ಸಾರಾಂಶ
ಅಜ್ಜರಕಾಡು ವಿದ್ಯಾ ವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಗ್ರಂಥಾಲಯದ ಸಭಾಂಗಣದಲ್ಲಿ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಹಿರಿಯ ಸಾಹಿತಿ ವಸಂತಿ ಶೆಟ್ಟಿ ಬ್ರಹ್ಮಾವರ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಯುವಜನರು ಉತ್ತಮ ಪುಸ್ತಕಗಳೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಹಿರಿಯ ಸಾಹಿತಿ ವಸಂತಿ ಶೆಟ್ಟಿ ಬ್ರಹ್ಮಾವರ್ ತಿಳಿಸಿದರು.ಅವರು ಭಾನುವಾರ ಅಜ್ಜರಕಾಡು ವಿದ್ಯಾ ವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಗ್ರಂಥಾಲಯದ ಸಭಾಂಗಣದಲ್ಲಿ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಆಳವಡಿಸಿಕೊಂಡಗ ಮಾತ್ರ ಎತ್ತರಕ್ಕೆ ಏರಲು ಸಾಧ್ಯವಾಗುತ್ತದೆ. ಮೌಲ್ಯಯುತ ಜೀವನಕ್ಕೆ ನಮ್ಮನ್ನು ಒಗ್ಗೂಡಿಸಲು ಗ್ರಂಥಾಲಯಗಳಲ್ಲಿರುವ ಪುಸ್ತಕಗಳು ತುಂಬಾ ಸಹಕಾರಿಯಾಗುತ್ತವೆ ಎಂದರು.ಯುವಜನರು ಮೊಬೈಲ್ ಗೀಳಿನಿಂದ ಹೊರಬಂದು ಉತ್ತಮ ಪುಸ್ತಕಗಳನ್ನ ಓದುವ ಹಾಗೂ ಕಥೆ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಈ ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳು ಇವೆ ಇವುಗಳನ್ನು ಸದುಪಯೋಗಪಡಿಸಿ ಕೊಳ್ಳಿ ಎಂದು ಹೇಳಿದರು.ಗ್ರಂಥಾಲಯದ ವತಿಯಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಓದುವ ಕಲೆಯನ್ನು ಅವರಲ್ಲಿ ಬೆಳೆಸುವ ಕಾರ್ಯವನ್ನು ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು.
ಎಸ್.ಆರ್. ರಂಗನಾಥನ್ ಅವರ ಗ್ರಂಥಾಲಯ ವಿಜ್ಞಾನಕ್ಕೆ ನೀಡಿದ ಕೊಡುಗೆಗಳನ್ನ ನೆನೆಪಿಸಿದರು.ಇದೇ ಸಂದರ್ಭದಲ್ಲಿ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಂಥಪಾಲಕರಾದ ರಂಜಿತ ಸಿ. ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ದರ್ಜೆ ಸಹಾಯಕರಾದ ಶಕುಂತಳ ಕುಂದರ್ ವಂದಿಸಿದರು.