ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್‌ನಿಂದ ನೇರುಗಳಲೆ ಶಾಲೆಗೆ ನೆರವು

| Published : Mar 06 2025, 12:32 AM IST

ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್‌ನಿಂದ ನೇರುಗಳಲೆ ಶಾಲೆಗೆ ನೆರವು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ಅಭಿವೃದ್ಧಿಗೆ 25 ಸಾವಿರ ಆರ್ಥಿಕ ನೆರವು ಒದಗಿಸಲಾಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್(ಯಿಫಾ) ವತಿಯಿಂದ ತಾಲೂಕಿನ ನೇರುಗಳಲೆ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ಅಭಿವೃದ್ಧಿಗೆ 25 ಸಾವಿರ ಆರ್ಥಿಕ ನೆರವು ಒದಗಿಸಲಾಯಿತು.

ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಕುರಂ ಹಿರಿಯ ವಿದ್ಯಾರ್ಥಿಗಳ ಟ್ರಸ್ಟ್ ಅಧ್ಯಕ್ಷ ಬೋಜೇಗೌಡ ಅವರಿಗೆ ಯಿಫಾ ಸಂಘಟನೆಯ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಅವರು ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಬೋಜೇಗೌಡ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಿ ಮುಚ್ಚುವ ಹಂತದಲ್ಲಿರುವ ಹಿನ್ನೆಲೆ, ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲೇಬೇಕೆಂಬ ಚಿಂತನೆಯೊಂದಿಗೆ ನೇರುಗಳಲೆಯಲ್ಲಿ ಆಂಗ್ಲಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗಿದೆ ಎಂದರು.

ಈಗಾಗಲೇ 19 ಲಕ್ಷಕ್ಕೂ ಅಧಿಕ ಹಣವನ್ನು ಶಾಲೆಯ ಅಭಿವೃದ್ಧಿಗೆ ವ್ಯಯಿಸಲಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೂ ಪಟ್ಟಣದ ಶಾಲೆಗಳಂತೆಯೇ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸಮಿತಿ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿಯೇ ಪ್ರಥಮ ಎಂಬಂತೆ ಸರ್ಕಾರಿ ಶಾಲೆಗೆ ವಾಹನವನ್ನು ವ್ಯವಸ್ಥೆಗೊಳಿಸಲಾಗಿದೆ. ಆರಂಭಿಕ ವರ್ಷದಲ್ಲಿ ಎಲ್‌ಕೆಜಿಯಲ್ಲಿ 19 ವಿದ್ಯಾರ್ಥಿಗಳಿದ್ದಾರೆ. ಶಿಕ್ಷಣ ವ್ಯಾಪಾರೀಕರಣಗೊಂಡಿರುವ ಪ್ರಸ್ತುತತೆಯಲ್ಲಿ ಶೈಕ್ಷಣಿಕ ಸೇವೆ ಸಲ್ಲಿಸಲು ಅಂಕುರಂ ಟ್ರಸ್ಟ್ ಕೆಲಸ ಮಾಡುತ್ತಿದೆ ಎಂದು ಮಾಹಿತಿಯಿತ್ತರು.

ಯಿಫಾ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಸಂಘಟನೆಯ ಮೂಲಕ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಭೂಕುಸಿತ, ಕೊರೊನಾ ಸಂದರ್ಭ ಸದಸ್ಯರು ಹೆಚ್ಚು ಸೇವೆ ಸಲ್ಲಿಸಿದ್ದಾರೆ. ಇದರೊಂದಿಗೆ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಗದ್ದೆ ನಾಟಿ ಮೂಲಕ ಐಟಿ-ಬಿಟಿ ಕಂಪೆನಿ ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳು ಉಳಿಯಬೇಕು. ಈ ನಿಟ್ಟಿನಲ್ಲಿ ಸಂಘಟನೆಯ ವತಿಯಿಂದ ಮುಂದಿನ ದಿನಗಳಲ್ಲಿಯೂ ನೆರವು ಒದಗಿಸಲಾಗುವುದು ಎಂದರು. ಸಂಘಟನೆಯ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಶಿಕ್ಷಕರಿಗೆ ಅನುಕೂಲವಾಗುವಂತೆ ಚೇರ್‌ಗಳನ್ನು ವಿತರಿಸಲಾಗುವುದು ಎಂದರು.

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಎಸ್.ಎಂ. ಡಿಸಿಲ್ವಾ, ವಿನಯ್ ಸಂಭ್ರಮ್, ಎ.ಹೆಚ್. ತಿಮ್ಮಯ್ಯ, ಅಜಿತ್‌ಕುಮಾರ್, ಅನಿಲ್, ಶೈಲಾ, ಶಿಕ್ಷಕ ರಮೇಶ್, ಯಿಫಾ ಸಂಘಟನೆಯ ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ ಸೇರಿದಂತೆ ಪದಾಧಿಕಾರಿಗಳು ಇದ್ದರು. ನಂತರ ಶಾಲಾ ಆವರಣದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು.