ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ / ಭದ್ರಾವತಿ / ಸಾಗರ
ಕಾಂಗ್ರೆಸ್ ಅಭ್ಯರ್ಥಿ ಪರ ಸ್ಟಾರ್ ಪ್ರಚಾರಕರಾಗಿ ರಾಹುಲ್ ಗಾಂಧಿ, ಸಿನಿಮಾ ನಟ, ನಟಿಯರು ಇದ್ದಾರೆ, ಬಿಜೆಪಿ ಅಭ್ಯರ್ಥಿ ಪರ ನರೇಂದ್ರ ಮೋದಿ, ನಡ್ಡಾ, ಕುಮಾರಸ್ವಾಮಿ, ಯಡಿಯೂರಪ್ಪ, ನಟಿ ತಾರಾ ಬಂದು ಹೋಗಿದ್ದಾರೆ. ಆದರೆ, ನನ್ನ ಪರವಾಗಿ ಯುವಕರು, ಹಿರಿಯರು, ತಾಯಂದಿರೇ ಸ್ಟಾರ್ ಪ್ರಚಾರಕರಾಗಿದ್ದಾರೆ. ನಿಮ್ಮೆಲ್ಲ ಬೆಂಬಲದಿಂದ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಎಂದು ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.ಶಿವಮೊಗ್ಗ ತಾಲೂಕು ಮಂಡೇನಕೊಪ್ಪದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ಎಲ್ಲ ಕ್ಷೇತ್ರದಲ್ಲೂ ಅನೇಕರು, ನನ್ನ ಮುಖ ನೋಡದವರು ನನ್ನ ಪರ ನಿಂತು ಪ್ರಚಾರ ಮಾಡುತ್ತಿದ್ದಾರೆ. 2 ಸಾವಿರಕ್ಕೂ ಹೆಚ್ಚು ಹಳ್ಳಿಯಲ್ಲಿರುವ ಯುವ ಶಕ್ತಿ ಇದೆ. ರೈತ ಶಕ್ತಿ, ಮಹಿಳಾ ಶಕ್ತಿಗಳು, ಬಡವರು ಈ ಬಾರಿ ಈಶ್ವರಪ್ಪರನ್ನು ಗೆಲ್ಲಿಸುತ್ತೇವೆ ಎಂದು ಮುಂದೆ ಬಂದಿದ್ದಾರೆ. ಇವರೆಲ್ಲರ ಋಣವನ್ನು ನಾನು ಯಾವ ರೀತಿ ತೀರಿಸಬೇಕೋ ನನಗೆ ಗೊತ್ತಾಗುತ್ತಿಲ್ಲ ಎಂದರು.
ಸಕ್ಕರೆ ಕಾರ್ಖಾನೆ ರೈತರನ್ನು ಒಕ್ಕಲೆಬ್ಬಿಸಲು ನಾನು ಬಿಡಲ್ಲ:ನಾನು ಶಾಸಕರಾಗಿನಿಂದಲೂ ಸಕ್ಕರೆ ಕಾರ್ಖಾನೆ ಜಾಗದಲ್ಲಿ ರೈತರು ಸಾಗವಳಿ ಮಾಡಿಕೊಂಡಿಕೊಂಡು ಬಂದಿದ್ದೀರಿ, ನಿಮ್ಮನ್ನು ಆಗಲೂ ಒಕ್ಕಲೆಬ್ಬಿಸಲು ಬಿಟ್ಟಿಲ್ಲ. ಈಗಲೂ ಬಿಡಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಕೆಲ ಹಿತಾಶಕ್ತಿಗಳು ಆ ಭೂಮಿಯನ್ನು ಸ್ವಂತ ಮಾಡಿಕೊಳ್ಳಲು ನೋಡುತ್ತಿದ್ದಾರೆ. ಆದರೆ, ಆ ಭೂಮಿಯನ್ನೇ ನೆಚ್ಚಿಕೊಂಡು ಅನೇಕರು ಜೀವನ ನಡೆಸುತ್ತಿದ್ದಾರೆ. ಎಷ್ಟೇ ಪ್ರಭಾವಿ ವ್ಯಕ್ತಿಗಳು ಬಂದರೂ ನಿಮ್ಮಿಂದ ಆ ಭೂಮಿಯನ್ನು ಕಿತ್ತುಕೊಳ್ಳಲು ನಾನು ಬಿಡಲ್ಲ. ನಿಮ್ಮ ಜೊತೆ ನಾನು ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.ಭದ್ರಾವತಿಯಲ್ಲಿ ವಿಐಎಸ್‌ಎಲ್ ಸಮಸ್ಯೆ, ಶಿವಮೊಗ್ಗ ಗ್ರಾಮಾಂತರ, ಸಾಗರ, ಶಿಕಾರಿಪುರದಲ್ಲಿ ಬಗರ್‌ಹುಕುಂ ಸಮಸ್ಯೆ ಇದೆ. ಈ ಸಮಸ್ಯೆಗಳು ಬಗೆಹರಿಸಬೇಕಾದರೆ ಈಶ್ವರಪ್ಪ ಎಂಪಿ ಆಗಬೇಕು ಎಂದು ಜನರೇ ಏಳುತ್ತಿದ್ದಾರೆ. ಹೀಗಾಗಿ ನನ್ನ ಗೆಲುವು ಖಚಿತ ಎಂದು ತಿಳಿಸಿದರು.
ಗೂಳಿಹಟ್ಟಿ ಶೇಖರ್ ಅವರು ದಲಿತ ಸಮಾಜದಿಂದ ಬಂದವರು. ಅವರು ಸಚಿವರು ಆಗಿದ್ದರು. ಅವರು ಒಂದು ತಿಂಗಳಿಂದ ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ. ಈಶ್ವರಪ್ಪ ಅವರನ್ನು ಗೆಲ್ಲಿಸಿಯೇ ಇಲ್ಲಿಂದ ಹೋಗುತ್ತೇನೆ ಎಂದು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಅದೇ ರೀತಿ ಅನರಕ ವರ್ಷದಿಂದ ರೈತರ ಪರ ಹೋರಾಟ ಮಾಡಿಕೊಂಡು ಬಂದಿರುವ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರೂ ಆಗಿದ್ದ ತೀ.ನಾ.ಶ್ರೀನಿವಾಸ್ ಅವರು ನನ್ನ ಜೊತೆ ಬಂದಿರುವುದು ಸಂತಸ ತಂದಿದೆ ಎಂದರು.ನನಗೆ ಮೂರೂ ಪಕ್ಷದ ಅದೃಶ್ಯ ಮತದಾರರ ಬಲವಿದೆ ಈಶ್ವರಪ್ಪ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರು ಶನಿವಾರ ಪಟ್ಟಣದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೂ ಎರಡೂ ಪಕ್ಷದವರೂ ನನ್ನ ಬೆಂಬಲಕ್ಕೆ ಪರೋಕ್ಷವಾಗಿ ನಿಂತಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಭರವಸೆ ನೀಡಿದ್ದಾರೆ. ಕಾಂಗ್ರೇಸ್‍ನಲ್ಲಿಯೂ ಒಂದು ಬಣ ನನ್ನನ್ನು ಬೆಂಬಲಿಸುತ್ತಿದೆ. ಮುಖ್ಯವಾಗಿ ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ. ಸಹಜವಾಗಿ ಒಕ್ಕಲಿಗ ಸಮುದಾಯ ಬಿಜೆಪಿ ಮೇಲೆ ಮುನಿಸಿಕೊಂಡಿದ್ದಾರೆ. ಒಕ್ಕಲಿಗ ಸಮುದಾಯ ನನ್ನ ಕೈಹಿಡಿಯಲಿದ್ದಾರೆ ಎಂದು ಹೇಳಿದರು.ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಓಡಾಡಿದ್ದೇನೆ. ಅನೇಕ ಭಾಗಗಳಲ್ಲಿ ನನಗೆ ಪರಿಚಯವೇ ಇಲ್ಲ. ಆದರೂ ನನ್ನ ಬಳಿ ತಂಡೋಪತಂಡವಾಗಿ ಬಂದು ಬೆಂಬಲ ಸೂಚಿಸುತ್ತಿರುವುದು ಸಂತೋಷ ತಂದಿದೆ. ಹಾಗಾಗಿ ಈ ಚುನಾವಣೆಯಲ್ಲಿ ಅದೃಶ್ಯ ಮತದಾರರು ನನ್ನ ಕೈಹಿಡಿಯಲಿದ್ದು, ಗೆಲುವು ನಿಶ್ಚಿತ. ಮತದಾರರ ನಿರೀಕ್ಷೆಯೂ ನನ್ನ ಗೆಲುವೇ ಆಗಿದೆ. ಎರಡನೇ ಸ್ಥಾನಕ್ಕಾಗಿ ಬಿಜೆಪಿ ಮತ್ತು ಕಾಂಗ್ರೇಸ್ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಎಸ್.ವಿ.ಕೃಷ್ಣಮೂರ್ತಿ, ನಗರಸಭೆ ಮಾಜಿ ಸದಸ್ಯರಾದ ಎಸ್.ಎಲ್.ಮಂಜುನಾಥ್, ಕಸ್ತೂರಿ ಇನ್ನಿತರರು ಹಾಜರಿದ್ದರು.ತಮಿಳು ಸಮುದಾಯದ ಬೆಂಬಲ: ತಮಿಳು ಸಮಾಜದ ಎಲ್ಲಾ ಸಮುದಾಯಗಳಿಗೆ ವೈಯುಕ್ತಿಕ ಹಾಗೂ ಸರ್ಕಾರದ ನೆರವು ಕೊಡಿಸಿದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿರುವ ಕೆ.ಎಸ್.ಈಶ್ವರಪ್ಪ ಅವರನ್ನು ಬೆಂಬಲಿಸುವಂತೆ ತಮಿಳು ಸಮುದಾಯಗಳ ಒಕ್ಕೂಟದ ಮುಖಂಡ ಎಸ್.ಮಂಜುನಾಥ್ ಮನವಿ ಮಾಡಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ತಮಿಳು ಸಮಾಜದ ಎಲ್ಲಾ ಸಮುದಾಯಗಳಿಗೆ ವೈಯುಕ್ತಿಕವಾಗಿ ಹಾಗೂ ಸರ್ಕಾರದಿಂದ ಅನುದಾನವನ್ನು ಕೊಡಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಕಾರಣೀಭೂತರಾದ ಕೆ.ಎಸ್.ಈಶ್ವರಪ್ಪನವರಿಗೆ ಇಡೀ ತಮಿಳು ಸಮುದಾಯ ಒಟ್ಟಾರೆಯಾಗಿ ಬೆಂಬಲಿಸಲಿದೆ ಎಂದರು.
ಅಗಮುಡಿ, ಮೊದಲಿಯಾರ್, ಗೌಂಡರ್, ಆದಿದ್ರಾವಿಡ, ಯಾದವ, ಕೋಣರ್ ಸೇರಿದಂತೆ ಸಮುದಾಯದ ಎಲ್ಲಾ ವರ್ಗಗಳಿಗೆ ಸಾಕಷ್ಟು ನೆರವು ನೀಡುತ್ತ ತಮಿಳು ಸಮಾಜ ವನ್ನು ಅತ್ಯಂತ ಪ್ರೀತಿಯಿಂದ ಗೌರವಿಸಿದ ಕೆ.ಎಸ್.ಈಶ್ವರಪ್ಪ ಅವರನ್ನು ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳಿಂದ ಜಯಗಳಿಸಲು ಕಾರಣರಾಗಬೇಕು ಎಂದು ಮನವಿ ಮಾಡಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಭೂಪಾಲ್, ಚೆಲುವರಾಜ್, ಕುಮಾರ್, ಎನ್.ಶೇಖರ್, ಪ್ರಭಾಕರ್, ರವಿ, ಉಮೇಶ್, ಕೆ.ಮಣಿ, ಶ್ರೀನಿವಾಸ್, ಗೋಪಾಲ್ ಇನ್ನಿತರರು ಉಪಸ್ಥಿತರಿದ್ದರು.ಸರ್ವಾಧಿಕಾರಿ ಕುಟುಂಬ ರಾಜಕಾರಣ ಅಂತ್ಯಗೊಳಿಸಲು ಕರೆಭದ್ರಾವತಿ: ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕೀಯ ತಾಂಡವಾಡುತ್ತಿದ್ದು, ಅದನ್ನು ಅಂತ್ಯಗೊಳಿಸುವುದೇ ಮುಖ್ಯ ಗುರಿಯಾಗಿದೆ. ಬಡವರಿಗೆ, ನಿರ್ಗತಿಕರಿಗೆ ಸೇರಬೇಕಾದ ಸವಲತ್ತುಗಳು ಯಾವುದು ಸೇರದಂತಾಗಿದೆ ಎಂದು ಲೋಕಸಭೆ ಚುನಾವಣೆ ಪಕ್ಷೇತರ ಅಭ್ಯರ್ಥಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದರು.ಅವರು ಶನಿವಾರ ನಗರದ ವಿವಿಧ ರಸ್ತೆಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು. ಈ ಚುನಾವಣೆಯಲ್ಲಿ ಮತದಾರರು ನಮ್ಮನ್ನು ಬೆಂಬಲಿಸುವ ಮೂಲಕ ಹಿಂದುತ್ವಕ್ಕೆ ಮತ್ತಷ್ಟು ಶಕ್ತಿ ತುಂಬುವ ಜೊತೆಗೆ ಸರ್ವಾಧಿಕಾರಿಗಳ ಹಿಡಿತಕ್ಕೆ ಅಧಿಕಾರ ಸಿಗದಂತೆ ಎಚ್ಚರವಹಿಸಬೇಕೆಂದು ಮನವಿ ಮಾಡಿದರು.ನಗರಸಭೆ ವ್ಯಾಪ್ತಿಯ ಬಿ.ಎಚ್ ರಸ್ತೆ ಕಡದಕಟ್ಟೆಯಿಂದ ಆರಂಭಗೊಂಡ ರೋಡ್ ಶೋ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಮುಂಭಾಗ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತದಿಂದ ರಂಗಪ್ಪ ವೃತ್ತದವರೆಗೆ ಸಾಗಿತು.
ಪ್ರಮುಖರಾದ ಎಂ. ಪ್ರಭಾಕರ್, ಬಿ.ಎಸ್ ನಾರಾಯಣಪ್ಪ, ಪ್ರಜಾಪ್ರತಿನಿಧಿ ಸುರೇಶ್, ಬಿ.ವಿ.ಚಂದನ್ ರಾವ್, ವಿಜಯ್, ರಾಮನಾಥ್ ಬರ್ಗೆ, ಈಶ್ವರಪ್ಪ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಪಾಲ್ಗೊಂಡಿದ್ದರು.