ನಿಮ್ಮ ಬದುಕಿಗೆ ನೀವೇ ದಾರಿದೀಪವಾಗಬೇಕು

| Published : May 24 2024, 12:46 AM IST

ಸಾರಾಂಶ

ಗೌತಮ ಬುದ್ಧ ದೇವರು, ಧರ್ಮ ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ಹೆಚು ಹೇಳಲಿಲ್ಲ ಬದಲಾಗಿ ಸರಳ ಜೀವನ ಮತ್ತು ಸನ್ಮಾರ್ಗದ ಬಗ್ಗೆ ಮಾತನಾಡಿದ್ದಾರೆ. ಸೌಹಾರ್ದದಿಂದ ಬಾಳುವುದನ್ನು ಕಲಿತರೆ ಜಗತ್ತಿನ ದುಃಖ ಕಡಿಮೆಯಾಗುತ್ತದೆ ಎಂದು ಸಾರಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಹಾನ್ ಗ್ರಂಥದಲ್ಲಿ ಬರೆದಿದೆ ಎಂದಾಗಲಿ, ಅದು ಸಂಪ್ರಾದಾಯವೆಂದಾಗಲಿ, ಗುರು ಹೇಳಿದರೆಂದಾಗಲಿ ನಂಬಬೇಡಿ. ಬದಲಾಗಿ ಯಾವುದೇ ವಿಷಯವನ್ನು ಪರೀಕ್ಷಿಸಿ, ಪ್ರಮಾಣಿಕರಿಸಿ ಯಾವುದು ಸಮಾಜದ ಶ್ರೇಯಸ್ಸಿಗೆ ಕಾರಣವಾಗುತ್ತದೆಯೋ ಆ ತತ್ವವನ್ನು ನಂಬಿ ನಡೆಯಬೇಕು. ನಿಮ್ಮ ಬದುಕಿಗೆ ನೀವೇ ದಾರಿದೀಪವಾಗಬೇಕು ಎಂಬ ಬುದ್ಧನ ಸಂದೇಶವನ್ನು ಶಾಂತಾ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಕೋಡಿರಂಗಪ್ಪ ತೆರೆದಿಟ್ಟರು.

ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ಸಮೂಹ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಶಾಂತಾ ವಿದ್ಯಾನಿಕೇತನದಲ್ಲಿ ಗುರುವಾರ ಬುದ್ಧ ಜಯಂತಿಯ ಅಂಗವಾಗಿ ಆಯೋಜಿಸಿದ್ದ ಬುದ್ಧ ಸ್ಮರಣೆ ಕಾರ್ಯಕ್ರಮದಲ್ಲಿ ಬುದ್ದನ ವಿಗ್ರಹಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಗೌತಮ ಬುದ್ಧ ಏಷ್ಯಾದ ಬೆಳಕೆನಿಸಿ ಜಗತ್ತಿಗೆ ಜ್ಞಾನ, ವೈಚಾರಿಕತೆ, ಕಾರುಣ್ಯ ಹಾಗೂ ತಾಯ್ತತನದ ಸಂದೇಶ ನೀಡಿದ ಮನುಕುಲದ ಗುರು ಎಂದರು. ಎಲ್ಲವನ್ನೂ ತ್ಯಜಿಸಿದ ರಾಜಕುಮಾರ

ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಅರಮನೆಯಲ್ಲಿ ಹುಟ್ಟಿಬೆಳೆದ ಬುದ್ಧನು ಜಗತ್ತಿನ ದುಖಃಕ್ಕೆ ಪರಿಹಾರ ಹುಡುಕುವ ಸಂಕಲ್ಪದಿಂದ ತನ್ನ ರಾಜ್ಯ, ಮನೆ, ಮಡದಿ ಮಕ್ಕಳು ಸರ್ವಸ್ವವನ್ನು ತ್ಯಾಜಿಸಿ ದೇಶ ಸುತ್ತಿ ಸತ್ಯವನ್ನು ಕಂಡುಕೊಂಡು ಬುದ್ಧನಾಗುತ್ತಾನೆ. ಬುದ್ಧನೆಂದರೆ ಜ್ಞಾನೋದಯ ಕಂಡವನು ಎಂದರ್ಥ. ಆಸೆಯೇ ದುಖಃಕ್ಕೆ ಕಾರಣ, ಆಸೆಯನ್ನು ಮಿತಿಗೊಳಿಸುವುದರಿಂದ ಮನುಷ್ಯ ನೆಮ್ಮದಿ ಕಾಣಬಹುದು. ಇದರಿಂದಾಗಿ ಹಂತಹಂತವಾಗಿ ಇಡೀ ಸಮಾಜ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ ಎಂದರು.

ಸೌಹಾರ್ದದಿಂದ ಬಾಳಬೇಕು

ಯಾರೋ ಮಹಾತ್ಮರು ಬಂದು ನಿಮ್ಮನ್ನು ಬೆಳೆಸಲಾರರು, ಆದುದರಿಂದ ನಿಮ್ಮ ಬದುಕಿಗೆ ನೀವೇ ದಾರಿದೀಪಗಳಾಗಬೇಕು ಎಂಬುದು ಬುದ್ಧನ ಸಂದೇಶ. ಜ್ಞಾನ, ಸತ್ಯ, ಅಹಿಂಸೆ, ಕಾರುಣ್ಯ ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದರಿಂದ ಲೋಕಕಲ್ಯಾಣವಾಗುತ್ತದೆ. ಆದ್ದರಿಂದ ನಾವೆಲ್ಲರೂ ಪರಸ್ಪರ ಸಹಕಾರ ಮತ್ತು ಸೌಹಾರ್ದದಿಂದ ಬಾಳುವುದನ್ನು ಕಲಿತರೆ ಜಗತ್ತಿನ ದುಃಖ ಕಡಿಮೆಯಾಗುತ್ತದೆ ಎಂದು ಬುದ್ಧ ಹೇಳಿದ್ದಾನೆ. ಯಾವುದೇ ಸಂದರ್ಭದಲ್ಲಿ ನಾವು ಸಹನೆ ಕಳೆದುಕೊಳ್ಳದೆ, ಅತಿರೇಖಕ್ಕೆ ಹೋಗದೆ ಸುವರ್ಣ ಮಾರ್ಗದಲ್ಲಿ ಬಾಳಬೇಕೆಂದು ಬೋಧಿಸಿದ್ದಾರೆ. ಗೌತಮ ಬುದ್ಧ ದೇವರು, ಧರ್ಮ ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ಹೆಚು ಹೇಳಲಿಲ್ಲ ಬದಲಾಗಿ ಸರಳ ಜೀವನ ಮತ್ತು ಸನ್ಮಾರ್ಗದ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿಸಿದರು. ಸಮಸಮಾಜ ನಿರ್ಮಾಣ ಮಾಡಿ

ಬುದ್ಧನ ತತ್ವ ಮತ್ತು ವಿಚಾರಗಳು ಜಗತ್ತಿನ ಹಲವು ದೇಶಗಳಲ್ಲಿ ಮಾನ್ಯತೆ ಹೊಂದಿದ್ದು ಅವರ ವಿಚಾರಗಳು ಯಾವುದೇ ಧರ್ಮ ಅಥವಾ ತತ್ವ ಆಚರಣೆಗೆ ವಿರುದ್ಧವಾಗಿರದೆ ಮನುಷ್ಯ ಜೀವನದ ಪರವಾಗಿರುವುದರಿಂದ ಬುದ್ಧನ ಜೀವನ ತತ್ವಗಳನ್ನು ಅಧ್ಯಯನ ಮಾಡಿ ಅಳವಡಿಸಿಕೊಳ್ಳುವ ಮೂಲಕ ಮಾನವಿಯತೆ ನೆಲೆಯ ಸಮಸಮಾಜ ನಿರ್ಮಾಣಕ್ಕೆ ನಾವೆಲ್ಲರು ಒಂದು ಹನಿಯಷ್ಟು ಕೊಡುಗೆ ನೀಡಿ ನಮ್ಮ ಬದುಕಿನ ಧನ್ಯತೆಗೆ ಮುಂದಾಗೋಣ ಎಂಬ ಕಿವಿಮಾತನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಶಾಂತಾ ವಿದ್ಯಾನಿಕೇತನದ ಉಪಪ್ರಾಂಶುಪಾಲೆ ಕಲ್ಯಾಣಿ, ಆಡಳಿತಾಧಿಕಾರಿ ಕೆನೆಥ್, ಅಧ್ಯಾಪಕರಾದ ಅಂಬಿಕಾ, ರಾಧ, ರಂಗರಾಜನ್, ಕಲೀಂ ಉಲ್ಲಾ, ಲವಕುಮಾರ್, ಸಂದೇಶ್, ರಾಜೇಶ್, ಶಿವು ಮತ್ತು ಶಾಂತಾ ವಿದ್ಯಾನಿಕೇತನದ ವಿದ್ಯಾರ್ಥಿಗಳು ಇದ್ದರು.