ಯಾರೇ ಸಾಮರಸ್ಯಕ್ಕೆ ಕದಡಿದರೂ ಒಳಗೆ ಹಾಕಿಸ್ತೀನಿ

| Published : Sep 02 2025, 01:00 AM IST

ಯಾರೇ ಸಾಮರಸ್ಯಕ್ಕೆ ಕದಡಿದರೂ ಒಳಗೆ ಹಾಕಿಸ್ತೀನಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ- ಮುಸ್ಲಿಂ ಯಾರೇ ಆಗಿರಲಿ, ಎಲ್ಲರೂ ನೆಮ್ಮದಿ ಹಾಗೂ ಸಾಮರಸ್ಯದಿಂದ ಬಾಳಬೇಕು. ಯಾರೇ ಆಗಿರಲಿ ಎಲ್ಲಾದರೂ ಕಾಲು ಕೆರೆದು ಜಗಳ ಮಾಡಿದರೆ ನಾನಂತೂ ಸುಮ್ಮನಿರಲ್ಲ. ಒಳಗೆ ಹಾಕಿಸುತ್ತೇನಷ್ಟೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದ್ದಾರೆ.

- ಸತೀಶ ಪೂಜಾರಿ ಇತರರ ವಿರುದ್ಧ ಸಚಿವ ಎಸ್ಸೆಸ್ಸೆಂ ವಾಗ್ದಾಳಿ

- ಮಸೀದಿ ಪಕ್ಕವೇ ಗಣೇಶ ಇಡಬೇಕಾ ಎಂದು ತರಾಟೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿಂದೂ- ಮುಸ್ಲಿಂ ಯಾರೇ ಆಗಿರಲಿ, ಎಲ್ಲರೂ ನೆಮ್ಮದಿ ಹಾಗೂ ಸಾಮರಸ್ಯದಿಂದ ಬಾಳಬೇಕು. ಯಾರೇ ಆಗಿರಲಿ ಎಲ್ಲಾದರೂ ಕಾಲು ಕೆರೆದು ಜಗಳ ಮಾಡಿದರೆ ನಾನಂತೂ ಸುಮ್ಮನಿರಲ್ಲ. ಒಳಗೆ ಹಾಕಿಸುತ್ತೇನಷ್ಟೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದರು.

ನಗರದ ಗೃಹ ಕಚೇರಿ ಶಿವ ಪಾರ್ವತಿಯಲ್ಲಿ ಸೋಮವಾರ ಮಟ್ಟಿಕಲ್ಲು ಪ್ರದೇಶದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ವಿವಾದಿತ ಫ್ಲೆಕ್ಸ್ ತೆರವಿಗೆ ವಿರೋಧಿಸಿರುವ ಹಿನ್ನೆಲೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹಿಂದೂ ಜಾಗರಣಾ ವೇದಿಕೆಯ ಸತೀಶ ಪೂಜಾರಿ ಕುರಿತು ಮಾತನಾಡಿದ ಸಚಿವರು, ಅವರಿಗೆ ಬೇರೆ ಕೆಲಸವೇ ಇಲ್ಲವೇನು? ಬಾ ನನ್ನ ಮನೆ ಮುಂದೆ, ಮನೆ ಮುಂದಿನ ಪಾರ್ಕ್‌ನಲ್ಲಿ ಫ್ಲೆಕ್ಸ್‌ಗಳನ್ನು ಹಾಕಿಸು. ಮಟ್ಟಿಕಲ್ಲು ಪ್ರದೇಶದಲ್ಲಿ ಹಿಂದು-ಮುಸ್ಲಿಂ ಎಲ್ಲರೂ ಇದ್ದಾರೆ. ಅಲ್ಲಿ ಹೋಗಿ ಮುಸ್ಲಿಮರ ಮನೆ ಮುಂದೆಯೇ ಫ್ಲೆಕ್ಸ್ ಹಾಕಬೇಕಾ? ಬೇರೆ ಕೆಲಸ ಇಲ್ಲವಾ? ಅಲ್ಲಿ ಏನಾದರೂ ಒಬ್ಬನೇ ಒಬ್ಬ ಮುಸ್ಲಿಂ ಅವತ್ತು ಇದ್ದಿದ್ದರೂ ದೊಡ್ಡ ರಂಪರಾಡಿ ಮಾಡುತ್ತಿದ್ದರು. ಯಾವೊಬ್ಬ ಮುಸ್ಲಿಮರೂ ಅವತ್ತು ಅಲ್ಲಿರಲಿಲ್ಲ. ಮುಸ್ಲಿಮರು ಬರಲಿ ಬರಲಿ ಅಂತಲೇ ಕಾಯುತ್ತಿದ್ದರು ಎಂದು ಸಚಿವರು ಕಿಡಿಕಾರಿದರು.

ಮಟ್ಟಿಕಲ್ಲು ಪ್ರದೇಶ ನೀವು ನೋಡಿದ್ದೀರಾ? ಎಲ್ಲಿದೆ ಅಂತಾ ನಿಮಗೇನಾದರೂ ಗೊತ್ತಾ? ಹಿಂದೂ-ಮುಸ್ಲಿಂ ಇಬ್ಬರೂ ಅಲ್ಲಿ ವಾಸಿಸುತ್ತಾರೆ. ಇವನು ಯಾವ ಏರಿಯಾದವರು? ಅಲ್ಲಿ ಇವನದೇನು ಕೆಲಸ? ಮುಸ್ಲಿಂ ಹಬ್ಬದ ದಿನವೇ ಗಣಪತಿ ಬಿಡಬೇಕಾ? ಅಲ್ಲಿ ಮಸೀದಿ ಪಕ್ಕವೇ ಗಣೇಶ ಇಡಬೇಕಾ? ಅಲ್ಲೇ ಕೇಕೆ ಹೊಡೆಯಬೇಕಾ ಎಂದು ಅವರು ಸತೀಶ ಪೂಜಾರಿ ವಿರುದ್ಧ ಎಸ್ಸೆಸ್ಸೆಂ ಹರಿಹಾಯ್ದರು.

ಹಿಂದೂಗಳಾಗಲೀ, ಮುಸ್ಲಿಮರಾಗಲೀ ದಾವಣಗೆರೆಯಲ್ಲಿ ಅಣ್ಣ- ತಮ್ಮಂದಿರಂತೆ ಬಾಳುತ್ತಿದ್ದಾರೆ. ಅದನ್ನು ಹಾಳು ಮಾಡುವುದು ಬೇಡ. 1994ರಲ್ಲಿ ಆಗಿದ್ದನ್ನೆಲ್ಲಾ ನಾವು, ನೀವುಗಳೂ ನೋಡಿದ್ದೇವೆ. ಅಂತಹದ್ದೆಲ್ಲಾ ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಇಂತಹ ಘಟನೆಗಳಿಂದ ಯಾರೂ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದು ಚಾಟಿ ಬೀಸಿದರು.

ಈ ಸಂದರ್ಭ ಮಾಜಿ ಮೇಯರ್ ಕೆ.ಚಮನ್ ಸಾಬ್‌, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಮಾಜಿ ಸದಸ್ಯರಾದ ಜಿ.ಎಸ್. ಮಂಜುನಾಥ ಗಡಿಗುಡಾಳ, ನಾಗರಾಜ, ರಾಘವೇಂದ್ರ ಗೌಡ, ಬೂದಾಳ ಬಾಬು, ಮಾಗಾನಹಳ್ಳಿ ಬಿ.ಕೆ.ಪರಶುರಾಮ ಇತರರು ಇದ್ದರು.

- - -

(ಸಾಂದರ್ಭಿಕ ಚಿತ್ರ)