ಹಿರೇಕೆರೂರು: ಭಾರತದ ಸಂಸ್ಕೃತಿ ಮತ್ತು ಪರಂಪರೆ ವಿಶ್ವದಲ್ಲೇ ವಿಶಿಷ್ಟ ಸ್ಥಾನವನ್ನು ಹೊಂದಿದ್ದು, ಯುವಜನತೆ ನಮ್ಮ ಸಂಸ್ಕೃತಿಯ ಬೇರುಗಳನ್ನು ಮರೆಯದೆ ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ತಿಳಿಸಬೇಕು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಕರೆ ನೀಡಿದರು. ಬಿ.ಆರ್. ತಂಬಾಕದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ದಿನಾಚರಣೆ ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಆಧುನಿಕ ಜೀವನಶೈಲಿಯ ಪ್ರಭಾವದ ನಡುವೆಯೂ ನಮ್ಮ ಸಂಪ್ರದಾಯ, ನೈತಿಕ ಮೌಲ್ಯಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಶಿಕ್ಷಣದ ಜತೆಗೆ ಸಂಸ್ಕೃತಿ ಮತ್ತು ಮೌಲ್ಯಾಧಾರಿತ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವೆಂದು ತಿಳಿಸಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಂಘಟನಾ ಕೌಶಲ್ಯ ಹಾಗೂ ಸಾಮಾಜಿಕ ಬಾಂಧವ್ಯವನ್ನು ಬೆಳೆಸುತ್ತವೆ ಎಂದು ಹೇಳಿದರು.ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣವನರ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ. ಭಾರತವು ವೈವಿಧ್ಯಮಯ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಗಳ ನಾಡಾಗಿದೆ. ನಮ್ಮ ದೇಶದ ಪ್ರತಿಯೊಂದು ರಾಜ್ಯ, ಪ್ರತಿಯೊಂದು ಭಾಷೆ, ಪ್ರತಿಯೊಂದು ಆಚರಣೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇಂತಹ ಶ್ರೀಮಂತ ಪರಂಪರೆಯನ್ನು ಹೊಂದಿರುವ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಹೊಂದಿದ್ದೇವೆ. ಸಾಂಪ್ರದಾಯಿಕ ದಿನಾಚರಣೆಯು ಕೇವಲ ಒಂದು ಕಾರ್ಯಕ್ರಮವಲ್ಲ; ಇದು ನಮ್ಮ ಸಂಸ್ಕೃತಿಯ ಬಗ್ಗೆ ಗೌರವ ಮತ್ತು ಅಭಿಮಾನವನ್ನು ವ್ಯಕ್ತಪಡಿಸುವ ಒಂದು ಹಬ್ಬವಾಗಿದೆ ಎಂದರು.ಸಾಂಪ್ರದಾಯಿಕ ದಿನವನ್ನು ಕಾಲೇಜಿನಲ್ಲಿ ಅತ್ಯಂತ ವೈಭವ, ಸಂಭ್ರಮ ಹಾಗೂ ಸಾಂಸ್ಕೃತಿಕ ಸೊಬಗಿನೊಂದಿಗೆ ಆಚರಿಸಲಾಯಿತು. ಕಾಲೇಜಿನ ಆವರಣವು ಬಣ್ಣ ಬಣ್ಣದ ಅಲಂಕಾರ, ಸಾಂಪ್ರದಾಯಿಕ ವಿನ್ಯಾಸಗಳು ಮತ್ತು ವಿದ್ಯಾರ್ಥಿಗಳ ವೈವಿಧ್ಯಮಯ ವೇಷಭೂಷಣಗಳಿಂದ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಕರ್ನಾಟಕ, ಪಂಜಾಬ್, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಗಮನ ಸೆಳೆದರು. ವಿದ್ಯಾರ್ಥಿನಿಯರು ಸೀರೆ, ಲಂಗ-ದಾವಣಿ ಹಾಗೂ ವಿವಿಧ ಜನಾಂಗಗಳ ಉಡುಪುಗಳಲ್ಲಿ ಮಿಂಚಿದರೆ, ವಿದ್ಯಾರ್ಥಿಗಳು ಪಂಚೆ, ಕುರ್ಥಾ, ಶೇರ್ವಾನಿ ಹಾಗೂ ವಿವಿಧ ಸಾಂಪ್ರದಾಯಿಕ ವೇಷಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ, ಪ್ರಾಧ್ಯಾಪಕರಾದ ಪಿ.ಎಂ. ವಿಜಯಕುಮಾರ, ಸಿ.ಆರ್. ದೂದಿಹಳ್ಳಿ, ಕಿರಣ್ ಬಾಗಲರ, ಶಶಿಕುಮಾರ ಕಡೂರ, ಚಂದ್ರೇಗೌಡ ಆರ್, ಸಂಜೀವಕುಮಾರ ಕೆಂಪಳ್ಳೇರ, ನಾಗರಾಜ ಉಪ್ಪಾರ, ಲಯಾ ಬಿ.ವೈ., ಪೂಜಾ ಅಂಡಗಟಿ, ಸರಸ್ವತಿ ಕಂಬಾಳಿಮಠ, ದೀಪಾ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ರಘು ಹಂಚಿನ, ಚೇತನ ವಿ.ಬಿ., ರೋಹನ ಪಾಟೀಲ, ವಿಕಾಸ ಎಂ.ಎಸ್., ನಯನಕುಮಾರ ದೂದೀಹಳ್ಳಿ, ಗಿರೀಶ ಪಿ.ಟಿ., ಕರಿಬಸವ ಎಸ್.ಎಂ. ಇತರಿದ್ದರು.
ಯುವಜನತೆ ನಮ್ಮ ಸಂಸ್ಕೃತಿಯ ಮಹತ್ವ ಅರಿಯಬೇಕು-ಎಸ್.ಎಸ್. ಪಾಟೀಲ
ಭಾರತದ ಸಂಸ್ಕೃತಿ ಮತ್ತು ಪರಂಪರೆ ವಿಶ್ವದಲ್ಲೇ ವಿಶಿಷ್ಟ ಸ್ಥಾನವನ್ನು ಹೊಂದಿದ್ದು, ಯುವಜನತೆ ನಮ್ಮ ಸಂಸ್ಕೃತಿಯ ಬೇರುಗಳನ್ನು ಮರೆಯದೆ ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ತಿಳಿಸಬೇಕು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಕರೆ ನೀಡಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.