ಪ್ರಜಾಪ್ರಭುತ್ವ ಭವಿಷ್ಯಕ್ಕೆ ಯುವಮತದಾರರೇ ರೂವಾರಿಗಳು: ನ್ಯಾ.ಮೊಯಿನುದ್ದೀನ್

| Published : Jan 26 2024, 01:49 AM IST

ಪ್ರಜಾಪ್ರಭುತ್ವ ಭವಿಷ್ಯಕ್ಕೆ ಯುವಮತದಾರರೇ ರೂವಾರಿಗಳು: ನ್ಯಾ.ಮೊಯಿನುದ್ದೀನ್
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನದ ಹಕ್ಕು ಸಂವಿಧಾನಿಕ ಹಕ್ಕಾಗಿದ್ದು, ಭಾರತದ ಪ್ರಜಾಪ್ರಭುತ್ವದ ಭವ್ಯ ಭವಿಷ್ಯದ ರೂವಾರಿಗಳು ಇಂದಿನ ಯುವ ಮತದಾರರಾಗಿದ್ದಾರೆ.

ಹಿರಿಯೂರು: ಮತದಾನದ ಹಕ್ಕು ಸಂವಿಧಾನಿಕ ಹಕ್ಕಾಗಿದ್ದು, ಭಾರತದ ಪ್ರಜಾಪ್ರಭುತ್ವದ ಭವ್ಯ ಭವಿಷ್ಯದ ರೂವಾರಿಗಳು ಇಂದಿನ ಯುವ ಮತದಾರರಾಗಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾ.ಮೊಹಮ್ಮದ್ ಮೊಯಿನುದ್ದೀನ್ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಚುನಾವಣೆ ಶಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.

ಯುವ ಮತದಾರರಲ್ಲಿ ಮತದಾನದ ಅರಿವು ಮೂಡಿಸುವ ಉದ್ದೇಶದೊಂದಿಗೆ 2011ರಿಂದ ಮತದಾರ ದಿನಾಚರಣೆ ನಡೆಸಲಾಗುತ್ತಿದೆ. ಆದ್ದರಿಂದ ಯುವ ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ಅಮೂಲ್ಯ ಮತದಾನ ಮಾಡುವ ಮೂಲಕ ಉತ್ತಮ ನಾಯಕನನ್ನು ಆಯ್ಕೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಡಿವೈಎಸ್ಪಿ ಚೈತ್ರಾ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಮತದಾನ ಮಾರಾಟಕ್ಕಿಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿಯಬೇಕು. ಪ್ರತಿಯೊಬ್ಬ ಮತದಾರ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ ಮಾತ್ರ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಸಾಧ್ಯ. ಚುನಾವಣೆ ಕಾರ್ಯಕ್ರಮದಲ್ಲಿ ಕಂದಾಯ ಹಾಗೂ ಚುನಾವಣಾ ಶಾಖೆಗಿಂತ ಶಿಕ್ಷಣ ಇಲಾಖೆ ಕಾರ್ಯ ಅತಿಮುಖ್ಯವಾಗಿದೆ ಎಂದರು.

ಈ ವೇಳೆ ತಹಸೀಲ್ದಾರ್ ಸಿ.ರಾಜೇಶ್ ಕುಮಾರ್, ಸಹಾಯಕ ಸರ್ಕಾರಿ ಅಭಿಯೋಜಕ ಟಿ.ಮಂಜಣ್ಣ, ಪೌರಾಯುಕ್ತ ಎಚ್.ಮಹಂತೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾ.ಶಿಲ್ಪಾ ತಿಮ್ಮಾಪುರ, ತಾಲೂಕು ವಕೀಲರ ಸಂಘದ ಅಧ್ಯಕ್ಷ ರಂಗೇನಹಳ್ಳಿ ರಾಮಚಂದ್ರಪ್ಪ, ಚುನಾವಣಾ ಶಿರಸ್ಥೇದಾರ್ ಎಂ.ಬಿ.ಮೋಹನ್, ಆಡಳಿತ ಶಿರಸ್ಥೇದಾರ್ ತಿಪ್ಪೇಸ್ವಾಮಿ, ಐಮಂಗಳ ವಿಎ ಚೈತ್ರಾ, ಶಿಕ್ಷಕಿ ರಾಧ, ಸಿಆರ್‌ಪಿ ಹರೀಶ್ ಮುಂತಾದವರು ಹಾಜರಿದ್ದರು.