ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ: ಬಡವ ಎಂದು ಸುಮ್ಮನೆ ಕೂತರೆ ಅಭಿವೃದ್ಧಿ ಸಾಧ್ಯವಿಲ್ಲ. ಯಾವುದಾದರೂ ಕಾಯಕ ಮಾಡಿ ಬದುಕನ್ನು ಉದ್ದಾರ ಮಾಡಬೇಕು ಎಂದು ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಹೇಳಿದರು. ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಆಯೋಜಿಸಿದ್ದ ಅನುಭಾವ ಶ್ರಾವಣ ಕಾರ್ಯಕ್ರಮದ ಚಿಂತನ ಸರಣಿ ಮಾಲೆಯ ಸಾನಿಧ್ಯ ವಹಿಸಿ ಮಾತನಾಡಿದರು.ಮಾನವ ತನ್ನ ಜೀವನದಲ್ಲಿ ವಚನ ಓದುವ ಮೂಲಕ ಅದರ ಸಾರವನ್ನು ಪಾಲಿಸಬೇಕು. ವಚನಗಳ ಮೂಲಕ ವ್ಯಕ್ತಿತ್ವವನ್ನು ಶುದ್ಧೀಕರಿಸಿ ಸಮಾಜವನ್ನು ಸಬಲೀಕರಣ ಮಾಡಲು ಮುಂದಾದವರು ಬಸವಣ್ಣನವರು. ಇಂಥವರನ್ನು ಅನುಸರಿಸಿ ಓದುವುದರಿಂದ ಮನಕ್ಕೆ ಸಮಾಧಾನ, ನಂಬಿಕೆ, ಸತ್ಯ ದೊರಕುತ್ತವೆ. ಇಂತಹ ವಚನಗಳಲ್ಲಿ ಲೋಕದ ಕಲ್ಯಾಣವಿದೆ ಎಂದರು.
ವಚನಗಳು ಎಲ್ಲರ ಬದುಕನ್ನು ಉದ್ಧರಿಸುವ ಮಂತ್ರಗಳು . ಬಸವಣ್ಣ, ನಾವು ಮಾತನಾಡುವಾಗ ಮುತ್ತಿನಂತಿರಬೇಕು ಎಂದು ಹೇಳಿದ್ದರು. ಆದರೆ ಇಂದಿನವರ ಮಾತುಗಳು ಚುಚ್ಚುವಂತೆ ಇವೆ. ಹೊಟ್ಟೆ ಕಿಚ್ಚು ಅಹಂಕಾರ, ಕೊಲ್ಲುವ ಮಾತುಗಳು ವ್ಯಾಪಕವಾಗಿವೆ. ಸ್ವರ್ಗ ನರಕ ಎಂಬುದು ನಿಮ್ಮ ನಾಲಿಗೆಯಲ್ಲಿ ಇದೆ . ಹಿರಿಯರನ್ನು ಗೌರವಿಸಬೇಕು. ಹಾಗಿದ್ದಲ್ಲಿ ಮಾತ್ರ ಆ ಮನೆ ಸ್ವರ್ಗ ಆಗಲು ಸಾಧ್ಯ ಎಂದು ತಿಳಿಸಿದರು.ಹೆಬ್ಬಳ್ಳಿಯ ಎಚ್.ಸಿ. ಮಲ್ಲಿಕಾರ್ಜುನಪ್ಪ ಮಾತನಾಡಿ 12ನೇ ಶತಮಾನದ ಶರಣರು ಜಾತ್ಯಾತೀತ, ಧರ್ಮಾತೀತ, ವರ್ಗಾತೀತ ಸಮಾಜ ನಿರ್ಮಾಣ ಮಾಡಿ ಅಂಗೈಯಲ್ಲಿ ದೇವರನ್ನು ಕರುಣಿಸಿ, ಆಚಾರ ವಿಚಾರ ನಡೆ-ನುಡಿ ಕಲಿಸಿದರು. ಆದರೆ ನಾವಿಂದು ಅವುಗಳೆಲ್ಲವುದರಿಂದ ವಿಮುಖರಾಗಿದ್ದರ ಪರಿಣಾಮ, ಇಂದು ಸಮಾಜ ದುರಂತದ ಹಾದಿ ಹಿಡಿದಿದೆ. ಹಿಂದೆ ಅಪ್ಪ ಅಮ್ಮರ ನುಡಿ ವೇದವಾಕ್ಯವಾಗಿತ್ತು. ಆದರೆ ಇಂದು ತಂದೆ ತಾಯಿ ಮಾತಿಗೆ ಬೆಲೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆದ್ದರಿಂದ ಇಂದು ವಿಚ್ಛೇದನವೆಂಬ ಪಿಡುಗು ತಾಂಡವವಾಡುತ್ತಿದೆ. ಪೋಷಕರು ಮಕ್ಕಳಿಗೆ ಬಾಲ್ಯದಲ್ಲಿರುವಾಗಲೇ ಸಂಸ್ಕಾರ ಕಲಿಸಬೇಕು. ಹಾಸಿಗೆಯಿಂದ ಎದ್ದ ತಕ್ಷಣ ಮೊಬೈಲ್ ಹಿಡಿಯುವ ಸಂಸ್ಕೃತಿ ದೂರಾಗಿ, ವಚನ ಓದುವ, ಶರಣರ ಮಾರ್ಗದರ್ಶನ ಅನುಸರಿಸುವ ಸಮಾಜ ಸೃಷ್ಟಿಯಾಗಬೇಕು ಎಂದರು.ಒಪ್ಪತ್ತಿನಸ್ವಾಮಿ ಮಠದ ಕಾರ್ಯದರ್ಶಿ ಕಲ್ಮಠ್ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ಹಳ್ಳಿಗೆ ಶರಣರ ವಚನವನ್ನು ತಲುಪಿಸುತ್ತಿರುವ ಶ್ರಾವಣ ಮಾಸವು ಮನುಷ್ಯನಲ್ಲಿ ಬದಲಾವಣೆ ತರುತ್ತದೆ. ಮಠದಲ್ಲಿ ಕೆಲ ಶಿಥಿಲಗೊಂಡಿದ್ದ ಎಲ್ಲಾ ಕಟ್ಟಡಗಳನ್ನು ಮತ್ತೆ ದುರಸ್ತಿ ಮಾಡುವ ಕೆಲಸ ಆಗಿದೆ. ಅದರಿಂದ ಹಲವಾರು ವಿದ್ಯಾರ್ಥಿಗಳಿಗೆ ಉಚಿತ ವಿದ್ಯೆ, ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಒಂಟಿಕಂಬ ಮುರುಘಾಮಠದ ತಿಪ್ಪೇರುದ್ರ ಸ್ವಾಮೀಜಿ, ಮುರುಘಾಮಠದ ಮುರುಘೇಂದ್ರ ಸ್ವಾಮೀಜಿ , ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ. ಓಂಕಾರಪ್ಪ, ಕೋಡಿಹಳ್ಳಿ ಆರ್.ತಮ್ಮಣ್ಣ, ನಿವೃತ್ತ ಪ್ರಾಚಾರ್ಯ ಎನ್.ಬಿ. ತಿಪ್ಪೇಸ್ವಾಮಿ , ಸ್ಥಳೀಯ ಒಪ್ಪತ್ತಿನಸ್ವಾಮಿ ಮಠದ ಉಪಾಧ್ಯಕ್ಷ ಶಿವಲಿಂಗಪ್ಪ, ಒಪತ್ತಿನಸ್ವಾಮಿ ಮಠದ ನಿರ್ದೇಶಕ ಧನುಶಂಕರ್ ಮಾತನಾಡಿದರು.ಈ ಸಂದರ್ಭದಲ್ಲಿ ಮಂಜುನಾಥ, ಎಚ್.ಪಿ. ಜಗದೀಶ್, ಸಿ. ಬಸವರಾಜಪ್ಪ, ಎ.ಎಸ್ ಸಿದ್ದರಾಮೇಶ್, ಆರ್. ಹನುಮಂತಪ್ಪ, ಡಿ. ಪುಟ್ಟಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದರು ವಚನ ಸಂಗೀತ ನಡೆಸಿಕೊಟ್ಟರು. ನಿರೂಪಣೆಯನ್ನು ವೀರೇಶ್ ಕುಮಾರ್ ಮಾಡಿದರು.