ವಿವಾಹಿತ ಮಹಿಳೆಯರೊಂದಿಗೆ ಅನೈತಿಕ ಸಂಬಂಧದಿಂದ ಯುವಕ ಆತ್ಮಹತ್ಯೆ

| Published : Jan 13 2025, 12:47 AM IST

ಸಾರಾಂಶ

ಇಬ್ಬರು ವಿವಾಹಿತ ಮಹಿಳೆಯರ ಕಾಟಕ್ಕೆ ಸಿಲುಕಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಟ್ಟಣದ ಬಾಳೆಗದ್ದೆ ಬಡಾವಣೆಯ ಕವನ್(೨೫) ಮೃತ ಯುವಕ. ಅನೈತಿನ ಸಂಬಂಧದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕಳೆದ ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಎಲ್ಲ ಘಟನೆಗಳನ್ನು ವಿಷ ಸೇವಿಸುವ ಮುನ್ನ ಕವನ್‌ ವಿಡಿಯೋ ಮಾಡಿ ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮೃತಪಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಇಬ್ಬರು ವಿವಾಹಿತ ಮಹಿಳೆಯರ ಕಾಟಕ್ಕೆ ಸಿಲುಕಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಟ್ಟಣದ ಬಾಳೆಗದ್ದೆ ಬಡಾವಣೆಯ ಕವನ್(೨೫) ಮೃತ ಯುವಕ.

ಘಟನೆ ಹಿನ್ನೆಲೆ:

ಮೃತ ಕವನ್ ಎಂಬಾತನ ಮನೆಯ ಸಮೀಪದಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಬಾಡಿಗೆ ಮನೆಗೆ ಆಗಮಿಸಿದ್ದ ಅಂಜಲಿ ಎಂಬ ಮಹಿಳೆ ಕವನ್ ತಾಯಿಯ ಗೆಳೆತನ ಸಂಪಾದಿಸಿ ಕವನ್ ಕುಟುಂಬಕ್ಕೆ ಆತ್ಮೀಯಳಾಗುತ್ತಾಳೆ. ನಂತರ ಕವನ್‌ನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ ಮಹಿಳೆ ಇತರರೊಂದಿಗೂ ಒಡನಾಟ ಬೆಳೆಸಿದ್ದಳು ಎನ್ನಲಾಗುತ್ತಿದೆ. ಈ ವಿಚಾರ ತಿಳಿದ ಕವನ್ ಮಹಿಳೆಯಿಂದ ದೂರವಾಗುವ ಯತ್ನ ನಡೆಸಿದ್ದಾನೆ. ಈ ಮಧ್ಯೆ ಕವನ್‌ಗೆ ಮತ್ತೋರ್ವ ವಿವಾಹಿತೆ ವೀಣಾ ಎಂಬ ಮಹಿಳೆಯೊಂದಿಗೆ ಪ್ರೇಮಾಂಕುರವಾಗಿ ಆಕೆಯೊಂದಿಗೆ ಸಲಿಗೆಯಿಂದ ಇರಲು ಆರಂಭಿಸಿರುತ್ತಾನೆ. ಇದರಿಂದ ಜಿದ್ದಿಗೆ ಬಿದ್ದ ಅಂಜಲಿ ಒಂದು ದಿನ ತನ್ನೊಂದಿಗೆ ಕಳೆಯುವಂತೆ ವಿನಂತಿಸಿಕೊಂಡು ಮೈಸೂರಿಗೆ ಕರೆದುಕೊಂಡು ಹೋಗಿ ಮದ್ಯ ಕುಡಿಸಿ ಕವನ್ ಮೊಬೈಲ್‌ನಲ್ಲಿದ್ದ ವೀಣಾ ಎಂಬುವವಳೊಂದಿಗೆ ಸಲುಗೆಯಲ್ಲಿದ್ದ ಚಿತ್ರಗಳನ್ನು ತನ್ನ ಮೊಬೈಲ್‌ಗೆ ಹಸ್ತಾಂತರಿಸಿಕೊಂಡು ಆ ಫೋಟೋಗಳನ್ನು ಆ ಮಹಿಳೆಯ ಗಂಡನಿಗೆ ಕಳುಹಿಸಿದ್ದಾಳೆ. ಇದರಿಂದ ಕೆರಳಿದ ಆಕೆಯ ಗಂಡ ಕವನ್‌ನೊಂದಿಗೆ ಜಗಳವಾಡಿದ್ದ. ಇದರಿಂದ ಬೇಸತ್ತ ಕವನ್ ಅಂಜಲಿಗೆ ಹಲ್ಲೆ ಮಾಡಿದ್ದ. ಇದರಿಂದ ಕೋಪಗೊಂಡ ಅಂಜಲಿ ಕವನ್ ವಿರುದ್ಧ ಕೊಲೆ ದೂರು ದಾಖಲಿಸಿದ್ದಳು.

ಈ ಮಧ್ಯೆ ವೀಣಾ ಎಂಬ ಮಹಿಳೆಯ ಗಂಡ ಸಹ ಠಾಣೆಗೆ ದೂರು ನೀಡಿದ್ದ. ಈತನ ಈ ಎಲ್ಲ ಕೆಲಸಗಳಿಂದ ಬೇಸತ್ತ ಕುಟುಂಬ ಸಹ ಈತನಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದೆ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕಳೆದ ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಈ ಎಲ್ಲ ಘಟನೆಗಳನ್ನು ವಿಷ ಸೇವಿಸುವ ಮುನ್ನ ಕವನ್‌ ವಿಡಿಯೋ ಮಾಡಿ ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮೃತಪಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.