ಯುವಜನರು ಮೊಬೈಲ್ - ಮಾದಕ ವಸ್ತುಗಳಿಂದ ದೂರವಿರಿ

| Published : Jan 13 2024, 01:30 AM IST

ಸಾರಾಂಶ

ರಾಮನಗರ: ಯುವಜನರು ಮೊಬೈಲ್ - ಮಾದಕ ವಸ್ತುಗಳ ಸೇವನೆಯಿಂದ ದೂರ ಉಳಿದು ಹಾಗೂ ಪೋಷಕರನ್ನು ಗೌರವದಿಂದ ನೋಡಿಕೊಂಡಲ್ಲಿ ನಮ್ಮ ಸಂಸ್ಕೃತಿ ಉಳಿಯುವುದರ ಜೊತೆಗೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯಪಟ್ಟರು.

ರಾಮನಗರ: ಯುವಜನರು ಮೊಬೈಲ್ - ಮಾದಕ ವಸ್ತುಗಳ ಸೇವನೆಯಿಂದ ದೂರ ಉಳಿದು ಹಾಗೂ ಪೋಷಕರನ್ನು ಗೌರವದಿಂದ ನೋಡಿಕೊಂಡಲ್ಲಿ ನಮ್ಮ ಸಂಸ್ಕೃತಿ ಉಳಿಯುವುದರ ಜೊತೆಗೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯಪಟ್ಟರು.

ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಜನ ಜಾಗೃತಿ ವೇದಿಕೆಯು ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರಸಂತ ಸ್ವಾಮಿ ವಿವೇಕಾನಂದರ 161ನೇ ಜಯಂತಿ, ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸಾಧಕಿ ಚಿತ್ರಾರಾವ್ ಅವರಿಗೆ ನಾಗರಿಕ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪೋಷಕರು ಅಭಿಮಾನ ಇಟ್ಟು ನಿಮಗೆ ಗುಣಮಟ್ಟದ ಶಿಕ್ಷಣ ಕೊಡಿಸುತ್ತಿದ್ದಾರೆ. ಆದರೆ, ನೀವು ಶಿಕ್ಷಣದಿಂದ ಏನನ್ನು ಕಲಿಯುತ್ತಿದ್ದೀರಿ ಎಂಬುದು ಮುಖ್ಯ. ಈಗ ಯುವಜನರಲ್ಲಿ ಮೊಬೈಲ್ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಜಾಗೃತಿ ಮೂಡಿಸಬೇಕಿದೆ. ಪೋಷಕರು ಮಕ್ಕಳ ತಪ್ಪುಗಳನ್ನು ಸಮರ್ಥಿಸಿಕೊಂಡು ಹೋದರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಮತ್ತು ಬುದ್ಧಿಶಕ್ತಿ ಇದೆ. ಅದನ್ನು ಸಮರ್ಥವಾಗಿ ಬಳಸಿಕೊಂಡು ನಿರಂತರ ಪ್ರಯತ್ನದಿಂದ ಮುನ್ನಡೆದರೆ ಮಾತ್ರ ಯಶಸ್ಸು ಸಾಧಿಸಬಹುದು. ತಪ್ಪಿಗೆ ಶಿಕ್ಷೆ ಇದೆ. ಶಿಕ್ಷೆ ನಿಮ್ಮನ್ನು ಸರಿ ದಾರಿಗೆ ಕೊಂಡೊಯ್ಯುತ್ತದೆ. ಪೋಷಕರು ಮತ್ತು ಶಿಕ್ಷಕರಿಗೆ ದಂಡಿಸುವ ಹಕ್ಕಿದ್ದು, ಅದು ನಿಮ್ಮ ಒಳತಿಗೆ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ತಂತ್ರಜ್ಞಾನ ಬೆಳೆದಂತೆ ನಾವೆಲ್ಲರು ನಮ್ಮ ಜೀವನವನ್ನು ಅದಕ್ಕೆ ಮುಡಿಪಾಗಿಡುತ್ತಿದ್ದೇವೆ. ಇದರ ಪರಿಣಾಮ ನಮ್ಮ ಆಲೋಚನಾ ಶಕ್ತಿಯನ್ನೇ ಮಾತ್ರವಲ್ಲ ರಕ್ತ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಮೊಬೈಲ್ ಇಲ್ಲದೆ ಜೀವನ ನಡೆಯದ ಸ್ಥಿತಿ ಬಂದಿದೆ.

ಸಂಬಂಧಗಳು ಬೆಳೆಯುವ ಬದಲು ಬೇರೆ ಆಗುತ್ತಿವೆ. ಕುಟುಂಬ ವ್ಯವಸ್ಥೆಯ ಕೊಂಡಿಗಳು ಕಳಚಿ, ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದ್ದು,ಇದಕ್ಕೆ ಸರ್ಕಾರಗಳು ಪ್ರೋತ್ಸಾಹ ನೀಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕುಟುಂಬ ಅಂದರೆ ಬಹುತೇಕರು ಅಪ್ಪ ಅಮ್ಮನನ್ನು ಬಿಟ್ಟು ಗಂಡ ಹೆಂಡತಿ ಮಕ್ಕಳು ಅಂತ ತಿಳಿದುಕೊಂಡಿದ್ದಾರೆ. ಅತ್ತೆ ಮಾವ, ಅಪ್ಪ ಅಮ್ಮ ಎಲ್ಲರು ಸೇರಿದಾಗ ಮಾತ್ರ ಅದು ಕುಟುಂಬ ಅನಿಸಿಕೊಳ್ಳುತ್ತದೆ. ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಚರ್ಚೆ ನಡೆಯುವತ್ತಿರುವಾಗಲೇ ಅಂತಹ ಮಹತ್ವದ ಸಂದೇಶ ಸಾರಿ ಯುವಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ ಚಿತ್ರಾರಾವ್ ಪ್ರಯತ್ನ ಶ್ಲಾಘನೀಯ.ಅವರಿಗೆ ಸಲ್ಲಿಸುತ್ತಿರುವ ನಾಗರಿಕ ಸನ್ಮಾನ ದೊಡ್ಡ ಗೌರವ ಎಂದರು.

ನಮ್ಮ ಸಂಸ್ಕೃತಿ ಉಳಿಸುವ ಪ್ರಯತ್ನದ ಭಾಗವಾಗಿ ನಮ್ಮ ತಂದೆ ತಾಯಂದಿರನ್ನು ಗೌರವದಿಂದ ನೋಡಿಕೊಳ್ಳುವುದು ಮೊಟ್ಟ ಮೊದಲ ಕರ್ತವ್ಯ ಆಗಬೇಕು. ಕಳೆದ 25 ವರ್ಷಗಳಲ್ಲಿ ಸಮಾಜದಲ್ಲಿ ಸಾಕಷ್ಟು ಬದಲಾವಣೆ ಕಂಡಿದ್ದೇವೆ. ಹೆಣ್ಣು ಮಕ್ಕಳು ಬೇಡ, ಗಂಡು ಮಕ್ಕಳು ಬೇಕು ಅನ್ನುತ್ತಿದ್ದ ಕಾಲವಿತ್ತು. ಆದರೀಗ ಗಂಡು ಮಕ್ಕಳು ಬೇಡ, ಹೆಣ್ಣು ಮಕ್ಕಳೇ ಬೇಕು ಎನ್ನುವ ಸ್ಥಿತಿ ಬಂದಿದೆ ಎಂದು ಸುರೇಶ್ ಹೇಳಿದರು.

ಅಕ್ಕಾ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಾ.ಶಿವಕುಮಾರ್ ಮಾತನಾಡಿ, ಸ್ವಾಮಿ ವಿವೇಕಾನಂದರು ಬಾಲ್ಯ ದಿಂದಲು ಉತ್ಸಾಹಿ ಯುವಕ. ಧ್ಯಾನಸ್ಥ ಸ್ವಭಾವದವರು. ಶಾಲಾ ದಿನಗಳಲ್ಲಿ ರಾಮಕೃಷ್ಣ ಪರಮಹಂಸರನ್ನು ಭೇಟಿಯಾದ ಮೇಲೆ ವಿವೇಕರ ಜೀವನ ದಿಕ್ಕು ಬದಲಾಯಿತು. ಅವರಿಂದ ಭಾರತೀಯ ದರ್ಶನ ಏನೆಂಬುದನ್ನು ಕಲಿಯುತ್ತಾರೆ. ಚಿಕಾಗೋದಲ್ಲಿ ವಿವೇಕಾನಂದರ ಮಾಡಿದ ಭಾಷಣ ಯುರೋಪಿನ್ನರಿಗೆ ಭಾರತೀಯರ ಬಗೆಗಿದ್ದ ನಿಕೃಷ್ಟ ಭಾವನೆ ಬದಲಾಯಿಸಿತು ಎಂದರು.

ಏಷ್ಯಾ ಖಂಡದಲ್ಲಿ ಆಧ್ಯಾತ್ಮಿಕ ವ್ಯಕ್ತಿಗಳು ಜನಿಸಿದರೆ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿಜ್ಞಾನಿಗಳು, ತಂತ್ರಜ್ಞಾನಿಗಳು ಜನಿಸುತ್ತಾರೆ. ಆಧ್ಯಾತ್ಮದ ಜಗತ್ತಿಗೆ ಏಷ್ಯಾವೇ ಗುರುವಾಗಿದೆ. ಇದನ್ನು ಅರಿತಿದ್ದ ಸ್ವಾಮಿ ವಿವೇಕಾನಂದರು ಈ ಜಗತ್ತು ಉದ್ಧಾರ ಆಗಬೇಕಾದರೆ ನಮ್ಮ ತತ್ವ, ಧರ್ಮ ಹಾಗೂ ಯುರೋಪಿನ ವಿಜ್ಞಾನ ತಂತ್ರಜ್ಞಾನ ಮೇಳೈಸಬೇಕೆಂದು ಪ್ರತಿಪಾದಿಸಿದವರು ಎಂದು ಹೇಳಿದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಯುವಜನರು ಗುರುಗಳು ಮತ್ತು ಪೋಷಕರಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು. ಇದಕ್ಕಾಗಿ ಆರೋಗ್ಯ ಕಾಪಾಡಿಕೊಂಡು ಉತ್ತಮ ಶಿಕ್ಷಣ ಪಡೆದು ಗುರಿ ಸಾಧಿಸುವ ಕೆಲಸ ಮಾಡಬೇಕು. ಆಗ ನಿಮಗೆ ಸಿಗಬೇಕಾದ ಗೌರವ ಹುಡುಕಿಕೊಂಡು ಬರುತ್ತದೆ ಎಂದು ತಿಳಿಸಿದರು.

ಯುವ ಹೋರಾಟಗಾರ್ತಿ ಭವ್ಯ ನರಸಿಂಹಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಧಕಿ ಚಿತ್ರಾರಾವ್ ಅವರಿಗೆ ನಾಗರಿಕ ಸನ್ಮಾನ ಮಾಡಿ ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕೆ.ರಾಜು, ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ), ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವ್ , ಉಪಾಧ್ಯಕ್ಷ ಯರೇಹಳ್ಳಿ ಮಂಜು, ನಗರಸಭೆ ಅಧ್ಯಕ್ಷೆ ವಿಜಯ ಕುಮಾರಿ, ಉಪಾಧ್ಯಕ್ಷೆ ಸೋಮಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜ್ಮತ್, ಸದಸ್ಯರಾದ , ತಾಪಂ ಮಾಜಿ ಅಧ್ಯಕ್ಷ ಜಗದೀಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್, ಮುಖಂಡರಾದ ಡಿ.ಎಂ.ವಿಶ್ವನಾಥ್, ಚಲುವರಾಜು, ಶಿವಕುಮಾರಸ್ವಾಮಿ, ಗೋವಿಂದಸ್ವಾಮಿ, ಅನುಸೂಯಮ್ಮ, ಕಲ್ಪನಾ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಕೋಟ್ ................

ಯುವಕರ ಪ್ರತೀಕವಾಗಿರುವ ಸಂತ ಸ್ವಾಮಿ ವಿವೇಕಾನಂದರು ಸಮಾಜಕ್ಕೆ ನೀಡಿದ ತಿಳುವಳಿಕೆ ಪ್ರಸ್ತುತವಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ವಿಶ್ವದ ಗಮನ ಸೆಳೆದ ಅವರು, ಸಮಾಜದ ವಿವಿಧ ಹಂತಗಳಲ್ಲಿ ಯುವ ಶಕ್ತಿಗೆ ಚೈತನ್ಯ ತುಂಬಿದವರು. ವಿವೇಕಾನಂದರ ಯುವಕರ ಧ್ವನಿ ಮಾತ್ರ ಆಗಿರಲಿಲ್ಲ. ಸಂಸ್ಕೃತಿಯ ಧ್ವನಿಯೂ ಆಗಿದ್ದರು.

- ಡಿ.ಕೆ.ಸುರೇಶ್ , ಸಂಸದರು

ಬಾಕ್ಸ್ ...............

ಗಮನ ಸೆಳೆದ ರ್ಯಾಲಿ ಮತ್ತು ಪ್ರದರ್ಶನ

ರಾಮನಗರದ ರೋಟರಿ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಯುವಕರು ನೂರಾರು ಬೈಕ್ ಗಳಲ್ಲಿ ರ್ಯಾಲಿ ನಡೆಸಿದರು. ಪುತ್ಥಳಿ ಬಳಿಯಿಂದ ಆರಂಭವಾದ ರ್ಯಾಲಿ ಐಜೂರು ವೃತ್ತ, ಕೆಂಗಲ್ ಹನುಮಂತಯ್ಯ ವೃತ್ತ ಮೂಲಕ ಜೂನಿಯರ್ ಕಾಲೇಜು ಮೈದಾನ ತಲುಪಿತು.

ಮೈದಾನದಲ್ಲಿ ಸ್ವಾಮಿ ವಿವೇಕಾನಂದರ ಜೀವನ ಗಾಥೆ ಸಾರುವ ಚಿತ್ರಗಳ ಪ್ರದರ್ಶನ ಹಾಗೂ ಅವರನ್ನು ಕುರಿತಾದ ಪುಸ್ತಕಗಳು ವಿದ್ಯಾರ್ಥಿಗಳ ಗಮನ ಸೆಳೆದವು.

12ಕೆಆರ್ ಎಂಎನ್ 2,3.ಜೆಪಿಜಿ

2.ರಾಮನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ರಾಷ್ಟ್ರಸಂತ ಸ್ವಾಮಿ ವಿವೇಕಾನಂದರ 161ನೇ ಜಯಂತಿ , ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸಾದಕಿ ಚಿತ್ರಾರಾವ್ ಅವರಿಗೆ ನಾಗರಿಕ ಸನ್ಮಾನ ಸಮಾರಂಭವನ್ನು ಸಂಸದ ಡಿ.ಕೆ.ಸುರೇಶ್ ಉದ್ಘಾಟಿಸಿದರು.3.ರಾಮನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ರಾಷ್ಟ್ರಸಂತ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಸಮಾರಂಭದಲ್ಲಿ ಸಾಧಕಿ ಚಿತ್ರಾರಾವ್ ಅವರಿಗೆ ನಾಗರಿಕ ಸನ್ಮಾನ ಮಾಡಿ ಗೌರವಿಸಲಾಯಿತು.