ ಮಾಡಿಲ್ಲ. ಅವರ ಆಸ್ತಿಯಿರುವ ಭಾಗದ ಸಬ್ ರಿಜಿಸ್ಟಾರ್ ಕಚೇರಿಗೆ ಹೋಗು. ಅವರು ಜಮೀನು ಕೊಂಡುಕೊಂಡ ಅವಧಿಯಲ್ಲಿ ಅಲ್ಲಿನ ಜಮೀನಿನ ಮೌಲ್ಯ ಎಷ್ಟಿತ್ತು ಎನ್ನುವುದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕುಮಾರಣ್ಣ, ಅನಿತಕ್ಕ ಅವರ ಬಗ್ಗೆ ಮಾತನಾಡುವ ಮುನ್ನ ಶಾಸಕನಾದವನಿಗೆ ತನ್ನ ಮಾತಿನ ಮೇಲೆ ಹಿಡಿತವಿರಬೇಕು. ದೊಡ್ಡವರ ಬಗ್ಗೆ ಹೇಳಿದಾಕ್ಷಣ ಮಾಸ್ ಲೀಡರ್ ಆಗಬಹುದು ಎಂದು ಕನಸು ಕಾಣುತ್ತಿದ್ದಿಯಾ. ಮುಂದುವರೆದರೆ ನಿನಗಿಂತ ಎರಡರಷ್ಟು ಮಾತನಾಡುವ ತಾಕತ್ತು ನಮಗೂ ಇದೆ ಎಚ್ಚರಿಕೆ ನೀಡಿದರು.