ಕನ್ನಡಪ್ರಭ ವಾರ್ತೆ ಹಾಸನ
ಯುವಕರು ಋಣಾತ್ಮಕ ಭಾವನೆ ತ್ಯಜಿಸಿ ಧನಾತ್ಮಕ ಭಾವನೆ ರೂಢಿಸಿಕೊಳ್ಳುವುದರ ಜೊತೆಗೆ ಜೇವನದಲ್ಲಿ ಶಿಸ್ತು, ಸಮಾಜ ಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ನುಡಿದರು.ನಗರದ ಆರ್.ಸಿ. ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಜನಕಲ್ಯಾಣ ರಿಸರ್ಚ್ ಮತ್ತು ಚಾರಿಟಬಲ್ ಟ್ರಸ್ಟ್, ಪರಿಪೂರ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸ್ಪಂದನ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರಿಗೆ ಜೀವನದಲ್ಲಿ ಸದಾ ಗುರಿ ಇರಬೇಕು. ಜೀವನದಲ್ಲಿ ಯಾವ ವ್ಯಕ್ತಿ ಆಳಾಗಬಲ್ಲನೊ, ಅವನೇ ಮುಂದೊಂದು ದಿನ ಅರಸನಾಗಿ ಸಾಧಕನಾಗುತ್ತಾನೆ. ಕಲಿಕೆಯ ವಿಚಾರದಲ್ಲಿ ಆಳಾಗಿ ಜ್ಞಾನ ಸಂಪಾದನೆ ಮಾಡಿದರೆ ಜೀವಿತದ ಅವಧಿಯಲ್ಲಿ ಒಂದು ಉನ್ನತ ಸಾಧನೆ ಮಾಡಿ ಸಾಧಕನಾಗಬಹುದು. ಯಾವುದೇ ವ್ಯಕ್ತಿ ಕಷ್ಟ ಪಟ್ಟರೆ ಮಾತ್ರ ಬದುಕಿನ ಅರ್ಥ ತಿಳಿಯುವುದೇ ಹೊರತು, ಕಷ್ಟ ಪಡದವನಿಗಲ್ಲ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಸಂಸ್ಕಾರವನ್ನು ಕಳಿಯಬೇಕು ಆಗ ಮಾತ್ರ ಸಮಾಜಮುಖಿ ಕೆಲಸ ಮಾಡಲು ಸಾದ್ಯವಾಗುತ್ತದೆ. ಬಡ ರೈತರ ಮಕಳು ಆಯಾಕಟ್ಟಿನ ಉದ್ಯೋಗ ಸಿಕ್ಕರೆ ಸಮಾಜ ಸರ್ವೋದಯವಾಗುತ್ತದೆ. ಜನ ಕಲ್ಯಾಣ ಟ್ರಸ್ಟ್ ಮತ್ತು ಪರಿಪೂರ್ಣ ಟ್ರಸ್ಟ್‌ಗಳು ಸೇರಿ ಸಮಾಜಮುಖಿ ಸೇವೆ ಮಾಡುತ್ತೀವೆ. ಜೀವನದಲ್ಲಿ ಶಿಸ್ತು, ಸಮಾಜ ಪ್ರೇಮ ಮತ್ತು ಸಂಯಮವು ಹೆಬ್ಬಾರ್ ಅವರಿಂದ ಕಲಿಯಬೇಕಾದ ವಿಷಯ. ಅವರ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಸ್ಪಂದನಾ ಯೋಜನೆ ಕಾರ್ಯ ಅತ್ಯಂತ ಮೌಲ್ಯಯುತವಾದುದು ಎಂದು ಹೇಳಿದರು. ಜನಕಲ್ಯಾಣ ರಿಸರ್ಚ್ ಮತ್ತು ಚಾರಿಟಬಲ್ ಟ್ರಸ್ಟ್, ಪರಿಪೂರ್ಣ ಚಾರಿಟಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಡಾ.ಬಿ.ಸಿ. ರವಿಕುಮಾರ್ ಮಾತನಾಡಿ, ಸ್ಪಂದನ ಯೋಜನೆ ಕೇವಲ ಆರ್ಥಿಕ ಯೋಜನೆಯಲ್ಲ, ಬಡತನದ ಬೇಗೆಯಲ್ಲಿ ಬೆಂದಿರುವಂತಹ ವಿದ್ಯಾರ್ಥಿಗಳು ತಂದೆ ತಾಯಿಯನ್ನು ಕಳೆದುಕೊಂಡು ಏಕಾಂಗಿಯಾಗಿರುವ ವಿದ್ಯಾರ್ಥಿಗಳಿಗೆ ನಾವಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬುವ ಯೋಜನೆಯಾಗಿದೆ. ಈ ವರ್ಷ ೩೦೦ ಅರ್ಜಿ ಬಂದಿದ್ದವು, ಆದರೆ ೫೩ ಜನರನ್ನು ನೇರ ಸಂದರ್ಶನ ಮಾಡಿ ಜನ ಕಲ್ಯಾಣ ಟ್ರಸ್ಟ್ ಮತ್ತು ಪರಿಪೂರ್ಣ ಟ್ರಸ್ಟ್‌ಗಳು ಬಡತನದಿಂದ ಶಿಕ್ಷಣ ವಂಚಿತರಾಗಿರುವ ಮಕ್ಕಳಿಗೆ ಸಹಾಯ ಮಾಡಲಾಗುತ್ತಿದೆ ಎಂದರು. ಆರತಿ ಕೆ.ಟಿ. ಮಾತನಾಡಿ, ಬಡತನವನ್ನು ಹೋಗಲಾಡಿಸುವುದು ಕೇವಲ ನಮ್ಮ ಶ್ರಮದಿಂದ ಮತ್ತು ಕೌಶಲ್ಯದಿಂದ ಮೊಬೈಲ್‌ಫೋನ್‌ಗಳ ಬಳಕೆಯನ್ನು ಕಡಿಮೆ ಮಾಡಿ ವಿದ್ಯಾರ್ಥಿನಿಯರು ಆರೋಗ್ಯದ ಬಗ್ಗೆ ಗಮನ ಕೊಡಬೇಕು, ಕಲಿಕೆಯ ಕಡೆ ಗಮನ ಕೊಡಿ ಹಲವಾರು ಭಾಷೆಗಳನ್ನು ಕಲಿತು ಸಮಾಜದಲ್ಲಿ ಮಾದರಿಯುತ ವ್ಯಕ್ತಿಗಳಾಗಿ ಮುಂದೆ ಬರಬೇಕು. ಮನೆಯಲ್ಲಿ ತಂದೆ ತಾಯಿಗೆ ಎಷ್ಟು ಸಹಾಯ ಮಾಡುತ್ತೀರಾ ಅಷ್ಟು ಸಮಾಜಕ್ಕೆ ಸಹಾಯ ಮಾಡುತ್ತೀರಿ. ಗುರುಹಿರಿಯರಿಗೆ ಗೌರವ ಕೊಡುವುದರ ಜೊತೆಗೆ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಮಾತನಾಡಿದರು. ಗಂಧದಕೋಠಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಿ. ಕೆ. ಮಂಜಯ್ಯ ಮಾತನಾಡಿ, ಈ ಕಾರ್ಯಕ್ರಮ ಯುವ ಮನಸ್ಸು ಮತ್ತು ಸಮುದಾಯಕ್ಕೆ ಪ್ರೇರಣೆ. ಈ ಕಾರ್ಯಕ್ರಮದಲ್ಲಿ ದೊರೆತ ಈ ಹಣವನ್ನು ನಿಮ್ಮ ಶಿಕ್ಷಣಕ್ಕಾಗಿ ಬಳಸಿಕೊಳ್ಳಿ. ನಿಮ್ಮ ವಿದ್ಯೆಯಿಂದ ಸಮಾಜಕ್ಕೆ ಏನಾದರು ಕೊಡಬಹುದು. ಬಡತನದ ಹಸಿವಿದ್ದವರು ಮಾತ್ರ ಬೆಳೆಯಬೇಕು ಅನ್ನುವ ಹಠ ಹುಟ್ಟಲು ಸಾದ್ಯ. ಈಗಿನ ವಿದ್ಯಾರ್ಥಿಗಳು ಗಣ್ಯರ ಸ್ಥಾನಕ್ಕೆ ಬೆಳೆಯಬೇಕು ಎಂದರೆ ಶ್ರಮ ಪಡಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪರಿಪೂರ್ಣ ಚಾರಿಟಬಲ್ ಟ್ರಸ್ಟ್‌ನ ಪ್ರೊ. ಎಚ್.ವಿ. ಲಕ್ಷ್ಮೀನಾರಾಯಣ, ಡಾ. ಗುರುರಾಜ್ ಹೆಬ್ಬಾರ್ ಅವರ ಆದರ್ಶವನ್ನು ವಿದ್ಯಾರ್ಥಿಗಳಲ್ಲಿ ಅರಿವನ್ನು ಉಂಟು ಮಾಡಬೇಕು ಎಂಬ ಚಿಂತನೆ ಹಾಗೂ ಸಮಾಜಕ್ಕೆ ಮಾದರಿಯಾಗಿದ್ದರು. ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮತ್ತು ಅವರನ್ನು ಉತ್ತೇಜಿಸಲು ಸಹಾಯ ಮಾಡುತ್ತಿದೆ. ಡಾ. ಗುರುರಾಜ್ ಹೆಬ್ಬಾರ್ ಅವರ ಆತ್ಮೀಯವರಲ್ಲಿಯೇ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು. ಈ ಕಾರ್ಯಕ್ರಮಕ್ಕೆ ಎಲ್ಲರೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.ವೈದ್ಯ ಡಾ. ಅಬ್ದುಲ್ ಬಷೀರ್, ಅಧ್ಯಾಪಕ ನಂದನ್, ಸಮಾಜ ಸೇವಕ ಶ್ರೀಧರ್, ಡಾ. ಕಾವ್ಯಶ್ರೀ ಹಾಗೂ ಇತರರು ಹಾಜರಿದ್ದರು.