ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ತಂಬಾಕು ಬೆಳೆಗೆ ಸರಿಯಾಗಿ ಬೆಲೆ ಸಿಗದೇ ನಷ್ಟವಾದ ಹಿನ್ನೆಲೆ, ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ಯುವ ರೈತನೋರ್ವ ತನ್ನ ಜಮೀನಿನಲ್ಲಿ ಮರಕ್ಕೆನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಾಲಿಗ್ರಾಮ ತಾಲೂಕಿನ ಬೆಟ್ಟಹಳ್ಳಿಯಲ್ಲಿ ನಡೆದಿದೆ.ಬೆಟ್ಟಹಳ್ಳಿ ಗ್ರಾಮದ ಲೇ.ಕೃಷ್ಣೇಗೌಡರ ಪುತ್ರ ಯುವ ರೈತ ಪ್ರವೀಣ (40) ಎಂಬ ಆತ್ಮಹತ್ಯೆ ಮಾಡಿಕೊಂಡವರು.
ಬೆಟ್ಟಹಳ್ಳಿಯಲ್ಲಿ ನಾಲ್ಕು ಎಕರೆ ಜಮೀನು ಇದ್ದು, ತಂಬಾಕು ಬೆಳೆಗಾರರಾಗಿದ್ದು, ಪಕ್ಕದ ತಾಲೂಕು ಸೋಮನಹಳ್ಳಿಯ ಕಾವೇರಿ ಗ್ರಾಮೀಣ ಬ್ಯಾಂಕ್ ಹಾಗೂ ಇತರೆ ಕೈಸಾಲ ಅಂದಾಜು 13 ಲಕ್ಷ ಮಾಡಿದ್ದು, ತಂಬಾಕು ಬೆಳೆ ಈ ಬಾರಿ ಉತ್ತಮ ಬೆಲೆ ಸಿಗದೇ ಸಾಲಗಾರ ಒತ್ತಡ ಹೆಚ್ಚಾದಾಗ ಮನನೊಂದು ಮಂಗಳವಾರ ಸಂಜೆ ನಮ್ಮಜಮೀನಿನಲ್ಲಿರುವ ಬೇವಿನ ಮರಕ್ಕೆನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪ್ರವೀಣ್ ಅಣ್ಣ ಪ್ರದೀಪ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಆತ್ಮಹತ್ಯೆ ಮಾಡಿಕೊಂಡ ಪ್ರವೀಣ್ ಶವವನ್ನು ಸಂಜೆ ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ನಗರ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ತರಲಾಗಿದ್ದು, ಬೆಳಗ್ಗೆ 11ಗಂಟೆಗೆಯಾದರೂ ಮರಣೋತ್ತರ ಪರೀಕ್ಷೆಗಾಗಿ ಕುಟುಂಬಸ್ಥರು ಕಾದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ಸಾ.ರಾ. ಮಹೇಶ್ ಆಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡ ಪ್ರವೀಣ್ ಕುಟುಂಬದವರಿಗೆ ಸಾಂತ್ವನ ಹೇಳಿದರು.
ತಹಸೀಲ್ದಾರ್ ಗೆ ತೀವ್ರ ತರಾಟೆ:
ಮರಣೋತ್ತರ ಪರೀಕ್ಷೆಗಾಗಿ ಸಾಲಿಗ್ರಾಮ ತಾಲೂಕು ಕೇಂದ್ರವಾದರೂ ಕೆ.ಆರ್.ನಗರಕ್ಕೆ ಶವವನ್ನು ಏಕೆ ತಂದಿದ್ದಾರೆ, ಯಾರು ಶವವನ್ನು ತಂದಿದ್ದಾರೆ, ಹಾಗಾದರೆ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವ ಮರಣೋತ್ತರ ಪರೀಕ್ಷೆ ಮಾಡಲು ಸಾದ್ಯವಿಲ್ಲವೇ, ನಾನು ಶಾಸಕನಾಗಿದ್ದಾಗ ಎಲ್ಲವನ್ನೂ ವ್ಯವಸ್ಥೆ ಮಾಡಿದ್ದೆ. ಈಗ ಈ ರೀತಿ ಏಕೆ ಮಾಡುತ್ತಿದ್ದೀರಿ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಗಾರದ ಬಳಿ ಸಾಲಿಗ್ರಾಮ ತಹಸೀಲ್ದಾರ್ ರುಕಿಯಾಬೇಗಂ ಅವರಿಗೆ ತೀವ್ರ ತರಾಟೆ ತಗೆದುಕೊಂಡ ಘಟನೆ ನಡೆಯಿತು.
ಸಾಲಿಗ್ರಾಮ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಸಕಲ ವ್ಯವಸ್ಥೆ ಮಾಡಿದ್ದರೂ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಮೂವತ್ತು ಕಿ.ಮೀ. ದೂರದಿಂದ ಕೆ.ಆರ್. ನಗರಕ್ಕೆ ಶವವನ್ನು ತಂದಿದ್ದಾರೆ. ಯಾರು ಶವವನ್ನು ಮರಣೋತ್ತರ ಪರೀಕ್ಷೆಗೆ ಕೆ.ಆರ್. ನಗರ ಪಟ್ಟಣಕ್ಕೆ ತರಲು ಹೇಳಿದರು. ಸ್ಥಳಕ್ಕೆಕರೆಸಿ ಎಂದರಲ್ಲದೆ, ಸಂಬಂಧಪಟ್ಟ ಪೊಲೀಸ್ ಇಲಾಖೆ ಮತ್ತು ತಾಲೂಕು ಆರೋಗ್ಯಧಿಕಾರಿ ಸ್ಥಳಕ್ಕೆ ಕರೆಸಿ ಅಲ್ಲಿಯವರೆಗೆ ಶವವನ್ನು ತೆಗೆದುಕೊಂಡು ಹೋಗಲು ಬಿಡಲ್ಲ ಎಂದು ಪಟ್ಟು ಹಿಡಿದು ನಿಂತಾಗ ಸಾಲಿಗ್ರಾಮ ತಹಸೀಲ್ದಾರ್ ರುಕಿಯಾಬೇಗಂ ಸಾಕಷ್ಟು ಬಾರಿ ಮಾಜಿ ಸಚಿವ ಸಾ.ರಾ. ಮಹೇಶ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗದ ಹಿನ್ನೆಲೆ ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಡಿ. ರವಿಶಂಕರ್ ಅವರೊಂದಿಗೆ ಚರ್ಚಿಸಿದರು.ಶಾಸಕ ರವಿಶಂಕರ್‌ರಿಂದ ಸಾ.ರಾ. ಮಹೇಶ್ ಮನವೋಲಿಕೆ:
ಪಟ್ಟಣದ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಶಾಸಕ ಡಿ. ರವಿಶಂಕರ್ ಭೇಟಿ ನೀಡಿ ಬೆಟ್ಟಹಳ್ಳಿ ಗ್ರಾಮದ ಯುವ ರೈತ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಬಳಿಕ ಮಾಜಿ ಸಚಿವ ಸಾ.ರಾ. ಮಹೇಶ್ ಅವರ ಬಳಿಹೋಗಿ ಶವವನ್ನು ಸಾಲಿಗ್ರಾಮ ಆಸ್ಪತ್ರೆಯಿಂದ ಕೆ.ಆರ್. ನಗರ ಪಟ್ಟಣಕ್ಕೆ ತಂದಿರುವುದು ನನ್ನ ಗಮನಕ್ಕೆ ಬಂದಿದೆ. ಮುಂದೆ ಈ ರೀತಿಯಾಗದಂತೆ ಕ್ರಮ ವಹಿಸುತ್ತೇನೆ ಎಂದರಲ್ಲದೆ, ಯಾರು ಕಾರಣವಾಗಿದ್ದಾರೆ ಅವರ ವಿರುದ್ಧ ಇಲಾಖಾ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡುತ್ತೇನೆ ಎಂದು ತಿಳಿಸಿ ಮಾಜಿ ಸಚಿವ ಸಾ.ರಾ. ಮಹೇಶ್ ಮನವೊಲಿಸಿದರು.ಬಳಿಕ ಆತ್ಮಹತ್ಯೆ ಮಾಡಿಕೊಂಡ ಪ್ರವೀಣ್ ಶವವನ್ನು ಮಾಜಿ ಸಾ.ರಾ.ಮಹೇಶ್ ನೀಡಿರುವ ಮುಕ್ತಿ ರಥದಲ್ಲಿ ಬೆಟ್ಟಹಳ್ಳಿ ಗ್ರಾಮಕ್ಕೆ ಕೊಂಡೊಯ್ಯಲಾಯಿತು.
ಶಾಸಕ ಡಿ. ರವಿಶಂಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ಯುವ ರೈತ ಪ್ರವೀಣ್ ಅವರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲಾಗುತ್ತದೆ ಎಂದರು.ಮುಂದಿನ ದಿನಗಳಲ್ಲಿ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲು ಸಕಲ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆನೀಡಿದರು.
ಪುರಸಭೆ ಮಾಜಿ ಸದಸ್ಯ ಕೆ.ಎಲ್. ಜಗದೀಶ್, ಪಟ್ಟಣದ ಸಿಪಿಐ ಎಸ್. ಶಿವಪ್ರಕಾಶ್, ಬೆಟ್ಟಹಳ್ಳಿ ಗ್ರಾಮಸ್ಥರು ಇದ್ದರು.ಮುಖ್ಯಾಂಶ
- ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
- ಸಾಲಿಗ್ರಾಮದಿಂದ ಕೆ.ಆರ್. ನಗರಕ್ಕೆ ಮರಣೋತ್ತರ ಪರೀಕ್ಷೆಗೆ- ತಹಸೀಲ್ದಾರ್‌ಗೆ ತೀವ್ರ ತರಾಟೆ ತಗೆದುಕೊಂಡ ಸಾ.ರಾ.ಮಹೇಶ್
- ಸಾ.ರಾ.ಮಹೇಶ್ ಮನವೊಲಿಸಿದ ಶಾಸಕ ಡಿ.ರವಿಶಂಕರ್