ಸಾರಾಂಶ
ಚಿಕ್ಕಮಗಳೂರು, ಇಂದಿನ ಮಕ್ಕಳು ಮತ್ತು ಯುವ ಜನತೆ ವಿದ್ಯಾವಂತರಾಗುವ ಜೊತೆಗೆ ಸಂಸ್ಕಾರವಂತರೂ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಸಲಹೆ ಮಾಡಿದರು.
ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇಂದಿನ ಮಕ್ಕಳು ಮತ್ತು ಯುವ ಜನತೆ ವಿದ್ಯಾವಂತರಾಗುವ ಜೊತೆಗೆ ಸಂಸ್ಕಾರವಂತರೂ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಸಲಹೆ ಮಾಡಿದರು.
ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ವಿವಿಧ ವಿದ್ಯಾರ್ಥಿ ಸಂಘಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿದೆ. ಆದರೆ, ಶಿಕ್ಷಣವಂತರ ಸಂಖ್ಯೆ ಹೆಚ್ಚಾದಂತೆ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ, ವಿದ್ಯಾವಂತರಾದವರು ನಮ್ಮ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳನ್ನು ಮರೆಯುತ್ತಿದ್ದಾರೆ. ಇದರಿಂದಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ವಿಷಾಧಿಸಿದರು.ನಮ್ಮ ಮಕ್ಕಳು ಮತ್ತು ಯುವ ಜನತೆ ಜೀವನದ ಶಿಕ್ಷಣ ಕಲಿಯದಿದ್ದರೆ, ನಮ್ಮ ಹಿರಿಯರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯದಿದ್ದರೆ, ಅವರು ಯಾವುದೇ ಪದವಿ ಪಡೆದರೂ ಪ್ರಯೋಜನವಿಲ್ಲ. ಅದರಿಂದ ಸಮಾಜಕ್ಕೆ, ನಾಡಿಗೆ, ದೇಶಕ್ಕೆ ಯಾವುದೇ ಉಪಯೋಗವಿಲ್ಲ ಎಂದರು.ಇಂದಿನ ಮಕ್ಕಳು ಮತ್ತು ಯುವಜನತೆ ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳನ್ನೂ ಕಲಿಯಬೇಕು. ಶಿಸ್ತನ್ನು ಬೆಳೆಸಿಕೊಳ್ಳಬೇಕು. ತಂದೆ, ತಾಯಿ, ಅಕ್ಕ, ತಂಗಿ, ಅಣ್ಣ, ತಮ್ಮ ಬಂಧು ಬಾಂಧವರ ಬಾಂಧವ್ಯ ಉಳಿಸಿಕೊಳ್ಳಬೇಕು. ಗುರು ಹಿರಿಯರಿಗೆ ಗೌರವಿಸುವುದನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.ಹೆತ್ತವರು ತಮ್ಮಂತೆ ತಮ್ಮ ಮಕ್ಕಳೂ ಆಗಬಾರದು ಎಂದು ಕೂಲಿನಾಲಿ, ಸಾಲ ಸೋಲ ಮಾಡಿ ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಮಕ್ಕಳು ಅದನ್ನು ಅರಿಯಬೇಕು. ಹೆತ್ತವರ ಆಸೆ ಪೂರೈಸಲು ಮುಂದಾಗಬೇಕು ಎಂದರು.ಐಡಿಎಸ್‌ಜಿ ಕಾಲೇಜಿಗೆ ಈಗಾಗಲೇ ಅನೇಕ ಮೂಲಭೂತ ಸೌಲಭ್ಯವನ್ನು ತಾವು ಒದಗಿಸಿ ಕೊಟ್ಟಿದ್ದು, ಸದ್ಯದಲ್ಲೇ ಕಾಲೇಜಿಗೆ ಅಗತ್ಯವಿರುವ 50 ಕಂಪ್ಯೂಟರ್ ಗಳನ್ನೂ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.ಇದೇ ವೇಳೆ ಹಳೆಗನ್ನಡದ ಪದ್ಯ, ತತ್ವಪದ ಮತ್ತು ಜಾನಪದ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಮತ್ತು ರಂಗಕರ್ಮಿ ಡಾ. ಬೇಲೂರು ರಘುನಂದನ್ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ವಾಣಿಜ್ಯೀ ಕರಣ ಗೊಳ್ಳುತ್ತಿದೆ. ಇದರಿಂದ ನೈಜ ಶಿಕ್ಷಣದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಶಿಕ್ಷಣದ ವಾಣಿಜ್ಯೀಕರಣ ನಿಲ್ಲಬೇಕು. ಸ್ವಯಂ ಕಲಿಕೆ ಪದ್ಧತಿ ಜಾರಿಗೆ ಬರಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ತಸ್ಮಿಯಾ ಕೌಸರ್ ಮನಿಯಾರ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.ಅಂತಾರಾಷ್ಟ್ರೀಯ ಖ್ಯಾತಿಯ ಜಾನಪದ ಕಲಾವಿದೆ ಸವಿತ ಗೀತಗಾಯನದ ಮೂಲಕ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸು ವಂತೆ ಮಾಡಿದರು. ವಿದ್ಯಾರ್ಥಿ ಸಂಘಗಳ ನೂತನ ಪದಾಧಿಕಾರಿಗಳಿಗೆ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಇದೇ ವೇಳೆ ಐಡಿಎಸ್‌ಜಿ ಕಾಲೇಜಿಗೆ ನ್ಯಾಕ್ ಕಮಿಟಿಯಿಂದ ಎ ಗ್ರೇಡ್ ದೊರೆತ ಹಿನ್ನೆಲೆಯಲ್ಲಿ ವಿಪ ಸದಸ್ಯ ಎಸ್.ಎಲ್. ಭೋಜೇ ಗೌಡ ಸಮಾರಂಭದಲ್ಲಿ ಪ್ರಾಂಶುಪಾಲರಿಗೆ ನ್ಯಾಕ್ ಸಮಿತಿ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಈರೇಗೌಡ ಕಾಲೇಜಿಗೆ 20 ಗಡಿಯಾರಗಳನ್ನು ಕೊಡುಗೆಯಾಗಿ ನೀಡಿದರು.ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಎ.ಆರ್. ಸುಧಾ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾದ ಬಿ.ತಿಪ್ಪೇರುದ್ರಪ್ಪ, ಭದ್ರೇಗೌಡ, ಉಮೇಶ್, ಮೋಹನ್, ರಾಧಾ ಸುಂದರೇಶ್, ಸಿ.ಪಿ.ನಾರಾಯಣ್, ರಾಜಶೇಖರ್, ಸುಮಂತ್, ಆದಿಲ್, ವಿದ್ಯಾರ್ಥಿಗಳಾದ ಎಚ್.ಕೆ. ಸೌಂದರ್ಯ, ಸಿ.ಸಿ.ಪ್ರಶಾಂತ್, ಸಹ ಪ್ರಾಧ್ಯಾಪಕ ಡಾ. ಲೋಕೇಶ್, ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಕೆ.ಎನ್. ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.19 ಕೆಸಿಕೆಎಂ 2ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭ ದಲ್ಲಿ ಕಾಲೇಜಿಗೆ ನ್ಯಾಕ್ ಕಮಿಟಿಯಿಂದ ಎ ಗ್ರೇಡ್ ದೊರೆತ ಹಿನ್ನೆಲೆಯಲ್ಲಿ ವಿಪ ಸದಸ್ಯ ಎಸ್.ಎಲ್. ಭೋಜೇಗೌಡ ಪ್ರಾಂಶುಪಾಲರಿಗೆ ನ್ಯಾಕ್ ಸಮಿತಿ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. ಪ್ರಾಂಶುಪಾಲರಾದ ತಸ್ಮಿಯಾ ಕೌಸರ್ ಮನಿಯಾರ್, ಡಾ. ಕೆ.ಎನ್. ಲಕ್ಷ್ಮೀಕಾಂತ್ ಇದ್ದರು.