ಸಾರಾಂಶ
ಯುವಕರು ಭಾರತದ ಭವಿಷ್ಯದ ಬೆನ್ನೆಲುಬು. ಭವ್ಯ ಭಾರತದ ದೃಷ್ಟಿಕೋನ ಸಾಕಾರಗೊಳಿಸಲು ರಾಷ್ಟ್ರ ನಿರ್ಮಾಣದ ಪ್ರಯತ್ನಗಳಲ್ಲಿ ಅವರ ಸಕ್ರೀಯ ಪಾಲ್ಗೊಳ್ಳುವಿಕೆ ಮತ್ತು ಭಾಗವಹಿಸುವಿಕೆ ಅತ್ಯಗತ್ಯ
ಧಾರವಾಡ: ಯುವ ಪೀಳಿಗೆಯು ಆಧುನಿಕತೆ ಅಳವಡಿಸಿಕೊಳ್ಳುವುದರ ಜತೆಗೆ ಸಾಂಸ್ಕೃತಿಕ ಬೇರುಗಳನ್ನು ಪೋಷಿಸುವ ಮೂಲಕ ಪ್ರಗತಿಪರ ಮತ್ತು ಪರಂಪರೆಯಲ್ಲಿ ಬೇರೂರಿರುವ ಸಮಾಜ ನಿರ್ಮಿಸಬೇಕು ಸಂಘಟಕ ಮಾರ್ತಾಂಡಪ್ಪ ಕತ್ತಿ ಹೇಳಿದರು.
ಕೆಎಸ್ ಜಿಗಳೂರು ಕಾಲೇಜು ವತಿಯಿಂದ ದೇವರಹುಬ್ಬಳ್ಳಿ ಗ್ರಾಮದ ಸಿದ್ದಾಶ್ರಮದಲ್ಲಿ ಹಮ್ಮಿಕೊಂಡ ಎನ್ನೆಸ್ಸೆಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ಮಾತನಾಡಿದ ಅವರು, ಯುವಕರು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳ ಪಾಲಕರು. ನಮ್ಮ ಸಾಂಸ್ಕೃತಿಕ ವೈವಿಧ್ಯತೆ ಸಂರಕ್ಷಿಸುವ ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಅವರಲ್ಲಿ ಹೆಮ್ಮೆ ಮತ್ತು ಜವಾಬ್ದಾರಿಯ ಭಾವ ಮೂಡಿಸುವುದು ಅತ್ಯಗತ್ಯ ಎಂದರು.ಯುವಕರು ಭಾರತದ ಭವಿಷ್ಯದ ಬೆನ್ನೆಲುಬು. ಭವ್ಯ ಭಾರತದ ದೃಷ್ಟಿಕೋನ ಸಾಕಾರಗೊಳಿಸಲು ರಾಷ್ಟ್ರ ನಿರ್ಮಾಣದ ಪ್ರಯತ್ನಗಳಲ್ಲಿ ಅವರ ಸಕ್ರೀಯ ಪಾಲ್ಗೊಳ್ಳುವಿಕೆ ಮತ್ತು ಭಾಗವಹಿಸುವಿಕೆ ಅತ್ಯಗತ್ಯ. ಯುವಕರನ್ನು ಸಬಲೀಕರಣಗೊಳಿಸುವ ಮೂಲಕ ಅವರ ಪ್ರತಿಭೆ ಪೋಷಿಸುವ ಮೂಲಕ ಮತ್ತು ಅವರಿಗೆ ಅವಕಾಶ ಒದಗಿಸುವ ಮೂಲಕ, ಭಾರತವು ಜನಸಂಖ್ಯಾ ಲಾಭಾಂಶ ಬಳಸಿಕೊಳ್ಳಬಹುದು ಮತ್ತು ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯ ನಿರ್ಮಿಸಬಹುದು ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ ಉದ್ಘಾಟನೆ ಮಾಡಿ, ಎನ್ನೆಸ್ಸೆಸ್ ಗುರಿ, ಉದ್ದೇಶ ಹಾಗೂ ತಾವು ಸಹ ಎನ್ನೆಸ್ಸೆಸ್ ಅಧಿಕಾರಿಯಾಗಿದ್ದಾಗಿನ ಅನುಭವದ ವಿಷಯ ಹಂಚಿಕೊಂಡರು. ದೇವರಹುಬ್ಬಳ್ಳಿಯ ಸಿದ್ದಾಶ್ರಮದ ಸಿದ್ದ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ಕಸಾಪ ಜಿಲ್ಲಾ ಸಹಕಾರ್ಯದರ್ಶಿ ಶಾಂತವೀರ ಬೇಟಗೇರಿ ಮಾತನಾಡಿದರು. ಪ್ರಾಚಾರ್ಯ ಡಾ. ರಾಜೇಶ್ವರಿ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಎಸ್.ಕೆ. ಹೊಸಂಗಡಿ, ಪಶುವೈದ್ಯಕೀಯ ಪರೀಕ್ಷಕರ ಶ್ರೀಶೈಲ ಚಿಕನಳ್ಳಿ, ಎಂ.ಐ. ಮೂಲಿಮನಿ, ದಿವ್ಯಾ ಸನಿದ್ಯಾ ಇದ್ದರು.ಕಾರ್ಯಕ್ರಮ ಅಧಿಕಾರಿ ಡಾ. ಅನಿತಾ ಕಡಪಟ್ಟಿ ಸ್ವಾಗತಿಸಿದರು. ಅಕ್ಷತಾ ನಿರೂಪಿಸಿದರು. ಡಾ. ಅಶ್ವಿನಿ ಪಾಟೀಲ ವಂದಿಸಿದರು.