ಯುವ ಕಾಂಗ್ರೆಸ್‌ನಿಂದ ನಿರುದ್ಯೋಗ ದಿನ ಆಚರಣೆ

| Published : Sep 18 2025, 02:00 AM IST

ಸಾರಾಂಶ

ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಕಾರ್ಯಕರ್ತರು ಬಸ್ ನಿಲ್ದಾಣದ ಬಳಿ ತರಕಾರಿ ಮಾರಾಟ ಮಾಡಿದರು. ಟ್ರಾಫಿಕ್‌ನಲ್ಲಿ ನಿಂತಿದ್ದ ವಾಹನ ಸವಾರರಿಗೆ ಟೀ, ಪೇಪರ್, ಬೋಂಡ ಮಾರಾಟ ಮಾಡಿದರು.

ಶಿವಮೊಗ್ಗ: ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಕಾರ್ಯಕರ್ತರು ಬಸ್ ನಿಲ್ದಾಣದ ಬಳಿ ತರಕಾರಿ ಮಾರಾಟ ಮಾಡಿದರು. ಟ್ರಾಫಿಕ್‌ನಲ್ಲಿ ನಿಂತಿದ್ದ ವಾಹನ ಸವಾರರಿಗೆ ಟೀ, ಪೇಪರ್, ಬೋಂಡ ಮಾರಾಟ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಬುಧವಾರ ಶಿವಮೊಗ್ಗದ ಯುವ ಕಾಂಗ್ರೆಸ್ ಕಾರ್ಯಕರ್ತರು ನಿರುದ್ಯೋಗ ದಿನಾಚರಣೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದ ಯುವ ಕಾಂಗ್ರೆಸ್‌ನಿಂದ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಪದವೀಧರರು ಬೋಂಡ ಬಜ್ಜಿ, ಟೀ, ಪೇಪರ್, ತರಕಾರಿ ಮಾರಾಟ ಮಾಡಿ, ಶೂ ಪಾಲಿಷ್ ಮಾಡಿ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಮತಗಳ್ಳತನ ಮಾಡಿ ಗದ್ದುಗೆ ಹಿಡಿದ ಪ್ರಧಾನಿ ನರೇಂದ್ರ ಮೋದಿ ಯುವಕರು, ರೈತರಿಗೆ ಪೂರಕವಾದ ಯೋಜನೆ ರೂಪಿಸದೆ ನಿರುದ್ಯೋಗ ಪ್ರಮಾಣ ಹೆಚ್ಚಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಒಂದೇ ಒಂದು ಉದ್ಯೋಗ ಸೃಷ್ಟಿ ಮಾಡಲಿಲ್ಲ. ಬದಲಿಗೆ ಈ ಹಿಂದಿನಿಂದ ಕಾಂಗ್ರೆಸ್ ಬೆಳೆಸಿ, ಪೋಷಿಸಿದ್ದ ಸರ್ಕಾರಿ ಸ್ವಾಮ್ಯದ ಬೃಹತ್ ಕೈಗಾರಿಕೆಗಳನ್ನು ಮುಚ್ಚಿ ಲಕ್ಷಾಂತರ ಉದ್ಯೋಗಿಗಳು ಬೀದಿಗೆ ಬೀಳುವಂತೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೇಶ್ ಮಾತನಾಡಿ, 75 ವರ್ಷ ಆದ ಮೇಲೆ ಅಧಿಕಾರ ಬಿಡಬೇಕು ಎಂಬುದು ಆರ್‌ಎಸ್‌ಎಸ್ ನಿಯಮ. ಇವತ್ತು ಮೋದಿ ಅವರಿಗೆ 75 ವರ್ಷ ಆಗಿರುವುದರಿಂದ ಇವತ್ತು ಅಧಿಕಾರ ಬಿಡಬೇಕು. ಇದು ನಮ್ಮೆಲ್ಲರಿಗೂ ಖುಷಿಯ ವಿಚಾರ ಎಂದು ವ್ಯಂಗ್ಯವಾಡಿದರು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ ಮಾತನಾಡಿ, ಮೇಕ್‌ಇನ್ ಇಂಡಿಯಾ ಮಂತ್ರ ಜಪಿಸುತ್ತಲೇ ಪ್ರಧಾನಿ ಮೋದಿಯವರು ದೇಶದ ವಿದ್ಯಾವಂತ ಯುವಜನತೆಯನ್ನು ನಿರುದ್ಯೋಗಿಗಳನ್ನಾಗಿ ಮಾಡಿ ಅವರ ಬದುಕನ್ನು ದುಸ್ತರ ಮಾಡಿದ್ದಾರೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನವನ್ನು ನಿರುದ್ಯೋಗಿ ಯುವಜನತೆ ಬಸ್ ಸ್ಟ್ಯಾಂಡ್‌ನಲ್ಲಿ ಬೂಟ್ ಪಾಲೀಶ್ ಮಾಡುವ ಮೂಲಕ, ಬೋಂಡ, ತರಕಾರಿ, ಚಹಾ ಮಾರುವ ಮೂಲಕ ಆಚರಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಮಧುಸೂದನ್, ಚೇತನ್ ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಚರಣ್, ಬ್ಲಾಕ್ ಅಧ್ಯಕ್ಷರಾದ ಗಿರೀಶ್, ಪ್ರವೀಣ, ಶಶಿಕುಮಾರ್ ಮತ್ತಿತರರು ಭಾಗಿಯಾಗಿದ್ದರು.