ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ಯುವಕರು ದುಶ್ಚಟಕ್ಕೆ ಬಲಿಯಾಗದಂತೆ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಪಿ. ರಾಮಲಿಂಗೇಗೌಡ ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಾಗಾರ್ಜುನ ಪಿಯು ಕಾಲೇಜು ಹಾಗೂ ತಂಬಾಕು ನಿಯಂತ್ರಣ ಕೋಶ ಸಂಯುಕ್ತಾಶ್ರಯದಲ್ಲಿ ಬೀಡಗಾನಹಳ್ಳಿಯ ನಾಗಾರ್ಜುನ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ದುಶ್ಚಟಗಳ ಪ್ರಭಾವಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಿದ್ದು, ಈ ವಯಸ್ಸಿನಲ್ಲಿ ಅತಿಹೆಚ್ಚು ಜಾಗರೂಕರಾಗಿರಬೇಕು. ಎಷ್ಟೇ ಕಠಿಣ ಕಾನೂನುಗಳಿದ್ದರೂ, ವಿಶ್ವದಾದ್ಯಂತ ಸರಿಸುಮಾರು 80 ದಶ ಲಕ್ಷ ಜನ ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ, ಯುವ ಜನತೆಯು ಸಾಮಾಜಿಕ ಜಾಲತಾಣಗಳಲ್ಲಿನ ವಿಡಿಯೋಗಳ ಆಕರ್ಷಣೆಗೆ ಬಲಿಯಾಗಿ ಅದೆಷ್ಟೋ ಯುವಕರು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ವ್ಯಸನವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದ್ದು, ಯಾವುದೇ ರೀತಿಯ ಮಾದಕ ವ್ಯಸನಗಳಿಗೆ ಬಲಿಯಾಗದಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಸ್ಥಿರ ಹಾಗೂ ಸಂಯಮ ಮನಸ್ಸನ್ನು ಕಾಪಾಡಿಕೊಳ್ಳಬೇಕು. ತಮ್ಮ ಸುತ್ತಮುತ್ತ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು, ಇದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ತಿಳಿಸಿದರು.ಶೇ. 28 ತಂಬಾಕು ವ್ಯಸನಿಗಳು:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ಮಹೇಶ್ ಕುಮಾರ್ ಮಾತನಾಡಿ, ತಂಬಾಕು ಉತ್ಪನ್ನ ಸೇವನೆ ಹಾನಿಯ ಬಗ್ಗೆ ತಿಳಿದ ಮೊಘಲರ ರಾಜ ಜಹಾಂಗೀರ್ ರವರು ಕ್ರಿಸ್ತಶಕ 1670 ರಲ್ಲಿ ಮೊದಲ ಬಾರಿಗೆ ತಂಬಾಕು ಸೇವನೆ ನಿಷೇಧಿಸಿದ್ದರು ಹಾಗೂ ತಂಬಾಕು ಸೇವನೆಯಿಂದ ದೇಹದ ಪ್ರತಿಯೊಂದು ಅಂಗಾಂಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. 2016-17 ರ ಗ್ಯಾಟ್ಸ್ ಸಮೀಕ್ಷೆಯ ಅಂಕಿ ಅಂಶಗಳ ಪ್ರಕಾರ ಶೇ. 28.8 ರಷ್ಟು ತಂಬಾಕು ವ್ಯಸನಿಗಳಿದ್ದಾರೆ. ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 72 ರಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ತಂಬಾಕು ಸೇವನೆ ತ್ಯಜಿಸಲು ಉಚಿತವಾಗಿ ಆಪ್ತ ಸಮಾಲೋಚನೆ ಹಾಗೂ ಎನ್. ಆರ್. ಟಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಎಎಸ್ಪಿ ಜಗನ್ನಾಥ್ ರೈ ಮಾತನಾಡಿ, ಆಧುನಿಕ ಯುಗದಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲದೇ ಈ ದುಶ್ಚಟಕ್ಕೆ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ. ಹುಕ್ಕಾ ಬಾರ್ಗಳು ಸೆಕ್ಷನ್-4 ಎ ಅಡಿಯಲ್ಲಿ ನಿಷೇಧಿಸಲಾಗಿದೆ. ಕಾನೂನು ಬಾಹಿರವಾಗಿ ಮಾದಕ ವಸ್ತುಗಳ ಮಾರಾಟ, ಹುಕ್ಕಾ ಬಾರ್ಗಳು ಹಾಗೂ ಶಾಲಾ–ಕಾಲೇಜಿನ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಅಥವಾ 112 ಗೆ ಕರೆಮಾಡಿ ಮಾಹಿತಿ ನೀಡಲು ತಿಳಿಸಿದರು.
ವಕೀಲರ ಸಂಘ ಅಧ್ಯಕ್ಷ ಕೆ.ವಿ.ಅಭಿಲಾಷ್ ಮಾತನಾಡಿ, ಈ ದೇಶದ ಶಕ್ತಿ ಯುವ ಜನರಾಗಿದ್ದು, ಬಲಿಷ್ಠ ರಾಷ್ಟ್ರದ ನಿರ್ಮಾಣಕ್ಕೆ ಯುವಜನತೆಯ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರಲು ಕೆಟ್ಟ ವ್ಯಸನದಿಂದ ದೂರ ಇರುವುದು ಅಗತ್ಯ ಎಂದು ತಿಳಿಸಿದರು.ಭಿತ್ತಿಚಿತ್ರ ಬಿಡುಗಡೆ:
ಕಾರ್ಯಕ್ರಮಕ್ಕೂ ಮುನ್ನ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ತಂಬಾಕು ಸೇವೆನಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುವ ಕರಪತ್ರ, ಭಿತ್ತಿ ಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು ಹಾಗೂ ಕಾಲೇಜಿನ ಆವರಣದಲ್ಲಿ ಗಿಡ ನೆಡಲಾಯಿತು.ಕಾರ್ಯಕ್ರಮದಲ್ಲಿ ನಾಗಾರ್ಜುನ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪ್ರಾಂಶುಪಾಲ ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲಾ ಕಾರ್ಯಕ್ರಮಾನುಷ್ಠಾನಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ತಾಲೂಕು ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ, ನಂದಿ ಹಾಗೂ ನಾಗಾರ್ಜುನ ಪಿಯು ಕಾಲೇಜಿನ ಉಪನ್ಯಾಸಕ ವೃಂದದವರು ಇದ್ದರು.
ಸಿಕೆಬಿ-1 ಬೀಡಗಾನಹಳ್ಳಿಯ ನಾಗಾರ್ಜುನ ಪಿಯು ಕಾಲೇಜಿನಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ತಂಬಾಕು ಸೇವೆನಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುವ ಕರಪತ್ರ, ಭಿತ್ತಿಚಿತ್ರಗಳನ್ನು ನ್ಯಾ.ಟಿ.ಪಿ. ರಾಮಲಿಂಗೇಗೌಡ ಬಿಡುಗಡೆಗೊಳಿಸಿದರು.