ಬಿಕಾಂ ಪರೀಕ್ಷೆ ಬರೆದ ಮುದುಮಗಳು

| Published : May 22 2025, 11:49 PM IST

ಸಾರಾಂಶ

ಹಸಮಣೆ ಏರಿ ತಾಳಿ ಕಟ್ಟಿಸಿಕೊಳ್ಳುವ ಶಾಸ್ತ್ರ ಮುಗಿದ ಕೆಲವೇ ಕ್ಷಣಗಳಲ್ಲಿ ವಧು ಪರೀಕ್ಷಾ ಕೇಂದ್ರಕ್ಕೆ ಅವಸರದಲ್ಲಿ ಬಂದು ಅಂತಿಮ ವರ್ಷದ ಬಿಕಾಂ ಪರೀಕ್ಷೆಯನ್ನು ಬರೆದ ಅಪರೂಪದ ಸಂಗತಿ ನಗರದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಹಾಸನ

ಹಸಮಣೆ ಏರಿ ತಾಳಿ ಕಟ್ಟಿಸಿಕೊಳ್ಳುವ ಶಾಸ್ತ್ರ ಮುಗಿದ ಕೆಲವೇ ಕ್ಷಣಗಳಲ್ಲಿ ವಧು ಪರೀಕ್ಷಾ ಕೇಂದ್ರಕ್ಕೆ ಅವಸರದಲ್ಲಿ ಬಂದು ಅಂತಿಮ ವರ್ಷದ ಬಿಕಾಂ ಪರೀಕ್ಷೆಯನ್ನು ಬರೆದ ಅಪರೂಪದ ಸಂಗತಿ ನಗರದಲ್ಲಿ ನಡೆದಿದೆ.

ನಗರದ ಚನ್ನಪಟ್ಟಣ ಬಡಾವಣೆಯ ಕುಮಾರ್-ಅನಸೂಯ ದಂಪತಿ ಪುತ್ರಿ ಕವನ ಪರೀಕ್ಷೆ ಬರೆದ ನವವಧು. ಪ್ರೈಡ್ ಪದವಿ ಕಾಲೇಜಿನಲ್ಲಿ ಅಂತಿಮ ಬಿಕಾಂ ಓದುತ್ತಿದ್ದಾರೆ. ಗುರುವಾರದಂದು ಬೆಳಿಗ್ಗೆ ೯ ಗಂಟೆಗೆ ಮುಹೂರ್ತ ನಿಗಧಿಯಾಗಿತ್ತು. ನಗರದ ಹೊರ ವಲಯದ ಗುಡ್ಡೆನಹಳ್ಳಿಯ ದಿನೇಶ್ ಎಂಬುವರ ಜೊತೆ ಕವನ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ದಿನವೇ ಅಂತಿಮ ವರ್ಷದ ಕೊನೆಯ ವಿಷಯ ಪರೀಕ್ಷೆ ಇತ್ತು. ಮಾಂಗಲ್ಯ ಧಾರಣೆ ಆಗುತ್ತಿದ್ದಂತೆಯೇ ಪರೀಕ್ಷೆಗೆ ಹಾಜರಾದ ಕವನಾ ಯಾವ ಭಯವಿಲ್ಲದೇ ಪರೀಕ್ಷೆ ಬರೆದರು. ಅಂತಿಮ ವರ್ಷದ ಬಿಕಾಂನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ ಎರಡು ವಿಷಯಗಳ ಪರೀಕ್ಷೆ ತೆಗೆದುಕೊಂಡಿದ್ದರು. ಮದುವೆ ಮುಗಿದ ಕೂಡಲೇ ಪರೀಕ್ಷೆ ಬರೆಯಲೇಬೇಕೆಂಬ ಮಗಳ ಒತ್ತಾಯಾಸೆಗೆ ಆಕೆಯ ಪೋಷಕರು, ಒಡ ಹುಟ್ಟಿದವರು ಸಾಥ್ ನೀಡಿದರು. ಮುಹೂರ್ತ ಮುಗಿದ ಕೂಡಲೇ ಅಣ್ಣ ಕಾರ್ತಿಕ್ ಪರೀಕ್ಷಾ ಕೇಂದ್ರಕ್ಕೆ ಸಹೋದರಿಯನ್ನು ಕರೆದುಕೊಂಡು ಬಂದರು. ಪರೀಕ್ಷೆ ಮುಗಿದ ನಂತರ ಯುವತಿ ಕಲ್ಯಾಣ ಮಂಟಪಕ್ಕೆ ಮರಳಿ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಮದುವೆಗೆ ಬಂದಿದ್ದ ಸಂಬಂಧಿಕರಿ ಹಾಗೂ ಸ್ನೇಹಿತರು ಈಕೆಯ ಉದ್ದೇಶಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.