ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ವಕೀಲ ವೃತ್ತಿಯ ಘನತೆ ಹೆಚ್ಚಿಸುವ ನಿಟ್ಟಿನಲ್ಲಿ ಯುವಪೀಳಿಗೆಯ ವಕೀಲರಿಗೆ ಹಿರಿಯ ವಕೀಲರು ಪ್ರೋತ್ಸಾಹ ನೀಡುವ ಮಾರ್ಗದರ್ಶಿಗಳಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಸಹೆಗಾರ ಮತ್ತು ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದ್ದಾರೆ. ನಗರದ ಹೊರವಲಯದಲ್ಲಿನ ಕ್ಯಾಪಿಟಲ್ ವಿಲೇಜ್ ರೆಸಾರ್ಟ್‌ನಲ್ಲಿ ಮಡಿಕೇರಿ ವಕೀಲರ ಸಂಘದ ವತಿಯಿಂದ ಆಯೋಜಿತ ವಕೀಲರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ದೇಶದ ಇತಿಹಾಸದಲ್ಲಿ ವಕೀಲರ ಸೇವೆ ಸದಾ ಸ್ಮರಣೀಯವಾಗಿದ್ದು, ಸ್ವಾತಂತ್ರ‍್ಯ ಹೋರಾಟದಲ್ಲಿಯೂ ವಕೀಲರು ಮುಂಚೂಣಿಯಲ್ಲಿದ್ದದ್ದು ಗಮನಾರ್ಹ ಎಂದರು.
ವಕೀಲರು ಸದಾ ಹೊಸ ವಿಚಾರ, ನವ ಕಾನೂನುಗಳನ್ನು ಅಧ್ಯಯನ ಮಾಡುತ್ತಲೇ ಇರಬೇಕು. ಈ ಮೂಲಕ ವೖತ್ತಿಯಲ್ಲಿ ಜ್ಞಾನ ಸಂಪಾದನೆಗಗೆ ಸಕ್ರಿಯರಾಗಿರಬೇಕು. ಜ್ಞಾನದ ತಿಳಿವಳಿಕೆಯಿಂದ ಉನ್ನತ ಮಟ್ಟದ ವಕೀಲರಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.ವಕೀಲರ ಜತೆಗೆ ವಕೀಲ ವೖತ್ತಿಯ ಸಂರಕ್ಷಣೆ ಕೂಡ ಆಗಬೇಕೆಂಬ ಉದ್ದೇಶದಿಂದ ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯಿದೆ ಮಂಡಿಸಲಾಯಿತು, ವಕೀಲರ ರಕ್ಷಣೆಯಾದಾಗ ಆ ಮೂಲಕ ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆ ಕೂಡ ಆಗುತ್ತದೆ ಎಂಬ ಉದ್ದೇಶ ಈ ಕಾಯಿದೆ ಜಾರಿಯ ಹಿನ್ನಲೆಯಲ್ಲಿದೆ ಎಂದೂ ಮಾಹಿತಿ ನೀಡಿದರು.
ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎನ್.ದೇವದಾಸ್ ಮಾತನಾಡಿ, 75 ವರ್ಷ ಪೂರೈಸಿರುವ ದೇಶದ ಸಂವಿಧಾನ ಅಪಾಯದಲ್ಲಿದೆ ಎಂಬ ಕೂಗು ಕೇಳಿಬಂದಿರುವ ಈ ಕಾಲ ಘಟ್ಟದಲ್ಲಿ ವಕೀಲರು ಸಂವಿಧಾನದ ಸಂರಕ್ಷಕರಾಗುವತ್ತ ಮುಂದಡಿ ಇರಿಸಬೇಕು ಎಂದರು.ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ. ನಿರಂಜನ್ ಮಾತನಾಡಿ, ಕಾನೂನು ಪ್ರತಿಪಾದಕರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವ ವಕೀಲರು ಸ್ವತಃ ಕಾನೂನು ಪಾಲಿಸುವ ಮೂಲಕ ಆದರ್ಶಪ್ರಾಯರಾಗಿ ಜೀವಿಸುವುದು ಮುಖ್ಯ ಎಂದರು.
ಮಡಿಕೇರಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಂ.ಕೇಶವ, ಉಪಾಧ್ಯಕ್ಷ ಎಂ.ಪಿ. ನಾಗರಾಜ್, ಖಜಾಂಚಿ ಜಿ ಆರ್ ರವಿಶಂಕರ್ ಇದ್ದರು.ಉಪಾಧ್ಯಕ್ಷ ಪವನ್ ಪೆಮ್ಮಯ್ಯ, ಎಂ.ಆರ್. ಜಿತೇಂದ್ರ, ಕಪಿಲ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ವಕೀಲರ ಸಾಧಕ ಮಕ್ಕಳಿಗೆ ಬಹುಮಾನ ಮತ್ತು ಕ್ರೀಡಾಕೂಟದಲ್ಲಿ ವಿಜೇತ ವಕೀಲರಿಗೆ ಬಹುಮಾನ ವಿತರಿಸಲಾಯಿತು.
ಮಡಿಕೇರಿ ನ್ಯಾಯಾಲಯಕ್ಕೆ 1.30 ಕೋಟಿ ರು. ವೆಚ್ಚದಲ್ಲಿ ತಡೆಗೋಡೆ ಕಾಮಗಾರಿಗೆ ಶೀಘ್ರ ಸರ್ಕಾರದ ಮಂಜುರಾತಿ ನೀಡುವಂತೆ ವಕೀಲರ ಸಂಘದ ವತಿಯಿಂದ ಅಧ್ಯಕ್ಷ ನಿರಂಜನ್ ಅವರು ಶಾಸಕ ಪೊನ್ನಣ್ಣ ಅವರಿಗೆ ಬೇಡಿಕೆಯ ಮನವಿ ಪತ್ರ ನೀಡಿದರು.......................
ಸರ್ಕಾರದ ಟ್ರಬಲ್ ಶೂಟರ್ ಪೊನ್ನಣ್ಣ.....ಕೊಡಗಿನ ಹೆಸರಾಂತ ರಾಜಕಾರಣಿ, ವಕೀಲ ಎ ಕೆ ಸುಬ್ಬಯ್ಯ ರಾಜ್ಯದಲ್ಲಿ ಫೈರ್ ಬ್ರಾಂಡ್ ಆಗಿದ್ದರೆ ಅವರ ಮಗ ಎ ಎಸ್ ಪೊನ್ನಣ್ಣ ಸೂಪರ್ ಫ್ರೈರ್ ಬ್ರಾಂಡ್ ಆಗಿದ್ದಾರೆ ಎಂದು ಹೆಚ್ಚುವರಿ ಅಡ್ವೋಕೇಟ್ ಜನರಲ್ ಎನ್ ದೇವದಾಸ್ ಶ್ಲಾಘಿಸಿದರು.ವಕೀಲರ ಅತ್ಯಗತ್ಯವಾಗಿದ್ದ ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೊನ್ನಣ್ಣ ಅವರನ್ನು ಮಡಿಕೇರಿ ವಕೀಲರ ಸಂಘದ ವತಿಯಿಂದ ಗೌರವಿಸಲಾಯಿತು, ಈ ಸಂದರ್ಭ ಪೊನ್ನಣ್ಣ ಅವರನ್ನು ರಾಜ್ಯ ಸರ್ಕಾರದ ಟ್ರಬಲ್ ಶೂಟರ್ ಎಂದು ವಕೀಲ ಸಮೂಹದ ಅಭಿನಂದನಾ ಪತ್ರದಲ್ಲಿ ವರ್ಣಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪೊನ್ನಣ್ಣ, ಮುಖ್ಯಮಂತ್ರಿಗಳ ವಿರುದ್ದದ ಮೂಡಾ ಹಗರಣದ ಸಂದರ್ಭ ದೇಶದ ಅತ್ಯಂತ ಖ್ಯಾತನಾಮ ವಕೀಲರ ಜತೆ ಸಂಪರ್ಕ ಹೊಂದಲು ತನಗೆ ಸಾಧ್ಯವಾಯಿತು ಎಂದರು.