ಕನ್ನಡಪ್ರಭ ವಾರ್ತೆ ಹಾಸನ

ಜಾಲಿ ರೈಡ್‌ಗೆಂದು ಬುಲೆಟ್‌ನಲ್ಲಿ ಹೊರಟಿದ್ದ ಯುವತಿಯರಿಗೆ ರಸ್ತೆಯಲ್ಲಿದ್ದ ಹಂಪ್‌ ಕಾಣದೆ ವೇಗವಾಗಿ ಹಂಪ್‌ ನೆಗೆಸಿದ್ದರಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರಿಂದ ಓರ್ವ ಯುವತಿ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮೃತ ಯುವತಿಯನ್ನು ಸತ್ಯಮಂಗಲ ಬಡಾವಣೆಯ ಪ್ರಿಯಾ (೨೩) ಎಂದು ಗುರುತಿಸಲಾಗಿದೆ. ಮೃತ ಪ್ರಿಯಾ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಸಿಎ ಓದುತ್ತಿದ್ದಳು. ತೀವ್ರ ಗಾಯಗೊಂಡಿರುವ ಸ್ವಾತಿಗೆ ಕಳೆದ ನವೆಂಬರ್‌ನಲ್ಲಷ್ಟೇ ಮದುವೆಯಾಗಿತ್ತು. ಭಾನುವಾರ ರಾತ್ರಿ ಜಾಲಿ ರೈಡ್‌ಗೆಂದು ಬುಲೆಟ್‌ನಲ್ಲಿ ತೆರಳಿದ್ದಾಗ ಹೊಸಕೊಪ್ಪಲಿನ ಇಂಡಸ್ಟ್ರಿಯಲ್‌ ಏರಿಯಾ ಸರ್ಕಲ್‌ನಿಂದ ಹನುಮಂತಪುರ ಕಡೆಗೆ ಹೋಗುವ ರಸ್ತೆಯಲ್ಲಿ ತೆರಳುವಾಗ ರಸ್ತೆ ಮಧ್ಯದಲ್ಲಿದ್ದ ಹಂಪ್ ಸ್ಪಷ್ಟವಾಗಿ ಕಾಣಿಸದೇ ಬೈಕ್‌ ನೆಗೆದಿದೆ. ಈ ವೇಳೆ ಬೈಕ್‌ ಓಡಿಸುತ್ತಿದ್ದ ಪ್ರಿಯಾ ನಿಯಂತ್ರಣ ತಪ್ಪಿದ್ದರಿಂದ ಬೈಕ್‌ ಸಮೇತ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಹೆಲ್ಮೆಟ್‌ ಧರಿಸಿಲ್ಲವಾದ್ದರಿಂದ ಇಬ್ಬರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಪರಿಣಾಮವಾಗಿ ಪ್ರಿಯಾ ಸ್ಥಳದಲ್ಲೇ ಅಸುನೀಗಿದರೆ, ಸ್ವಾತಿ ತಲೆಗೂ ಗಂಭೀರವಾದ ಪೆಟ್ಟು ಬಿದ್ದಿದೆ. ಸ್ವಾತಿಯನ್ನು ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಅವೈಜ್ಞಾನಿಕ ಹಂಪ್‌:

ಹೊಸಕೊಪ್ಪಲಿನ ಇಂಡಸ್ಟ್ರಿಯಲ್‌ ಏರಿಯಾ ಸರ್ಕಲ್‌ನಿಂದ ಹನುಮಂತಪುರ ಕಡೆಗೆ ಹೋಗುವ ರಸ್ತೆಯಲ್ಲಿ ಸಾಕಷ್ಟು ಹಂಪ್‌ಗಳಿವೆ. ಆದರೆ, ಅಲ್ಲಿರುವ ಯಾವ ಹಂಪ್‌ಗಳು ಕೂಡ ವೈಜ್ಞಾನಿಕವಾಗಿಲ್ಲ. ಅಂದರೆ ವಾಹನ ಚಾಲಕರಿಗೆ ಸ್ಪಷ್ಟವಾಗಿ ಕಾಣುವುದೇ ಇಲ್ಲ. ಏಕೆಂದರೆ ಈ ಹಂಪ್‌ಗಳಿಗೆ ಬಿಳಿ ಪಟ್ಟಿ ಹಾಕಿಲ್ಲ. ಅದರ ಬಳಿ ರಿಫ್ಲೆಕ್ಟರ್‌ಗಳನ್ನು ಅಳವಡಿಸಿಲ್ಲ. ಹಂಪ್‌ ಸಿಗುವುದಕ್ಕೂ ಮುಂಚೆಯೇ ಸೂಚನಾ ಫಲಕವನ್ನೂ ಹಾಕಿಲ್ಲ. ಈ ರಸ್ತೆ ನೇರವಾಗಿ ಇದ್ದು, ಅಲ್ಲಿ ಹೆಚ್ಚಿನ ವಾಹನಗಳು ಓಡಾಡದ ಕಾರಣ ಜಾಲಿ ರೈಡ್‌ಗೆ ಹೋಗುವವರು ಅದೇ ರಸ್ತೆಗೆ ಹೆಚ್ಚಾಗಿ ಹೋಗುತ್ತಾರೆ. ಅಂತೆಯೇ ಪ್ರಿಯಾ ಮತ್ತು ಸ್ವಾತಿ ಕೂಡ ಆ ರಸ್ತೆಗೆ ಹೋಗಿದ್ದರು.

ಹೆಲ್ಮೆಟ್‌ ಹಾಕಿರಲಿಲ್ಲ:


ಇಲ್ಲಿ ಅವೈಜ್ಞಾನಿಕ ಹಂಪ್‌ ಆಕೆ ಸಾವಿಗೆ ಎಷ್ಟು ಕಾರಣವಾಯಿತೋ.. ಆಕೆ ಹೆಲ್ಮೆಟ್‌ ಧರಿಸದಿದ್ದಿದ್ದೂ ಕೂಡ ಸಾವಿಗೆ ಕಾರಣವಾಗಿದೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಎಂದು ಪೊಲೀಸ್‌ ಇಲಾಖೆ ಎಷ್ಟೇ ಜಾಗೃತಿ ಮೂಡಿಸುವ ಕೆಲಸ ಮಾಡಿದರೂ ವಿದ್ಯಾವಂತರು, ಪ್ರಜ್ಞಾವಂತರು ಎನಿಸಿಕೊಂಡವರೇ ಸಾಕಷ್ಟು ಜನ ಹೆಲ್ಮೆಟ್‌ ಧರಿಸದೆ ಬೈಕ್‌ ಸ್ಕೂಟರ್‌ ಚಲಾಯಿಸುತ್ತಿದ್ದಾರೆ. ಸಂಭವಿಸಿರುವ ಎಷ್ಟೋ ಅಪಘಾತಗಳಲ್ಲಿ ಹೆಲ್ಮೆಟ್‌ ಧರಿಸಿಲ್ಲದ ಕಾರಣಕ್ಕಾಗಿಯೇ ಬಹಳಷ್ಟು ಸಾವುಗಳು ಸಂಭವಿಸಿವೆ. ಹಾಗೆಯೇ ಹೆಲ್ಮೆಟ್‌ ಧರಿಸಿದ್ದರಿಂದ ಎಷ್ಟೋ ಜನರ ಜೀವ ಉಳಿದಿರುವ ಉದಾಹರಣೆಗಳು ಇವೆ. ಆ ಸಂದರ್ಭಕ್ಕೆ ಅಯ್ಯೋ...ಹೆಲ್ಮೆಟ್‌ ಧರಿಸಿದ್ದರೆ ನನ್ನ ಮಗ ಅಥವಾ ಮಗಳು ಬದುಕುತ್ತಿದ್ದರು ಎಂದು ಕಣ್ಣೀರಿಡುವ ಪೋಷಕರು ಅದೇ ಮಗ ಅಥವಾ ಮಗಳು ಬೈಕ್‌ ಅಥವಾ ಸ್ಕೂಟಿ ತೆಗೆದುಕೊಂಡು ಹೊರಡುವಾಗ ಹೆಲ್ಮೆಟ್‌ ಧರಿಸು ಎಂದು ಬುದ್ದಿವಾದ ಹೇಳುವ ಗೋಜಿಗೆ ಹೋಗುವುದಿಲ್ಲ. ಕೆಲವರು ಹೇಳಿದರೂ ಅದನ್ನು ಕೇಳುವ ವ್ಯವದಾನ ಆ ಮಕ್ಕಳಲ್ಲಿ ಇರುವುದಿಲ್ಲ. ಹಾಗಾಗಿ ಪ್ರಸ್ತುತ ಪೊಲೀಸರು ನಮ್ಮನ್ನು ಹಿಡಿಯುತ್ತಾರೆ, ದಂಡ ಹಾಕುತ್ತಾರೆ ಎನ್ನುವ ಭಯಕ್ಕೆ ಹೆಲ್ಮೆಟ್‌ ಹಾಕುವ ಬದಲು ನಮ್ಮ ಜೀವ ರಕ್ಷಣೆಗಾಗಿ ಹೆಲ್ಮೆಟ್‌ ಹಾಕುವಂತಾಗಬೇಕು. ಇಂತಹ ಜಾಗೃತಿಯನ್ನು ಪೊಲೀಸರೇ ಮೂಡಿಸಬೇಕಿಲ್ಲ. ಶಾಲಾ ಕಾಲೇಜುಗಳಲ್ಲೂ ಈ ಕೆಲಸ ಆಗಬೇಕು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಕೇವಲ ವಿದ್ಯಾವಂತರಾಗುತ್ತಿದ್ದಾರೆಯೇ ವಿನಃ ಬುದ್ಧಿವಂತರಾಗುತ್ತಿಲ್ಲ...ಪ್ರಜ್ಞಾವಂತರೂ ಆಗುತ್ತಿಲ್ಲ. ಇದೆಲ್ಲದರ ಪರಿಣಾಮವೇ ಇಂತಹ ಸಾವುಗಳು.