ಯುವ ಕ್ರಿಕೆಟಿಗರಿಗೆ ಪ್ರತಿಭೆ ಇದ್ದರೂ ಅಗತ್ಯ ಸೌಕರ್ಯವಿಲ್ಲ

| Published : May 04 2025, 01:31 AM IST

ಸಾರಾಂಶ

ಇತ್ತೀಚೆಗೆ ಅರಸೀಕೆರೆ ತಾಲೂಕಿನ ಯಾವೊಬ್ಬ ಕ್ರಿಕೆಟ್ ಆಟಗಾರ ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸುವ ಅವಕಾಶ ದೊರೆಯದೆರುವುದಕ್ಕೆ ಕಾರಣ ಹಲವು ಎಂಬುದೇ ವಿಷಾದ ಸಂಗತಿ. ಪ್ರತಿಭಾವಂತ ಉತ್ಸಾಹಿ ಯುವ ಕ್ರಿಕೆಟಿಗರಿಗೆ ತಾಲೂಕಿನಲ್ಲಿ ಕೊರತೆ ಇಲ್ಲ, ಇದಕ್ಕೆ ಪೋಷಕರ ಸಹಕಾರ ಕೂಡ ದೊರೆಯುತ್ತಿದೆ, ಆದರೆ ಇಂಥ ಯುವ ಕ್ರಿಕೆಟ್ ಆಟಗಾರರು ಜಿಲ್ಲೆ ಮತ್ತು ವಿಭಾಗ ಮಟ್ಟದ ಕ್ರೀಡಾಕೂಟಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದರೂ ಮುಂದಿನ ಅಂತ ಪ್ರವೇಶಿಸಲು ಸೂಕ್ತ ಮಾರ್ಗದರ್ಶನವಾಗಲಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುವಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ವಿಫಲವಾಗಿರುವುದು ಬೇಸರದ ಸಂಗತಿ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಭಾರತೀಯ ಕ್ರಿಕೆಟ್ ರಂಗದ ದಂತಕಥೆ ಜಾವಗಲ್ ಶ್ರೀನಾಥ್, ಪ್ರತಿಭಾವಂತ ಆಟಗಾರ ಡೇವಿಡ್ ಜಾನ್ಸನ್ ರಂತ ಹೆಸರಾಂತ ಕ್ರಿಕೆಟ್ ಆಟಗಾರರನ್ನು ದೇಶಕ್ಕೆ ಕೊಡುಗೆ ನೀಡಿದ ಹಿರಿಮೆ ಅರಸೀಕೆರೆಗೆ ಇದೆ.

ಇಂಥ ಲೆಜೆಂಡ್ ಆಟಗಾರರ ನಂತರ ತಾಲೂಕಿನ ಯಾವೊಬ್ಬ ಕ್ರಿಕೆಟ್ ಆಟಗಾರ ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸುವ ಅವಕಾಶ ದೊರೆಯದೆರುವುದಕ್ಕೆ ಕಾರಣ ಹಲವು ಎಂಬುದೇ ವಿಷಾದ ಸಂಗತಿ. ಪ್ರತಿಭಾವಂತ ಉತ್ಸಾಹಿ ಯುವ ಕ್ರಿಕೆಟಿಗರಿಗೆ ತಾಲೂಕಿನಲ್ಲಿ ಕೊರತೆ ಇಲ್ಲ, ಇದಕ್ಕೆ ಪೋಷಕರ ಸಹಕಾರ ಕೂಡ ದೊರೆಯುತ್ತಿದೆ, ಆದರೆ ಇಂಥ ಯುವ ಕ್ರಿಕೆಟ್ ಆಟಗಾರರು ಜಿಲ್ಲೆ ಮತ್ತು ವಿಭಾಗ ಮಟ್ಟದ ಕ್ರೀಡಾಕೂಟಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದರೂ ಮುಂದಿನ ಅಂತ ಪ್ರವೇಶಿಸಲು ಸೂಕ್ತ ಮಾರ್ಗದರ್ಶನವಾಗಲಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುವಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ವಿಫಲವಾಗಿರುವುದು ಬೇಸರದ ಸಂಗತಿ.

ಸ್ಥಳೀಯ ಎಫ್‌ಯುಸಿಸಿ ಕ್ರಿಕೆಟ್ ಕ್ಲಬ್ ಸಕ್ರಿಯವಾಗಿದೆ. ಈ ಕ್ಲಬ್ ಆಶ್ರಯದಲ್ಲಿ ಹತ್ತಾರು ಯುವ ಆಟಗಾರರು ನಿತ್ಯ ಅಭ್ಯಾಸ ಮಾಡುವುದಲ್ಲದೆ ಕರ್ನಾಟಕ ಕ್ರಿಕೆಟ್ ಬೋರ್ಡ್ ಆಯೋಜಿಸುವ ಜಿಲ್ಲಾ ಹಾಗೂ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಗಮನಾರ್ಹ ಸಾಧನೆ ತೋರಿದರೂ ರಾಜ್ಯಮಟ್ಟದಲ್ಲಿ ಎದುರಾಗುವ ತಂಡಗಳ ವಿರುದ್ಧ ಇವರ ಆಟ ಮಂಕೆನಿಸುತ್ತದೆ. ಇದಕ್ಕೆ ಕಾರಣ ಬೆಂಗಳೂರು ಮೈಸೂರಿನಂತ ಮಹಾನಗರಗಳಲ್ಲಿ ದೊರೆಯುವ ಉತ್ತೇಜನ ಮತ್ತು ಅದಕ್ಕೆ ಪೂರಕವಾದ ಸೌಕರ್ಯಗಳ ಮುಂದೆ, ಕ್ರೀಡಾಂಗಣವಿರಲಿ, ಕನಿಷ್ಠ ನಿತ್ಯ ಅಭ್ಯಾಸಕ್ಕಾದರೂ ಪಿಚ್ ಸೌಲಭ್ಯವೂ ಇಲ್ಲದೆ ಆಡುತ್ತಿರುವ ಗ್ರಾಮೀಣ ಭಾಗದ ಕ್ರಿಕೆಟ್ ಆಟಗಾರರ ಪ್ರತಿಭೆ ಕಮರಿ ಹೋಗುತ್ತಿದ್ದು ನೋವಿನ ಸಂಗತಿಯಾಗಿದೆ.

ತಾಲೂಕಿನ ಹಿರಿಯ ಕ್ರಿಕೆಟ್ ಆಟಗಾರ ಹಾಗೂ ರಾಜ್ಯ ಕ್ರಿಕೆಟ್ ಬೋರ್ಡ್‌ನ ಶಿವಮೊಗ್ಗ ವಲಯದ ಖಜಾಂಚಿ ತೋಂಟೇಶ್ ಬಾಬು ಪತ್ರಿಕೆಯೊಂದಿಗೆ ಮಾತನಾಡಿ, ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಬೋರ್ಡ್‌ನ ಸಂಸ್ಥೆಗಳು ರಾಜ್ಯ ಮತ್ತು ದೇಶದಲ್ಲಿ ಕ್ರಿಕೆಟ್ ಬೆಳವಣಿಗೆಗೆ ನೀಡುತ್ತಿರುವ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ. ನಗರ ಪ್ರದೇಶದಂತೆ ಗ್ರಾಮೀಣ ಭಾಗದ ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನು ಗುರುತಿಸಲು ತಾಲೂಕು, ಜಿಲ್ಲೆ, ವಿಭಾಗ ಹೀಗೆ ಹಲವು ಮಾರ್ಗಗಳ ಮೂಲಕ ಯುವ ಕ್ರಿಕೆಟ್ ಆಟಗಾರರನ್ನು ಗುರುತಿಸುವ ಕೆಲಸ ಮಾಡುತ್ತದೆ. ಆದರೆ ಸಂಬಂಧಪಟ್ಟ ಇಲಾಖೆ ಮತ್ತು ಸ್ಥಳೀಯ ಆಡಳಿತ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರಿಕೆಟ್ ಗೆ ಅರಸೀಕೆರೆ ಕೊಡುಗೆ ಅಪಾರವಾಗಿದೆ. ಇಂತಹ ತಾಲೂಕಿನಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಲು ಹಲವಾರು ಬಾರಿ ಪ್ರಯತ್ನ ಮಾಡಿದರೂ ಕಾರ್ಯಗತವಾಗಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕ ಶಿವಲಿಂಗೇಗೌಡರು ಹಾಗೂ ತಾಲೂಕು ಆಡಳಿತ ನಗರದ ಹೊರವಲಯದಲ್ಲಿ 13 ಎಕರೆ ಜಾಗವನ್ನು ನೀಡಿದರೆ ಕರ್ನಾಟಕ ಕ್ರಿಕೆಟ್ ಬೋರ್ಡ್ ವತಿಯಿಂದ ಹೈಟೆಕ್ ಕ್ರೀಡಾಂಗಣವನ್ನು ನಿರ್ಮಿಸಿಕೊಡಲಾಗುವುದು ಎಂದರು.* ಹೇಳಿಕೆ:ತಾಲೂಕು, ಜಿಲ್ಲೆ ಹಾಗೂ ವಿಭಾಗ ಮಟ್ಟದ ಟೂರ್ನಮೆಂಟ್‌ಗಳಲ್ಲಿ ಹಲವು ತಂಡಗಳನ್ನು ನಮ್ಮ ತಂಡ ಸೋಲಿಸಿದೆ. ನಮಗೆ ನಿತ್ಯ ಅಭ್ಯಾಸಕ್ಕೆ ಕನಿಷ್ಠ 2ರಿಂದ 3 ನೆಟ್ ಗಳು ಒಂದು ಟರ್ಫ್ ಪಿಚ್ ವ್ಯವಸ್ಥೆನಾದರು ಮಾಡಿಕೊಡಬೇಕು.

- ಹರ್ಷ,ಕ್ರಿಕೆಟ್ ಆಟಗಾರ