ಸುತ್ತಮುತ್ತಲಿನ ಗ್ರಾಮಗಳ ಜನತೆ ಇಲ್ಲಿನ ಶೇಂಗಾ ಬಳ್ಳಿಯಲ್ಲಿ ಗೊಂಚಲು ಗೊಂಚಲು ಕಾಯಿ ನೋಡಲು ಬರುತ್ತಿದ್ದಾರೆ.
ಭೀಮಣ್ಣ ಗಜಾಪುರ ಕೂಡ್ಲಿಗಿ
ಈ ವರ್ಷ ಇಡೀ ರಾಜ್ಯಕ್ಕೆ ಬರ ಆವರಿಸಿ ಬಿತ್ತನೆ ಬೀಜ, ರಸಗೊಬ್ಬರ, ಬಿತ್ತಿದ ಕೂಲಿಯೂ ಸಹ ಸಿಗದೇ ರೈತರು ಕೈಸುಟ್ಟುಕೊಂಡಿದ್ದರೆ, ಇಲ್ಲಿಯ ಯುವ ರೈತನೊಬ್ಬ ತನ್ನ 10 ಎಕರೆ ಭೂಮಿಯಲ್ಲಿ 3 ಲಕ್ಷ ಖರ್ಜು ಮಾಡಿ 100 ಕ್ವಿಂಟಲ್ ಶೇಂಗಾ ಬೆಳೆದಿದ್ದು ಅಂದಾಜು 7 ಲಕ್ಷ ಲಾಭ ಪಡೆದು ಬರಗಾಲಕ್ಕೆ ಸೆಡ್ಡು ಹೊಡೆದಿದ್ದಾನೆ.ತಾಲೂಕು ಕಾನಾಹೊಸಹಳ್ಳಿ ಹೋಬಳಿಯ ಬಯಲು ತುಂಬರಗುದ್ದಿ ಗ್ರಾಮದ ಕೆಂಚಪ್ಪರ ವೀರೇಶ್ ಎನ್ನುವ ಯುವ ರೈತ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದಾನೆ.
ಈ ಬಾರಿ ಕೂಡ್ಲಿಗಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ಎರಡೂ (ಮುಂಗಾರು, ಹಿಂಗಾರು) ಮಳೆ ಸರಿಯಾಗಿ ಬಿದ್ದಿಲ್ಲ, ಇಂತಹದಲ್ಲಿ ಬೆಳೆ ಬೆಳೆಯುವುದು ಕನಸಿನ ಮಾತು ಎಂದು ತಿಳಿದ ವೀರೇಶ್ 3 ಕೊಳವೆಬಾವಿ ಕೊರೆಯಿಸಿದ್ದಾನೆ. ನೀರು ಚೆನ್ನಾಗಿ ಬಂದಿರುವುದರಿಂದ ತನ್ನ 10 ಎಕರೆ ಭೂಮಿಗೆ ಕೊಳವೆ ಬಾವಿಗಳಿಂದ ನೀರುಣಿಸಿ ಶೇಂಗಾ ಬೆಳೆದಿದ್ದಾನೆ. ಒಂದು ಶೇಂಗಾ ಗಿಡದಲ್ಲಿ 40 ರಿಂದ 80 ಗಟ್ಟಿ ಶೇಂಗಾ ಕಾಯಿ ಬಿಟ್ಟಿರುವುದು ರೈತ ವಲಯದಲ್ಲಿ ಅಚ್ಚರಿ ಮೂಡಿಸಿದೆ.ಈಗ ಶೇಂಗಾ ಬೇರ್ಪಡಿಸುವ ಕಾರ್ಯ ಬರದಿಂದ ನಡೆಯುತ್ತಿದೆ. ಸುತ್ತಮುತ್ತಲಿನ ಗ್ರಾಮಗಳ ಜನತೆ ಇಲ್ಲಿನ ಶೇಂಗಾ ಬಳ್ಳಿಯಲ್ಲಿ ಗೊಂಚಲು ಗೊಂಚಲು ಕಾಯಿ ನೋಡಲು ಬರುತ್ತಿದ್ದಾರೆ. ಕೆಲ ಬಳ್ಳಿಗಳಲ್ಲಿ ಮಾತ್ರ 40 ರಿಂದ 50 ಇರಲು ಸಾಧ್ಯ, ಆದರೆ ಇಡೀ ಜಮೀನು ತುಂಬಾ 40 ರಿಂದ 80 ಶೇಂಗಾಕಾಯಿ ಒಂದೇ ಬಳ್ಳಿಯಲ್ಲಿ ಇರುವುದನ್ನು ನೋಡುವುದೇ ಸೋಜಿಗ.
ಶೇಂಗಾ ಕಾಯಿ ಹೆಚ್ಚು ಬಿಡಲು ಜಮೀನಿಗೆ ಎಡೆಕುಂಟೆ ಹೊಡೆಯುವ ಸಂದರ್ಭದಲ್ಲಿ 2 ಬಾರಿ 25 ಚೀಲದಂತೆ 50 ಚೀಲ ಜಿಪ್ಸ್ಂ ಹಾಕಿದ್ದೇನೆ. ಹೀಗಾಗಿ ಹೆಚ್ಚು ಕಾಯಿ ಕಟ್ಟಲು ಸಾಧ್ಯವಾಗಿದೆ. 100 ಕ್ವಿಂಟಲ್ ಶೇಂಗಾ ಆಗಬಹುದು, ಈಗ ಕ್ವಿಂಟಲ್ ಗೆ ₹9 ಸಾವಿರಕ್ಕೂ ಹೆಚ್ಚು ದರ ಇರುವುದರಿಂದ ₹10 ಲಕ್ಷ ಆಗಬಹುದು ಎಂದು ಬಯಲು ತುಂಬರಗುದ್ದಿಯ ರೈತ ಕೆಂಚಪ್ಪರ ವೀರೇಶ್ ತಿಳಿಸಿದ್ದಾರೆ.ನಮ್ಮೂರಿನ ಯುವಕ ಕೆಂಚಪ್ಪರ ವೀರೇಶ್ 10 ಎಕರೆಯಲ್ಲಿ ಬೆಳೆದ ಶೇಂಗಾ ನೋಡಿದರೆ ಎಲ್ಲರಿಗೂ ಆಶ್ಚರ್ಯವಾಗಿದೆ. ಒಂದು ಬಳ್ಳಿಯಲ್ಲಿ ಅರವತ್ತರಿಂದ ಎಂಬತ್ತು ಶೇಂಗಾಕಾಯಿ ಇರುವುದು ಅಚ್ಚರಿ ಮೂಡಿಸಿದೆ ಎಂದು ಬಯಲು ತುಂಬರಗುದ್ದಿಯ ರೈತ ಚಂದ್ರು ತಿಳಿಸಿದ್ದಾರೆ.