ಕ್ಯಾನ್ಸರ್ ಮೊದಲೆಲ್ಲಾ ವೃದ್ಧರಲ್ಲಿ ಕಾಣಿಸಿಕೊಳ್ಳುತ್ತಿದ್ದ ಇದೀಗ ಯುವ ಪೀಳಿಗೆಯನ್ನೇ ಹೆಚ್ಚು ಬಾಧಿಸಿ ಅದೃಶ್ಯ ವೈರಿಯಂತೆ ಕಾಡುತ್ತಿದೆ. ಇದಕ್ಕೆ ಯುವ ಪೀಳಿಗೆ ದುಶ್ಚಟಗಳ ದಾಸರಾಗಿರುವುದೇ ಮುಖ್ಯ ಕಾರಣ. ಕ್ಯಾನ್ಸರ್ ಜಾಗೃತಿ ದಿನದಂದು ದುಶ್ಚಟ ತ್ಯಜಿಸುತ್ತೇವೆಂದು ಪ್ರಮಾಣ ಮಾಡಿ ನಮ್ಮ ಜೋಳಿಗೆಗೆ ಹಾಕಿ ಎಂದು ಚರಂತಿಮಠದ ಪ್ರಭುಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕ್ಯಾನ್ಸರ್ ಮೊದಲೆಲ್ಲಾ ವೃದ್ಧರಲ್ಲಿ ಕಾಣಿಸಿಕೊಳ್ಳುತ್ತಿದ್ದ ಇದೀಗ ಯುವ ಪೀಳಿಗೆಯನ್ನೇ ಹೆಚ್ಚು ಬಾಧಿಸಿ ಅದೃಶ್ಯ ವೈರಿಯಂತೆ ಕಾಡುತ್ತಿದೆ. ಇದಕ್ಕೆ ಯುವ ಪೀಳಿಗೆ ದುಶ್ಚಟಗಳ ದಾಸರಾಗಿರುವುದೇ ಮುಖ್ಯ ಕಾರಣ. ಕ್ಯಾನ್ಸರ್ ಜಾಗೃತಿ ದಿನದಂದು ದುಶ್ಚಟ ತ್ಯಜಿಸುತ್ತೇವೆಂದು ಪ್ರಮಾಣ ಮಾಡಿ ನಮ್ಮ ಜೋಳಿಗೆಗೆ ಹಾಕಿ ಎಂದು ಚರಂತಿಮಠದ ಪ್ರಭುಸ್ವಾಮೀಜಿ ಹೇಳಿದರು.

ವಿಶ್ವ ಕ್ಯಾನ್ಸರ್ ದಿನದ ನಿಮಿತ್ತ ಬಿವಿವಿಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ನವನಗರದ ಸೆಕ್ಟರ್‌ 58 ರಲ್ಲಿನ ಮಹಾಲಕ್ಷ್ಮೀ ಮಂದಿರದ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಅಭಿಯಾನದಲ್ಲಿ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾರತೀಯ ಮನೆಯ ಅಡುಗೆ ಪದ್ಧತಿ ನಮ್ಮ ಆರೋಗ್ಯದ ಗುಣಮಟ್ಟದ ಹೆಚ್ಚುತ್ತದೆ, ನಮ್ಮ ಅಡುಗೆ ಮನೆಯಲ್ಲಿ ಆರೋಗ್ಯದ ಗುಟ್ಟು ಇದೆ ಎಂದು ಅಭಿಪ್ರಾಯಪಟ್ಟರು.

ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ಆರೋಗ್ಯಕರ ಆಹಾರ, ವ್ಯಾಯಾಮ, ಮತ್ತು ಧೂಮಪಾನ ತ್ಯಾಗದ ಮೂಲಕ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು. ಕ್ಯಾನ್ಸರ್ ರೋಗಿಗಳಿಗೆ ವರವಾಗುವಂತೆ ಡಾ.ವೀರಣ್ಣ ಚರಂತಿಮಠರು ಬವಿವ ಸಂಘದ ಆಸ್ಪತ್ರೆಗಳಲ್ಲಿ ಎಲ್ಲ ಸೌಲಭ್ಯ ಕಲ್ಪಿಸಿರುವುದು ಅಭಿನಂದನೀಯವಾಗಿದೆ ಎಂದು ಶ್ಲಾಘಿಸಿದರು.

ಸರ್ಜರಿ ವಿಭಾಗದ ಪ್ರಾಧ್ಯಾಪಕ ಡಾ.ರವಿ ಕೋಟೆಣ್ಣವರ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಕ್ಯಾನ್ಸರ್ ಕಾಯಿಲೆ ಜನರನ್ನು ಮಾರಣಾಂತಿಕವಾಗಿ ಕಾಡುತ್ತಿದೆ. ಇದಕ್ಕೆ ಕ್ಯಾನ್ಸರ್ ಕಾಯಿಲೆಯ ಬಗೆಗಿನ ಅಜ್ಞಾನ, ಜಾಗೃತಿಯ ಕೊರತೆ, ಅನಾರೋಗ್ಯಕರ ಹವ್ಯಾಸಗಳು ಮತ್ತು ಜೀವನ ಶೈಲಿ ಮುಖ್ಯ ಕಾರಣಗಳಾಗಿವೆ. ಕ್ಯಾನ್ಸರ್ ಕಾಯಿಲೆಯನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಿ ಸೂಕ್ತವಾದ ಚಿಕಿತ್ಸೆ ನೀಡಿದಾಗ ಯಶಸ್ವಿಯಾಗಿ ಗುಣಪಡಿಸಬಹುದೆಂದರು.

ವೇದಿಕೆಯ ಮೇಲೆ ಟೀಕಿನ ಮಠದ ಶ್ರೀ ಮಲ್ಲಿಕಾರ್ಜುನ ದೇಶಿಕರ, ಅನವಾಲದ ಕೈಲಾಸಪತಿ ಸ್ವಾಮೀಜಿ , ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಎನ್. ಪಾಟೀಲ, ಆಯುಷ್ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಪ್ರಾಚಾರ್ಯ ಡಾ.ಅರುಣ ಹೂಲಿ, ಉಪನ್ಯಾಸಕರಾದ ಡಾ.ಅಖಿಲಾ ಹುಲ್ಲೂರ, ಡಾ.ಪ್ರದೀಪ. ಡಾ.ಜಯಲಕ್ಷ್ಮಿ ಹಾಗೂ ಕಲಿಕಾ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.