ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಯುವ ಜನತೆಯು ದುಶ್ವಟಗಳಿಂದ ದೂರವಿದ್ದು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಮನವಿ ಮಾಡಿದರು.ನಗರದ ಸರ್ಕಾರಿ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಚಿತ್ತರಗಿ ಇಳಕಲ್ ವಿಜಯ ಮಹಂತೇಶ್ವರ ಸಂಸ್ಥಾನದ ಪೂಜ್ಯ ಶ್ರೀ ಮ.ನಿ.ಪ್ರ.ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆಯಲ್ಲಿ ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಭಿಕ್ಷೆ ಬೇಡಿದ ಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಯುವ ಜನತೆಯು ದುಶ್ಚಟಗಳನ್ನು ಬಿಟ್ಟು ಸುಸಂಸ್ಕೃತರಾಗಿ ಬದುಕಬೇಕು. ಪಠ್ಯಪುಸ್ತಕಗಳಲ್ಲಿ ಮದ್ಯ ಮತ್ತು ಮಾದಕ ವ್ಯವಸನಗಳ ದುಷ್ಪಾರಿಣಾಗಳ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ, ದುಶ್ಚಟಗಳು ಸಮಾಜ, ಕುಟುಂಬಕ್ಕೆ ಮಾರಕವಾಗಿವೆ. ಇದರ ಜತೆಗೆ ಯುವ ಜನತೆ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದು, ಮೊಬೈಲ್ ಚಟ ಅಂಟಿಸಿಕೊಂಡಿರುವುದು ತುಂಬಾ ಆಘಾತಕಾರಿಯಾದದ್ದು, ಇದರಿಂದಾಗಿ ತಲೆನೋವು, ನಿದ್ರಾಹೀನತೆ, ಆಲಸ್ಯ, ಓದಿನಲ್ಲಿ ನಿರಾಸಕ್ತಿ, ಚಟುವಟಿಕೆ ರಹಿತ ಬದುಕು ಸೇರಿದಂತೆ ಹಲವಾರು ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡಲಿವೆ ಎಂದರು.
ದೇಶ ವಿದೇಶಗಳಲ್ಲಿ ಸಂಚರಿಸಿ ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿದವರು ಡಾ.ಮಹಾಂತ ಶಿವಯೋಗಿಗಳು, ಪ್ರಮುಖವಾಗಿ ಸ್ವಾಮೀಜಿಯವರು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಗೊಂಡ ಮಹಾಂತ ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾದುದು ಎಂದು ಹೇಳಿದರು.ಮಾನಸಿಕ ಆರೋಗ್ಯ ತಜ್ಞ ವೈದ್ಯರಾದ ಡಾ.ಮಂಜುನಾಥ್ ಅವರು ಉಪನ್ಯಾಸ ನೀಡಿ ವ್ಯಸನಗಳಿಗೆ ಬಲಿಯಾದರೆ ಪ್ರಜ್ಞಾವಂತಿಕೆ ಕಡಿಮೆಯಾಗಿ ಕ್ರಿಮಿನಲ್ ಆಗಿ ಬದಲಾಗುತ್ತಾರೆ. ವಿವಿಧ ಅಪರಾಧಗಳನ್ನು ಮಾಡಿ ಜೈಲು ಪಾಲಾಗುವ ಜನರು ವಿವಿಧ ಬಗೆಯ ವ್ಯಸನಿಗಳೇ ಆಗಿರುತ್ತಾರೆ. ಸಮಾಜದಲ್ಲಿ ಚಟಗಳು ಜಾಸ್ತಿಯಾದರೆ ಕ್ರಿಮಿನಲ್ ಪ್ರಕರಣಗಳು ಹೆಚ್ಚಳವಾಗುತ್ತವೆ ಎಂದು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಉಪ ವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ ಮದ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳ ವ್ಯಸನ ಮುಕ್ತಗೊಳಿಸುವ ಪ್ರತಿಜ್ಞಾ ವಿಧಿ ಭೋಧಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಚಿತ್ತರಗಿ ಇಳಕಲ್ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನದ ಭಕ್ತರು ಹಾಗೂ ಮಹಾಂತ ಶಿವಯೋಗಿಗಳ ಆಪ್ತರೂ ಆದ ಕೆ. ಚಂದ್ರಪ್ಪ, ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಎಂ.ಎನ್.ರವಿಕಾಂತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿಬ್ಬಂದಿ, ಆಕಾಶವಾಣಿಯ ನವೀನ್ ಮಸ್ಕಲ್ ಸೇರಿದಂತೆ ಸರ್ಕಾರಿ ವಿಜ್ಞಾನ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.