ಯುವಕರು ಗ್ರಾಮಾಭಿವೃದ್ಧಿಯ ಶಕ್ತಿ: ಶಾಸಕ ಎಚ್.ಟಿ.ಮಂಜು

| Published : Nov 24 2025, 02:00 AM IST

ಯುವಕರು ಗ್ರಾಮಾಭಿವೃದ್ಧಿಯ ಶಕ್ತಿ: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್‌.ಪೇಟೆ ತಾಲೂಕಿನ ಅಭಿವೃದ್ಧಿಗೆ ಅನುದಾನವನ್ನೇ ಸರ್ಕಾರ ನೀಡುತ್ತಿಲ್ಲ. ಜನರ ಮುಂದೆ ಮಾತುಕೊಟ್ಟಂತೆ ಮೂಲ ಸಮಸ್ಯೆಗಳಿಗೆ ಸ್ಪಂದಿಸಲು ಹಣ ತರಲಾಗುತ್ತಿಲ್ಲ ಎಂಬ ಬೇಸರವಿದೆ. ಹೋರಾಟ ಮಾಡಿ ಅನುದಾನ ತಂದು ಗ್ರಾಮದ ಮೂಲ ಸಮಸ್ಯೆ, ರಸ್ತೆ ನಿರ್ಮಾಣಕ್ಕೆ ಮುಂದಾಗುವೆ. ಹಿರಿಯರು ಯುವಕರಿಗೆ ಗ್ರಾಮಾಭಿವೃದ್ಧಿಗೆ ಸಹಕರಿಸಿ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ನಾಡಿನ ಪ್ರಬುದ್ಧತೆಯ ಸಂಕೇತವಾಗಿರುವ ಯುವಕರು ಸಂಘಟಿತರಾದರೆ ಗ್ರಾಮದ ಸಮಗ್ರ ಅಭಿವೃದ್ಧಿ ಖಂಡಿತ ಸಾಧ್ಯ ಎಂದುಶಾಸಕ ಎಚ್.ಟಿ.ಮಂಜು ಹೇಳಿದರು.

ಊಗಿನಹಳ್ಳಿಯಲ್ಲಿ ಟೀಮ್‌ದೇವಿ ಗೆಳೆಯರ ಬಳಗದವರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ಗ್ರಾಮದ ಅಭಿವೃದ್ಧಿ ನನ್ನ ಜವಾಬ್ದಾರಿಯಾಗಿದೆ. ಗ್ರಾಮದ ರಂಗಸ್ಥಳ ಖುರ್ಜು ನಿರ್ಮಾಣಕ್ಕೆ ಮಾತು ಕೊಟ್ಟಿದ್ದು ತ್ವರಿತವಾಗಿ ಮಾಡಿಸಲಾಗುವುದು ಎಂದರು.

ಗ್ರಾಮದಲ್ಲಿ ನಮ್ಮ ಸಂಸ್ಕೃತಿ, ದೇಶಿ ಗೋವು ಉಳಿವಿಗಾಗಿ ಮೆರವಣಿಗೆ, ಸಾಲು ಮರದ ತಿಮ್ಮಕ್ಕನಂತೆ ಮರಗಿಡ ಬೆಳೆಸುವ ಆಲೋಚನೆ ಉತ್ತಮವಾಗಿದೆ. ಯುವಕರು ಸಂಘಟಿತರಾಗಿ ಪ್ರಕೃತಿ ಉಳಿಸಿ ಎಂದು ಹುರಿದುಂಬಿಸಿದರು.

ತಾಲೂಕಿನ ಅಭಿವೃದ್ಧಿಗೆ ಅನುದಾನವನ್ನೇ ಸರ್ಕಾರ ನೀಡುತ್ತಿಲ್ಲ. ಜನರ ಮುಂದೆ ಮಾತುಕೊಟ್ಟಂತೆ ಮೂಲ ಸಮಸ್ಯೆಗಳಿಗೆ ಸ್ಪಂದಿಸಲು ಹಣ ತರಲಾಗುತ್ತಿಲ್ಲ ಎಂಬ ಬೇಸರವಿದೆ. ಹೋರಾಟ ಮಾಡಿ ಅನುದಾನ ತಂದು ಗ್ರಾಮದ ಮೂಲ ಸಮಸ್ಯೆ, ರಸ್ತೆ ನಿರ್ಮಾಣಕ್ಕೆ ಮುಂದಾಗುವೆ. ಹಿರಿಯರು ಯುವಕರಿಗೆ ಗ್ರಾಮಾಭಿವೃದ್ಧಿಗೆ ಸಹಕರಿಸಿ ಎಂದರು.

ಸಂಘದ ಯುವಕರು ಮಾತನಾಡಿ, ಕುಗ್ರಾಮದ ಸಮಸ್ಯೆ ಕೇಳುವವರು ಇಲ್ಲ. ಗರ್ಭಿಣಿಯರು, ವಯೋವೃದ್ಧರು, ರೋಗಿಗಳು ಆರೋಗ್ಯ ಶುಶ್ರೂಷೆಗೆ ಹೊರಗಡೆ ಹೋಗದಷ್ಟು ರಸ್ತೆಗುಂಡಿ ಬಿದ್ದು ಹಾಳಾಗಿದೆ. ಮೊದಲು ಸರಿಪಡಿಸಿಕೊಡಿ ಎಂದು ಅಲವತ್ತುಕೊಂಡರು.

ಗ್ರಾಮದಲ್ಲಿ ಕಾರೆಮೆಳೆ ಸಿಂಗಮ್ಮ ಜಾತ್ರೆ ಪ್ರಯುಕ್ತ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯಿಂದ ಸುವರ್ಣಾವತಿ ಕಲ್ಯಾಣ ನಾಟಕ, ಬಸವೇಶ್ವರ ದೇವರ ಉತ್ಸವ, ವೀರಭದ್ರ, ಕಾಳಿದೇವಿ ನರ್ತನ, ವಿದ್ಯುತ್‌ ದೀಪಗಳ ಅಲಂಕಾರ, ಗೋವುಗಳ ಮೆರವಣಿಗೆ ಜಾತ್ರೆಗೆ ವಿಶೇಷ ಕಳೆಕಟ್ಟಿತು.

ಮುಖಂಡರಾದ ಗಂಜಿಗೆರೆ ಮಹೇಶ್, ಮುರುಳೀಧರ್, ಪರಮೇಶ್, ರೂಪೇಶ್, ಕೆಇಬಿ ತಿಮ್ಮಶೆಟ್ಟಿ, ಮಾದಾಪುರ ರಾಮಕೃಷ್ಣೇಗೌಡ, ಸಂಘದರಕ್ಷಿತ್, ಹೇಮಂತ್, ಯಶ್ವಂತ್, ಧರಣೀಶ, ರೋಹಿತ್, ಗಣೇಶ್, ಪರಿಸರ ಪ್ರೇಮಿ ವೆಂಕಟೇಶ್, ಬಸವರಾಜು, ಗ್ರಾಮ ಮುಖಂಡರು ಇದ್ದರು.

ಹೊಸ ತಳಿ ಕಬ್ಬಿನಿಂದ ಕಡಿಮೆ ಖರ್ಚು, ಅಧಿಕ ಇಳುವರಿ: ವಿ.ಎಸ್.ಅಶೋಕ್

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕಡಿಮೆ ಖರ್ಚಿನಲ್ಲಿ ರೋಗರಹಿತ ಕಬ್ಬು ಬೆಳೆದು ಅಧಿಕ ಇಳುವರಿ ಪಡೆಯಲು ಹೊಸ ತಳಿ ರೈತರಿಗೆ ಅನುಕೂಲವಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ತಿಳಿಸಿದರು.

ಅಣ್ಣೂರು ಗ್ರಾಮದಲ್ಲಿ ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಸಹಭಾಗಿತ್ವದಲ್ಲಿ ಹೊಸದಾಗಿ ತಂದಿರುವ ಒಂದು ಕಣ್ಣು ಕಬ್ಬಿನ ಪೈರಿನ ನರ್ಸರಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರು ಕಬ್ಬು ನಾಟಿ ಮಾಡಲು ತುಂಬಾ ಸುಲಭವಾಗಿದೆ. ಹೊಸ ತಳಿ ಕಬ್ಬಿನಿಂದ ಕಡಿಮೆ ವೆಚ್ಚದ ಜೊತೆಗೆ ಹೆಚ್ಚು ಕಬ್ಬು ಬೆಳೆದು ಇಳುವರಿ ಪಡೆಯಬಹುದು ಎಂದರು.

ಕಬ್ಬು ನಾಟಿ ಮಾಡುವ ರೈತರು ಪ್ರತಿ ಎಕರೆಯಲ್ಲಿ ಉತ್ತಮ ಇಳುವರಿ ಪಡೆಯಬೇಕಾದರೆ ಕಾಲಕಾಲಕ್ಕೆ ರಸಗೊಬ್ಬರ ಹಾಕಿ ಉತ್ತಮ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದರು.

ನರ್ಸರಿ ಮಾಲೀಕ ಜೆ.ಪ್ರಸನ್ನ ಅವರು ಕೃಷಿ ನಿರ್ದೇಶಕರಿಗೆ ಮತ್ತು ಕೃಷಿ ಅಧಿಕಾರಿಗಳಿಗೆ ಒಂದು ಕಣ್ಣಿನ ಕಬ್ಬಿನ ಫೈರುಗಳನ್ನು ಬೆಳವಣಿಗೆ ಮಾಡಲು ವಿವಿಧ ರೀತಿಯ ಕ್ರಮಗಳನ್ನು ಅನುಸರಿಸುವ ಬಗ್ಗೆ ಮಾಹಿತಿ ನೀಡಿದರು.

ಮಂಡ್ಯ ಮತ್ತು ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶಕ ವೆಂಕಟರಮಣ ರೆಡ್ಡಿ, ಸಹಾಯಕ ಕೃಷಿ ನಿರ್ದೇಶಕಿ ಎಚ್.ಜಿ.ಪ್ರತಿಭಾ, ಕೃಷಿ ಅಧಿಕಾರಿ ಭವಾನಿ ಪಾಲ್ಗೊಂಡು ಉತ್ತಮ ಗುಣಮಟ್ಟದ ಕಬ್ಬಿನ ಪೈರುಗಳನ್ನು ಪರಿಶೀಲನೆ ನಡೆಸಿದರು.