ಜಿ ಸೋಮಶೇಖರ
ಕೊಟ್ಟೂರು: ಅರ್ಜೆಂಟೇನಾ ದೇಶದ ಅತಿ ಎತ್ತರದ ಮೌಂಟ್ ಅಕಾಂಕಾಗುವಾ ಪರ್ವತವನ್ನು 8 ತಾಸಿನ ಒಳಗೆ ಏರುವ ಮೂಲಕ ಇಲ್ಲಿನ ಯುವ ವೈದ್ಯ ಡಾ.ಕ್ಯಾ.ಸಂತೋಷಕುಮಾರ್ ಸಾಹಸ ಮೆರೆದಿದ್ದಾರೆ.ಡಾ.ಸಂತೋಷಕುಮಾರ್ ಮತ್ತು ಅವರೊಂದಿಗಿದ್ದ 5 ಜನರ ತಂಡ ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ 6961 ಮೀಟರ್ ಎತ್ತರದ ಈ ಪರ್ವತವನ್ನು ಆರೋಹಣಗೈದಿದ್ದಾರೆ. ಈ ಪರ್ವತಾರೋಹಣ ಮಾಡಿದ ತಂಡಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಶುಭಕೋರಿ ಫೆಬ್ರವರಿ 6ರಂದು ಬೀಳ್ಕೊಟ್ಟಿದ್ದರು.
ಕೊಟ್ಟೂರಿನ ಡಾ.ಸಂತೋಷಕುಮಾರ್ 2024ರಲ್ಲಿ ತನ್ನ ಸಹ ಪರ್ವತಾರೋಹಿಗಳೊಂದಿಗೆ 6010- 6330 ಮೀಟರ್ ಎತ್ತರದ ಉತ್ತರಾಖಂಡ ರಾಜ್ಯದ ಗಡ್ವಾಲ್ ಹಿಮಾಲಯಗಳ ಪರ್ವತ ಶಿಖರವನ್ನು ಏರಿದ್ದರು. ಇವರ ಈ ಸಾಧನೆ "ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ "ನಲ್ಲಿ ದಾಖಲಾಗಿದೆ.ಮೂಲತಃ ಕೊಟ್ಟೂರಿನವರಾದ ಡಾ.ಸಂತೋಷಕುಮಾರ್ ರಷ್ಯಾದಲ್ಲಿ ವಿದ್ಯಾರ್ಜನೆಗೈದು, 2020ರಲ್ಲಿ ವಿದೇಶಿ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಂತರ ಕೊಟ್ಟೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದರು. ಬಳಿಕ ದೇಶ ಸೇವೆ ಮಾಡಬೇಕೆಂಬ ಹೆಬ್ಬಯಕೆ ಹೊಂದಿ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವಾ ಪರೀಕ್ಷೆ (ಎಎಫ್‌ಎಂಎಫ್) ಬರೆದು ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ಸಂತೋಷಕುಮಾರ್ ಕೊಟ್ಟೂರಿನ ಬಳಿಯ ಚಿಕ್ಕಜೋಗಿಹಳ್ಳಿ ಜವಾಹರ್ ನವೋದಯದ ವಿದ್ಯಾರ್ಥಿ. ಇವರ ಈ ಸಾಧನೆ ಕೊಟ್ಟೂರು ಮತ್ತು ಸುತ್ತ ಮುತ್ತಲಿನ ಪ್ರದೇಶದ ಯುವ ಸಮೂಹಕ್ಕೆ ಸ್ಫೂರ್ತಿ ಮತ್ತು ಸಮಾಜಕ್ಕೆ ದೃಢ ಸಂಕಲ್ಪ ಮತ್ತು ಸೇವಾ ಮನೋಭಾವನೆಯ ಪ್ರತೀಕವಾಗಿದೆ. ಚಿಕ್ಕಜೋಗಿಹಳ್ಳಿ ಜವಾಹರ್ ನವೋದಯದ ವಿಧ್ಯಾರ್ಥಿಗಳಿಗಂತೂ ಇದು ಹೆಮ್ಮೆಯ ಸಂಗತಿ.
ಪುತ್ರ ಡಾ.ಕ್ಯಾ.ಸಂತೋಷಕುಮಾರ್ ವೈದ್ಯಸೇವೆಯೊಂದಿಗೆ ಪರ್ವತಾರೋಹಣದ ಈ ಬಗೆಯ ಸಾಧನೆಗೈದಿರುವುದು ನಿಜಕ್ಕೂ ನಮಗೆ ಖುಷಿಯ ಸಂಗತಿ. ಮತ್ತಷ್ಟು ಬಗೆಯ ಇಂತಹ ಸಾಧನೆ ತೋರುವುದಕ್ಕೆ ಸಂತೋಷಕುಮಾರ್ ಖಂಡಿತ ಪ್ರತಿಯೊಬ್ಬರಿಗೆ ಪ್ರೇರಕರಾಗಿದ್ದಾರೆ ಎನ್ನುತ್ತಾರೆ ಡಾ.ಕ್ಯಾ.ಸಂತೋಷಕುಮಾರ್ ಅವರ ತಂದೆ ಬಸವರಾಜ್.