ಯುವತಿಯರು ಸರ್ಕಾರದ ಸೌಲಭ್ಯ ಉಪಯೋಗಿಸಿಕೊಳ್ಳಿ: ಸಂಸದ ಬಿ.ವೈ.ರಾಘವೇಂದ್ರ

| Published : Jan 14 2025, 01:01 AM IST

ಯುವತಿಯರು ಸರ್ಕಾರದ ಸೌಲಭ್ಯ ಉಪಯೋಗಿಸಿಕೊಳ್ಳಿ: ಸಂಸದ ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು. ಹದಿಹರೆಯದಲ್ಲಿ ಮನಸ್ಸು ಚಂಚಲವಾಗುತ್ತದೆ ಅದನ್ನು ಅರ್ಥ ಮಾಡಿಕೊಂಡು ತಪ್ಪು ಹೆಜ್ಜೆ ಇಡದೆ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡಿ. ತಂದೆ-ತಾಯಿ ಕಟ್ಟಿಕೊಂಡ ಕನಸನ್ನು ಈಡೇರಿಸುವ ಸಂಕಲ್ಪ ಮಾಡಿ ಎಂದು ಸಂಸದ ಬಿ.ವೈ.ರಾಘವೇಂದ್ರ ಸಲಹೆ ನೀಡಿದರು. ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.

ಸಮಾರೋಪ ಸಮಾರಂಭ । ಸರ್ಕಾರಿ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ । ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಕ್ಕಮಹಾದೇವಿ ಜನ್ಮ ತಾಳಿದ ನಾಡಿನಲ್ಲಿರುವ ಯುವತಿಯರು ಸರ್ಕಾರದ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು. ಹದಿಹರೆಯದಲ್ಲಿ ಮನಸ್ಸು ಚಂಚಲವಾಗುತ್ತದೆ ಅದನ್ನು ಅರ್ಥ ಮಾಡಿಕೊಂಡು ತಪ್ಪು ಹೆಜ್ಜೆ ಇಡದೆ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡಿ. ತಂದೆ-ತಾಯಿ ಕಟ್ಟಿಕೊಂಡ ಕನಸನ್ನು ಈಡೇರಿಸುವ ಸಂಕಲ್ಪ ಮಾಡಿ ಎಂದು ಸಂಸದ ಬಿ.ವೈ.ರಾಘವೇಂದ್ರ ಸಲಹೆ ನೀಡಿದರು.

ಪಟ್ಟಣದ ಸೋಮವಾರ ಸಾಂಸ್ಕೃತಿಕ ಭವನದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮೈತ್ರಾದೇವಿ ಸ್ಮರಣಾರ್ಥ ದ್ವಿತೀಯ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಪಡೆದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.

ಪ್ರತಿಯೊಬ್ಬರ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖ ಕಾಲ ಘಟ್ಟವಾಗಿದ್ದು ಈ ಸಂದರ್ಭದಲ್ಲಿ ಕೇವಲ ಶಿಕ್ಷಣಕ್ಕೆ ಮಾತ್ರ ಹೆಚ್ಚಿನ ಗಮನ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಅತಿ ಹೆಚ್ಚಿನ ಅನುದಾನ ನೀಡುತ್ತಿದೆ. ಸರ್ಕಾರದ ಅನುದಾನ ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿ ಸದುಪಯೋಗ ಪಡಿಸಿಕೊಳ್ಳಬೇಕು. ತಾಲೂಕಿನಾದ್ಯಂತ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಹಲವು ಶಾಲಾ ಕಾಲೇಜು ವಸತಿ ಶಾಲೆ ಆರಂಭಿಸಲಾಗಿದೆ. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಅತ್ಯುತ್ತಮ ಗುಣ ಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಶಿಕ್ಷಣದ ಜತೆಗೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಇದೀಗ ನರಸಪ್ಪ ಸ್ಮಾರಕ ರಂಗಮಂದಿರಕ್ಕೆ 7.5 ಕೋಟಿ ರು., ಸುಸಜ್ಜಿತ ಸಂತೆ ಮಾರುಕಟ್ಟೆಗೆ 10 ಕೋಟಿ ರು., ಇನ್ನು ಸ್ವಲ್ಪ ದಿನದಲ್ಲಿ ರೈಲ್ವೆ ನಿಲ್ದಾಣದ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದೇವೆ ಶಿಕಾರಿಪುರ ತಾಲೂಕಿನ ಹಲವು ಕಾಲೇಜಿನ ಕಟ್ಟಡ ಮತ್ತು ಶೌಚಾಲಯಕ್ಕೆ ಅನುದಾನವನ್ನು ಕಲ್ಪಿಸಲಾಗಿದೆ ಎಂದರು.

ಸಾಹಿತಿ ಹಾಗೂ ನಗರ ಸರ್ಕಾರಿ ಪ್ರೌಡ ಶಾಲೆಯ ಮುಖ್ಯೋಪಾಧ್ಯಾಯ ಡಾ.ಸುಧಾಕರ ಹಿರೇಕಸವಿ ಮಾತನಾಡಿ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ. ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳು ಶಿಕ್ಷಣ, ಸಂಸ್ಕಾರ, ಸಂಸ್ಕೃತಿಯನ್ನು ನೀಡುತ್ತವೆ. ಈ ಜಗತ್ತಿನಲ್ಲಿ ಸಾಧನೆ ಮಾಡಿದವರನ್ನು ಮಾತ್ರ ಜನರು ನೆನಪಿಟ್ಟುಕೊಳ್ಳುತ್ತಾರೆ ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ. ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಹೋಭ್ಯಾನಾಯಕ ಎಸ್ ಪ್ರಾಸ್ತಾವಿಕ ಮಾತನಾಡಿದರು ನಿ. ಪ್ರಾಚಾರ್ಯ ಕೆ.ಪಿ.ಮಲ್ಲಿಕಾರ್ಜುನ, ಕಾಲೇಜು ಮೇಲುಸ್ತುವಾರಿ ಸಮಿತಿ ಸದಸ್ಯ ಕೆ.ಜಿ. ವಸಂತಗೌಡ ಮಾತನಾಡಿದರು. ಸಿಬಿಸಿ ಸದಸ್ಯೆ ರುಕ್ಮಿಣಿ, ಉಪನ್ಯಾಸಕಿ ಶಾಂತಲಾ ಜೆ.ಪಿ., ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಪಿ. ಪ್ರಕಾಶ್, ಕೆ.ಎಚ್. ಪುಟ್ಟಪ್ಪ ಹಾಗೂ ಸಿಬ್ಬಂದಿ ಇದ್ದರು. ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.