ಸಾರಾಂಶ
ಉಡುಪಿ : ಮಲ್ಪೆಯ ಪಡುಕೆರೆ ಬೀಚ್‌ನಲ್ಲಿ ಯುವತಿಯೊಬ್ಬಳ ಬಿಕಿನಿ ಫೋಟೋ ಶೂಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ. ಈ ಯುವತಿ ತನ್ನ ಫೋಟೋಶೂಟ್ ಮಾಡುತ್ತಿರುವಾಗ ಪೊಲೀಸರು ಬಂದು ಅಡ್ಡಿಪಡಿಸಿದ್ದಾರೆ ಎಂದು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಆರೋಪಿಸಿದ್ದಾರೆ. ಅದಕ್ಕೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ಹೊರರಾಜ್ಯದ ಮಾಡೆಲ್ ಎಂದು ಹೇಳಲಾಗಿರುವ ಈ ಯುವತಿ, ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದು, ತನ್ನ ಫೋಟೋಶೂಟ್ ನಡೆಯುತ್ತಿದ್ದಾಗ ಪೊಲೀಸರು ಅಡ್ಡಿ ಪಡಿಸಿದ್ದು, ಬಟ್ಟೆ ಹಾಕಿಕೊಳ್ಳಿ, ಇಲ್ಲದಿದ್ದರೇ ಸ್ಥಳೀಯರು ಹೊಡೆಯುತ್ತಾರೆ ಎಂದು ಹೇಳಿದರು. ಹೀಗೆ ನೈತಿಕ ಪೊಲೀಸ್ ಗಿರಿ ನಡೆಸಲು ಸ್ಥಳೀಯರು ಯಾರು ಎಂದಾಕೆ ಪ್ರಶ್ನಿಸಿದ್ದಾಳೆ.
ಅಲ್ಲದೇ ಸಾರ್ವಜನಿಕ ಪ್ರದೇಶ ಬೀಚ್‌ನಲ್ಲಿ ಫೋಟೋಶೂಟ್ ಮಾಡಿಕೊಂಡರೆ ತಪ್ಪೇನು? ಬಿಕಿನಿ ಹಾಕಿಕೊಂಡು ಫೋಟೋಶೂಟ್ ಮಾಡುವುದು ಕಾನೂನು ಉಲ್ಲಂಘನೆಯೇ ಎಂದೂ ಪ್ರಶ್ನಿಸಿದ್ದಾಳೆ. ಈ ಫೋಟೋ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಸಕತ್ ಲೈಕ್ ಪಡೆದಿರುವ ಆಕೆಯನ್ನು ಕೆಲವರು ಬೆಂಬಲಿಸಿದ್ದರೇ, ಕೆಲವರು ಛಿಮಾರಿಯನ್ನೂ ಹಾಕಿದ್ದಾರೆ.
----------
ಪಡುಬಿದ್ರಿ ಬೀಚಲ್ಲಿ ಜೋಡಿಯ ಅಸಭ್ಯ ವರ್ತನೆ
ಕಾಪು ತಾಲೂಕಿನ ಪಡುಬಿದ್ರಿ ಬ್ಲೂ ಫ್ಲಾಗ್ ಬೀಚಿನಲ್ಲಿ ಯುವಕ ಮತ್ತು ಯುವತಿ ಅಸಭ್ಯವಾಗಿ ವರ್ತಿಸುತಿದ್ದಾರೆಂದು ಸಾರ್ವಜನಿಕರಿಂದ ಪೊಲೀಸರಿಗೆ ದೂರು ಬಂದಿತ್ತು. ಅದರಂತೆ ಬೀಟ್ ಕರ್ತವ್ಯದಲ್ಲಿದ್ದ ಎಎಸ್ಐ ಸ್ಥಳಕ್ಕೆ ಭೇಟಿ ನೀಡಿ ಯುವಕ ಮತ್ತು ಯುವತಿಯನ್ನು ಕರೆದು, ಇದು ಬ್ಲೂ ಫ್ಲಾಗ್ ಬೀಚ್, ವಸತಿ ಪ್ರದೇಶವಾಗಿರುವ ಬಗ್ಗೆ ತಿಳಿಸಿದ್ದು, ಯುವಕ ಯುವತಿ ಅಲ್ಲಿಂದ ತೆರಳಿದ್ದಾರೆ.
ಆದರೆ ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಅಲ್ಲದೇ ಯುವತಿಯನ್ನು ಸಂಪರ್ಕಿಸಿ ಅವರಿಗೆ ಯಾವುದೇ ದೂರುಗಳಿದ್ದಲ್ಲಿ ಮುಕ್ತವಾಗಿ ನೀಡಬಹುದು ಎಂದು ತಿಳಿಸಲಾಗಿದೆ. ಈ ಬಗ್ಗೆ ದೂರು ಬಂದಲ್ಲಿ ಕಾನೂನಿನಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಡುಬಿದ್ರಿ ಪೊಲೀಸರು ತಿಳಿಸಿದ್ದಾರೆ.