ನೈತಿಕತೆಯ ಗಡಿ ದಾಟಿದ ಯುವಕ- ಯುವತಿಯರು: ಸ್ವರ್ಣವಲ್ಲೀ ಶ್ರೀ

| Published : Jul 11 2025, 01:47 AM IST

ನೈತಿಕತೆಯ ಗಡಿ ದಾಟಿದ ಯುವಕ- ಯುವತಿಯರು: ಸ್ವರ್ಣವಲ್ಲೀ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಯುವಕರ-ಯುವತಿಯರು ನೈತಿಕತೆ ಗಡಿ ದಾಟಿ ಆಚೆಗೆ ಹೋಗುತ್ತಿದ್ದಾರೆ.

ಶಿರಸಿ: ಯುವಕರ-ಯುವತಿಯರು ನೈತಿಕತೆ ಗಡಿ ದಾಟಿ ಆಚೆಗೆ ಹೋಗುತ್ತಿದ್ದಾರೆ. ಅವರೆಲ್ಲರಿಗೂ ಹತ್ತಿಕೊಂಡಿರುವ ಭೋಗೈಕ ಭಾವನೆಗಳನ್ನು ದೂರ ಮಾಡಬೇಕು. ಸರಿಯಾದ ಮಾರ್ಗದರ್ಶನದ ಮೂಲಕ ಅಂತವರನ್ನು ಸರಿದಾರಿಗೆ ತರಬೇಕಿದೆ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ತಾಲೂಕಿನ ಸ್ವರ್ಣವಲ್ಲೀ ಮಠದಲ್ಲಿ ಚಾತುರ್ಮಾಸ ವ್ರತ ಸಂಕಲ್ಪದ ನಿಮಿತ್ತ ಸುಧರ್ಮಾ ಸಭಾಭವನದಲ್ಲಿ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ಚನ ನೀಡಿದರು.

ಇತ್ತೀಚೆಗೆ ಯುವ ಸಮುದಾಯ ಭೋಗದಿಂದ ಓದುವ ಆಸಕ್ತಿ ಕಳೆದುಕೊಂಡು ಕುಟುಂಬದ ಆಚೆ ಹೋಗುತ್ತಾರೆ. ಉದ್ವೇಗದಿಂದ ಮಾನಸಿಕ, ದೈಹಿಕವಾಗಿ ಪರಿಣಾಮ ಬೀರುತ್ತವೆ. ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇದೆ. ಸಮಾಜದ ಸ್ವಾಸ್ಥ್ಯ ಕಾಪಾಡುವುದು ಧರ್ಮಪೀಠಗಳ ಕರ್ತವ್ಯವಾಗಿದೆ. ಹಿರಿಯರ ಹಿಡಿತ, ಕಟ್ಟುಪಾಡುಗಳು, ಸಂಸ್ಕಾರ ನೀಡುವುದರಿಂದ ಯುವಕರನ್ನು ಸರಿದಾರಿಗೆ ತರಬಹುದು. ನಿದ್ರೆ ಶರೀರಕ್ಕೆ ಹಾಗೂ ಮನಸ್ಸಿಗೆ ವಿಶ್ರಾಂತಿ. ಅತಿಯಾದ ಮೊಬೈಲ್ ಬಳಕೆಯಿಂದ ನಿದ್ರೆ ಕಡಿಮೆಯಾಗಿದೆ. ಇದರಿಂದ ರೋಗಗಳು ಹೆಚ್ಚಾಗಿ ಮನಸ್ಸಿನ ಸ್ವಾಸ್ಥ್ಯ ಕೆಟ್ಟು ಹೋಗಿದೆ. ದೇವರಲ್ಲಿ ಭಕ್ತಿ, ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಬೇಕು. ಆದರೆ ಇಂದು ಸಮಾಜ ಇವುಗಳಿಂದ ದೂರ ಹೋಗಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು. ಅಭ್ಯಾಸದ ಬಲವಿದ್ದರೆ ಆತಂಕದ ಸ್ಥಿತಿಯಲ್ಲಿ ಭಾವನೆಗಳನ್ನು ಪಡೆದುಕೊಳ್ಳು ಸಾಧ್ಯ ಎಂದರು.

ಸಣ್ಣವಯಸ್ಸಿನಲ್ಲಿ ಹೃದಯಘಾತ ಪ್ರಕರಣ ಹೆಚ್ಚಳವಾಗುತ್ತಿವೆ. ಜೀವನ ಶೈಲಿ ಬದಲಾಗಿರುವುದು ಹೃದಯಾಘಾತಕ್ಕೆ ಮುಖ್ಯ ಕಾರಣ ಎಂದು ಹೇಳುತ್ತಾರೆ. ವ್ಯಾಯಾಮದ ಕೊರತೆ, ಆಹಾರ ಪದ್ಧತಿ, ಮೊಬೈಲ್ ಬಳಕೆ ಕಾರಣವಾಗಿದೆ. ಧಾರ್ಮಿಕ ವ್ರತಾಚರಣೆಗಳನ್ನು ಮಾಡುವುದರಿಂದ ಮನಸ್ಸು, ಶರೀರವನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ ಎಸ್. ಮಾತನಾಡಿ, ಮನಸ್ಸಿಗೆ ಹಾಗೂ ದೈಹಿಕವಾಗಿ ನಿರ್ಬಂಧ ವಿಧಿಸಿಕೊಳ್ಳುವುದು ಅತ್ಯವಶ್ಯ. ಕಾನೂನು ಸರಿಯಾಗಿ ಪಾಲಿಸುವವರು ಬ್ರಾಹ್ಮಣರು. ಕುಟುಂಬ ಕಲ್ಯಾಣ ಯೋಜನೆಯನ್ನು ಮೊದಲು ಅಳವಡಿಸಿಕೊಂಡಿರುವವರು ಬ್ರಾಹ್ಮಣರು. ಆ ಕಾರಣದಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿ ವಿವಾಹವಾಗುವ ಬ್ರಾಹ್ಮಣ ಯುವಕರಿಗೆ ಯುವತಿ ಸಿಗುತ್ತಿಲ್ಲ. ವೇದಾಭ್ಯಾಸ, ಸಂಸ್ಕೃತದಿಂದ ವಿಮುಖರಾಗುತ್ತಿದ್ದಾರೆ. ಬ್ರಾಹ್ಮಣರು ಇದರ ಬಗ್ಗೆ ಚಿಂತನೆ ಮಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.

ನಿವೃತ್ತ ಪ್ರಾಂಶುಪಾಲ ಕೆ.ಎನ್. ಹೊಸ್ಮನಿ, ಬ್ಯಾಂಕ್ ನಿವೃತ್ತ ಅಧಿಕಾರಿ ಶಿವಾನಂದ ದೀಕ್ಷಿತ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಕೆ.ಎನ್.ಹೊಸಮನಿ ಮಾತನಾಡಿ, ಭಯ ಮತ್ತು ಅಜ್ಞಾನ ದೂರ ಮಾಡುವ ಅನನ್ಯ ಶಕ್ತಿ ಗುರುಗಳಲ್ಲಿರುತ್ತದೆ. ನಿಜ ಜ್ಞಾನದ ಬೆಳಕನ್ನು ಮತ್ತು ಪರಬ್ರಹ್ಮನ ದಾರಿ ಕಾಣಿಸುವವನು ಗುರು. ಪೂಜ್ಯರ ಆಶೀರ್ವಾದ ಅತ್ಯಂತ ಶ್ರೇಷ್ಠ ಅವಕಾಶ. ಭಾರತೀಯ ಪರಂಪರೆಯ ಚಾತುರ್ಮಾಸ್ಯ ಸಮಯದಲ್ಲಿ ಗುರುಗಳಿಂದ ಒಬ್ಬ ಅಧ್ಯಾಪಕನಿಗೆ ಶ್ರೀಗಳಿಂದ ಸನ್ಮಾನ ಲಭಿಸಿದ್ದಕ್ಕೆ ಧನ್ಯತಾಭಾವ ಲಭಿಸಿದಂತಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಶಿವಾನಂದ ದೀಕ್ಷಿತ ಮಾತನಾಡಿ, ಬ್ರಾಹ್ಮಣ ಸಮಾಜ ಸಂಕಷ್ಟದಲ್ಲಿದೆ. ವಿವಾಹ ಮತ್ತು ಆಸ್ತಿ ನಿರ್ವಹಣೆಯನ್ನು ಬ್ರಾಹ್ಮಣ ಸಮಾಜ ಎದುರಿಸುತ್ತಿದೆ. ಶಕ್ತಿ ಸಾಮರ್ಥ್ಯದಿಂದ ಋಣ ತೀರಿಸುವ ಕೆಲಸ ಮಾಡಬೇಕು. ಸ್ವರ್ಣವಲ್ಲಿ ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪಿಸಲು ನಾವೆಲ್ಲರೂ ಪ್ರಯತ್ನಿಸೋಣ. ಇದರಿಂದ ಇಲ್ಲಿಯ ಯುವಕರಿಗೆ ಶಿಕ್ಷಣ ಲಭಿಸಿರುವುದರ ಜತೆಗೆ ಉದ್ಯೋಗವೂ ಸಿಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ "ವೇದಾಂತ ಸಿದ್ಧಾಂತ ಸೂಕ್ತ ಮಂಜರಿ " ಗ್ರಂಥವನ್ನು ಉಭಯ ಶ್ರೀಗಳು ಲೋಕಾರ್ಪಣೆಗೊಳಿಸಿದರು.

ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಶಶಿಧರ ನಾಯ್ಕ, ಶ್ರೀಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ಗಣಪತಿ ಹೆಗಡೆ ಕೊಡವೆಮನೆ ಉಪಸ್ಥಿತರಿದ್ದರು. ರಾ.ರಾ ಪಾಠಶಾಲಾ ವಿದ್ಯಾರ್ಥಿಗಳು ವೇದಘೋಷ ಹಾಡಿದರು.

ವೇದಾ ಹೆಗಡೆ ನೀರ್ನಳ್ಳಿ, ಪ್ರಾಂಶುಪಾಲ ಕೃಷ್ಣ ಜೋಶಿ ಸನ್ಮಾನ ಪತ್ರ ವಾಚಿಸಿದರು. ಗ್ರಂಥವನ್ನು ಕೆ.ವಿ. ಭಟ್ಟ ಶಿರಸಿ ಪರಿಚಯಿಸಿದರು. ಡಾ.ಮಹಾಬಲೇಶ್ವರ ಕಿರಕುಂಭತ್ತಿ ಗ್ರಂಥವನ್ನು ಪರಿಚಯಿಸಿದರು. ಡಾ.ವಿನಾಯಕ ಭಟ್ಟ ಗುಂಜಗೋಡ ನಿರೂಪಿಸಿದರು. ಎನ್.ಜಿ.ಹೆಗಡೆ ಭಟ್ರಕೇರಿ ವಂದಿಸಿದರು.

ಬ್ರಾಹ್ಮಣರಿಗೆ ಸಹಾಯಹಸ್ತ ನೀಡಲು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ₹೧೦೦ ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದ್ದೇವೆ. ಈಗಾಗಲೇ ₹೪೦ ಲಕ್ಷ ಸಂಗ್ರಹವಾಗಿದೆ. ಇದರ ಮೂಲಕ ಬ್ರಾಹ್ಮಣರ ಆರೋಗ್ಯ ಹಾಗೂ ಶಿಕ್ಷಣಕ್ಕೆ ನೀಡುತ್ತೇವೆ ಎನ್ನುತ್ತಾರೆ ಅ.ಕ.ಬ್ರಾ. ಮಹಾಸಭಾ ಅಧ್ಯಕ್ಷ ರಘುನಾಥ ಎಸ್.