ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮ ತನ್ನ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕಾದರೆ, ಹೊಸ ತಲೆಮಾರಿನ ಪತ್ರಕರ್ತರಿಗೆ ತರಬೇತಿ ನೀಡುವ ಕಾರ್ಯವನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮಾಡಬೇಕಾಗಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮ ತನ್ನ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕಾದರೆ, ಹೊಸ ತಲೆಮಾರಿನ ಪತ್ರಕರ್ತರಿಗೆ ತರಬೇತಿ ನೀಡುವ ಕಾರ್ಯವನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮಾಡಬೇಕಾಗಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿಕ್ಕಮಗಳೂರು ಘಟಕದ 2025-28ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ, ಪತ್ರಿಕಾ ದಿನಾಚರಣೆ ಹಾಗೂ ಕೆಯುಡಬ್ಲ್ಯುಜೆ ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಹೊಸ ಪೀಳಿಗೆಯ ಪತ್ರಕರ್ತರು ನ್ಯೂಸ್ ಚಾನಲ್ ಲೋಗೋ ಹಿಡಿದು ಯಾರನ್ನು ಬೇಕಾದರೂ ಪ್ರಶ್ನೆ ಮಾಡಬಹುದು. ಏನು ಬೇಕಾದರೂ ಪ್ರಶ್ನೆ ಮಾಡಬಹುದು ಎಂದುಕೊಂಡಿದ್ದಾರೆ. ಹೀಗಾಗಿ, ಯುವ ಪತ್ರಕರ್ತರಿಗೆ ಸರಿಯಾದ ತರಬೇತಿ ನೀಡುವ ಅತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಇಂದಿನ ದಿನಗಳಲ್ಲಿ ಪತ್ರಿಕೆ ಮತ್ತು ಟಿವಿಗಳಲ್ಲಿ ಹೇಳಿಕೆ ಆಧಾರಿತ ಪತ್ರಿಕೋದ್ಯಮವನ್ನು ಕಾಣುತ್ತಿದ್ದೇವೆ. ಪತ್ರಕರ್ತರು ಸಮಾಜದಲ್ಲಿ ಯಾವ ಸುದ್ದಿಗೆ ಆದ್ಯತೆ ನೀಡಬೇಕೆಂಬ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿಲ್ಲ. ಸುಳ್ಳು ಸುದ್ದಿಗಳ ಪ್ರಸಾರದಿಂದ ಪತ್ರಿಕೋದ್ಯಮಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುತ್ತಿರುವ ಪತ್ರಿಕೋದ್ಯಮ ಇದೇ ಪರಿಸ್ಥಿತಿಯಲ್ಲಿ ಮುಂದುವರಿದರೆ, ತನ್ನ ಎಲ್ಲ ಅಂಗಾಂಗಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಸಮಾಜಕ್ಕೆ ನೀಡಬೇಕಾದ ಕೊಡುಗೆಯಲ್ಲಿ ಪತ್ರಿಕೋದ್ಯಮ ಎಲ್ಲೋ ಒಂದು ಕಡೆ ಎಡವುತ್ತಿದೆ. ಮಾನವೀಯ, ತನಿಖಾ ವರದಿಗಳನ್ನು ಬಿತ್ತರಿಸುತ್ತಿಲ್ಲ. ರಾಜ್ಯದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಆ ಬಗ್ಗೆ ಯಾವೊಬ್ಬ ಪತ್ರಕರ್ತರಿಗೂ ಕಾಳಜಿ ಇಲ್ಲ. ಕೇವಲ ರಾಜಕೀಯ ಬೆಳವಣಿಗೆಗಳಿಗೆ ಸೀಮಿತವಾಗಿದ್ದಾರೆ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಯಾವ ಸುದ್ದಿಗಳಿಗೆ ಮಹತ್ವ ನೀಡಬೇಕು. ಯಾವುದಕ್ಕೆ ಕೊಡಬಾರದು ಎಂಬ ಬಗ್ಗೆ ಪತ್ರಕರ್ತರು ಆಲೋಚನೆ ಮಾಡುತ್ತಿಲ್ಲ ಎಂದರು.ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಎಡ ಪಂಥೀಯ ಮತ್ತು ಬಲ ಪಂಥೀಯದ ಪತ್ರಿಕೋದ್ಯಮ, ಚಿಂತನೆಗಳು ಹಾಗೂ ಹೋರಾಟಗಳು ತೀರಾ ಸಂಘರ್ಷದ ರೀತಿಯಲ್ಲಿ ನಡೆಯುತ್ತಿವೆ. ದೆಹಲಿಯಲ್ಲಿ ನಡೆಯುತ್ತಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಹೋರಾಟದ ವರದಿಗಾರಿಕೆಗೆ ತೆರಳಿದ ವರದಿಗಾರರಿಗೆ ಗೋದಿ ಮೀಡಿಯಾ ಎಂದು ಹೇಳಿ ಓಡಿಸಿದ ಪ್ರಸಂಗ ಕಾಣುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.ಎಡ ಮತ್ತು ಬಲ ಪಂಥದಲ್ಲಿ ಸರಿ, ತಪ್ಪು ಎಂಬುದಿಲ್ಲ. ಇನ್ನು, ಪತ್ರಿಕೋದ್ಯಮ ನ್ಯೂಟ್ರಲ್ ಆಗಿರಬೇಕೆಂಬ ಕಾಲವೂ ಈಗಿಲ್ಲ. ಪತ್ರಿಕೋದ್ಯಮ ಯಾವುದೇ ಕಾಲಘಟ್ಟದಲ್ಲಿಯೂ ನ್ಯೂಟ್ರಲ್ ಆಗಿರಲಿಲ್ಲ. ಯಾವುದೋ ಒಂದು ಧಾರೆಯಲ್ಲಿ ಪತ್ರಿಕೋದ್ಯಮ ನಡೆದುಕೊಂಡು ಬಂದಿದೆ. ಆದರಿಂದು ಅದು ಅತಿರೇಕವಾಗಿದೆ. ಹಾಗಾಗಿ, ಪತ್ರಿಕೋದ್ಯಮ ಕೈಬೊಂಬೆ ರೀತಿ ಕಾಣುತ್ತಿದೆ ಎಂದರು.ಪಂಥಗಳಲ್ಲಿ ಸಮತೂಕ ಇರಬೇಕು:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಡ ಮತ್ತು ಬಲ ಪಂಥೀಯ ಎರಡೂ ವಿಚಾರಧಾರೆಗೆ ಸಮತೂಕವಿರಬೇಕು. ಯಾವುದೋ ಒಂದು ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ಆಗ ಪ್ರಜಾಪ್ರಭುತ್ವದ ವ್ಯವಸ್ಥೆ ಹಳಿ ತಪ್ಪಲಿದೆ ಎಂದು ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಸಮೂಹ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಹೇಳಿದರು.
ಸಮಾರಂಭದ ಪ್ರಧಾನ ಭಾಷಣಕಾರರಾಗಿ ಮಾತನಾಡಿ, ಎಡ ಮತ್ತು ಬಲ ಪಂಥೀಯ ಧೋರಣೆಯ ಪತ್ರಿಕೋದ್ಯಮ ಎಲ್ಲಿಯವರೆಗೆ ಸಂಯಮದಲ್ಲಿ ಇರಲಿದೆಯೋ ಅಲ್ಲಿಯವರೆಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಧೋರಣೆಗಳು ಅತಿರೇಕಗೊಂಡಾಗ ಗೊಂದಲ ಸೃಷ್ಟಿಯಾಗಲಿದೆ. ಸಂವಿಧಾನದ ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಹಕ್ಕು ಎಡ ಮತ್ತು ಬಲ ಪಂಥೀಯರಿಬ್ಬರಿಗೂ ಇದೆ. ಹಾಗಾಗಿ, ಪತ್ರಿಕಾ ದಿನಾಚರಣೆಗಳು ಆತ್ಮಾವಲೋಕನ ಮಾಡಿಕೊಳ್ಳುವ ವೇದಿಕೆ ಆಗಬೇಕಿದೆ. ಜತೆಗೆ, ಪತ್ರಕರ್ತರು ಚಿಂತನೆಗಳಿಗೆ ಒಳಗಾಗಬೇಕಾದ ಸಂದರ್ಭವೂ ಇದಾಗಿದೆ ಎಂದು ಎಚ್ಚರಿಸಿದರು.ಹಿರಿಯ ಪತ್ರಕರ್ತರಿಗೆ ಮಾಧ್ಯಮ ಪ್ರಶಸ್ತಿ ಪ್ರದಾನ:ಕನ್ನಡಪ್ರಭದ ಸಂಪಾದಕ ಗಿರೀಶ್ ರಾವ್ ಹತ್ವಾರ್‌ಗೆ ಗೊಮ್ಮಟ ಮಾಧ್ಯಮ ದತ್ತಿ ಪ್ರಶಸ್ತಿ, ವಿಜಯವಾಣಿ ಬೆಂಗಳೂರಿನ ಶ್ರೀಕಾಂತ್ ಭಟ್ ಅವರಿಗೆ ಶಿವಮೊಗ್ಗ ಮಿಂಚು ಶ್ರೀನಿವಾಸ್ ಪ್ರಶಸ್ತಿ, ಪ್ರಜಾವಾಣಿಯ ರವಿಪ್ರಕಾಶ್ ಅವರಿಗೆ ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ ಸೇರಿ ಹಲವು ಹಿರಿಯ ಪತ್ರಕರ್ತರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ, ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಚಿಕ್ಕಮಗಳೂರಿನ ಜಿಲ್ಲಾ ವರದಿಗಾರ ಕೆ.ಕಿರಣ್‌ಗೆ ಕೆಯುಡಬ್ಲ್ಯುಜೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.