ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕೆಲಕಾಲದ ಬಳಿಕ ಬಿಡುಗಡೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುನೀಟ್ ಪರೀಕ್ಷೆ ಭದ್ರತೆ ಮತ್ತು ವಿಶ್ವಾಸಾರ್ಹತೆ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಡೀ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಚಿಕ್ಕಮಗಳೂರು ನಗರಸಭೆ ಆವರಣದಲ್ಲಿರುವ ಸಂಸದರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ಕಾರ್ಯಕರ್ತರು ಕಚೇರಿಗೆ ನುಗ್ಗುವುದನ್ನು ತಪ್ಪಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕೆಲಕಾಲದ ಬಳಿಕ ಬಿಡುಗಡೆ ಮಾಡಿದರು. ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಜೀವನದ ಜೊತೆ ಆಟವಾಡುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಚಿಕ್ಕಮಗಳೂರು ನಗರಸಭೆ ಆವರಣದ ಸಂಸದರ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದ್ದರು. ವಿಷಯ ತಿಳಿದ ಪೊಲೀಸರು ಮುಂಜಾಗ್ರತೆ ವಹಿಸಿದ ಕಾರಣಕ್ಕೆ ಸಂಸದರ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರನ್ನು ವಶಕ್ಕೆ ಪಡೆದು ಕೆಲಕಾಲದ ಬಳಿಕ ಬಿಡುಗಡೆ ಮಾಡಿದರು.ಈ ವೇಳೆ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ಗೌಡ ದಂಡಿನಮಕ್ಕಿ, ರಾಜಸ್ಥಾನ ಮತ್ತು ಉತ್ತರಾ ಖಂಡ್‌ನಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿಗೆ ಪುಷ್ಟಿ ಕೊಡುವಂತೆ ನಡೆದ ಪರೀಕ್ಷೆ ಅಕ್ರಮಗಳ ಆರೋಪಗಳು ಸರಿಯಾಗಿದೆ ಮತ್ತು ಪಾರದರ್ಶಕತೆ ಕಾಪಾಡಲು ಕೇಂದ್ರ ವಿಫಲವಾಗಿದೆ ಎಂದು ಆರೋಪಿಸಿದರು.
ಪ್ರಶ್ನೆ ಪರೀಕ್ಷೆ ಸೋರಿಕೆ ಸಂಬಂಧ ಕೇಂದ್ರ ಬಿಜೆಪಿ ಸರ್ಕಾರ ಪರೀಕ್ಷೆಯನ್ನೇ ರದ್ದು ಮಾಡಿರುವುದು ಸರಿಯಲ್ಲ. ಗ್ರಾಮೀಣ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ತಮ್ಮ ಕುಟುಂಬದ ಆರ್ಥಿಕ ಸಂಕಷ್ಟಗಳ ನಡುವೆಯೂ ವಿದ್ಯಾಭ್ಯಾಸಕ್ಕಾಗಿ ಹೋರಾ ಡುತ್ತಿದ್ದಾರೆ ಎಂದು ತಿಳಿಸಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಕನಸು ಕಂಡ ಮಧ್ಯಮ ವರ್ಗದ ಕುಟುಂಬದ ಲಕ್ಷಾಂತರ ವಿದ್ಯಾರ್ಥಿಗಳು ಹಗಲು-ರಾತ್ರಿ ಪರಿಶ್ರಮದಿಂದ ಭವಿಷ್ಯವನ್ನಲ್ಲದೇ ಪಾಲಕರ ನಂಬಿಕೆ ಮತ್ತು ವಿಶ್ವಾಸಕ್ಕೆ ಕೇಂದ್ರ ಸರ್ಕಾರ ಹಾಳು ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ದೂರಿದರು.
ನೀಟ್ ವ್ಯವಸ್ಥೆಯನ್ನು ದೇಶದಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶದಲ್ಲಿ ಪಾರದರ್ಶಕತೆ, ಸಮಾನ ಅವಕಾಶ ಹಾಗೂ ಮೆರಿಟ್ ಆಧಾರಿತ ಪ್ರವೇಶ ಕಲ್ಪಿಸುವ ಉದ್ದೇಶದಿಂದ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ 2012 ರಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಯಿತು ಎಂದರು.ಇಂದು ಅದೇ ವ್ಯವಸ್ಥೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು, ಕೋಚಿಂಗ್ ಮಾಫಿಯಾ, ಪರೀಕ್ಷಾ ಅಕ್ರ ಮ ಮತ್ತು ಹಣದ ಪ್ರಭಾವದಿಂದ ತನ್ನ ಮೂಲ ಉದ್ದೇಶ ಕಳೆದುಕೊಳ್ಳುತ್ತಿದೆ. ಕಳೆದ 2024ರಲ್ಲಿಯೂ ನೀಟ್ ಪ್ರಶ್ನೆ ಪತ್ರಿಕೆ ವಿವಾದ ದೇಶ ದಾದ್ಯಂತ ಕೇಳಿಬಂದಿದ್ದರೂ ಸಹ ಈ ವಿಷಯ ಕೇಂದ್ರ ಸರ್ಕಾರ ಮುಚ್ಚಿಹಾಕಿತ್ತು ಎಂದು ಆರೋಪಿಸಿದರು.
ಈ ನಡುವೆಯೂ ವಿದ್ಯಾರ್ಥಿಗಳಲ್ಲಿ ಸಂಪೂರ್ಣ ವಿಶ್ವಾಸ ಮರುಸ್ಥಾಪನೆಯಾಗಿಲ್ಲ. ರಾಷ್ಟ್ರಮಟ್ಟದ ಪರೀಕ್ಷೆ ಭದ್ರತೆ ಮತ್ತು ವಿಶ್ವಾಸಾರ್ಹತೆ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಕೂಡಲೇ ವಜಾಗೊಳಿಸಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ವಿಶ್ವಾಸ ಮೂಡುವಂತೆ ಮಾಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆದಿಲ್, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ರಾಕೇಶ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿ ನಲ್ಲೂರು, ಮುಖಂಡರಾದ ಸೀಮಾ ಬಾನು, ಅಕ್ಷಯ್ ರಾಥೋಡ್, ಭರತ್ ಚಿಟ್ಟಿಯಾರ್, ಎಕ್ರೆಸ್ ಖಾನ್, ಮಹಮ್ಮದ್ ತಾಯೀಬ್, ರತನ್, ಸೋಮೇಶ್, ಕಲೀಲ್ ಖಾನ್, ಮಂಜೇಶ್ ಮತ್ತಿತರರಿದ್ದರು.
-- ಫೋಟೋಚಿಕ್ಕಮಗಳೂರಿನ ನಗರಸಭೆ ಆವರಣದ ಸಂಸದರ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.