ನೀಟ್ ಅಕ್ರಮ ವಿರುದ್ಧ ಯುವ ಕಾಂಗ್ರೆಸ್‌ ಆಕ್ರೋಶ

| Published : Jun 22 2024, 01:36 AM IST / Updated: Jun 22 2024, 07:07 AM IST

ನೀಟ್ ಅಕ್ರಮ ವಿರುದ್ಧ ಯುವ ಕಾಂಗ್ರೆಸ್‌ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ನೀಟ್‌ ಅಕ್ರಮ ವಿರುದ್ಧ ರೇಸ್‌ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಭವನದಲ್ಲಿ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

 ಬೆಂಗಳೂರು : ನೀಟ್ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಯುವ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಶುಕ್ರವಾರ ರೇಸ್‌ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಭವನದಲ್ಲಿ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನೀಟ್‌ ಆಕಾಂಕ್ಷಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ರಾಜಭವನ ಮುತ್ತಿಗೆ ಹಾಕಲು ತೆರಳುತ್ತಿದ್ದ ಯುವ ಕಾಂಗ್ರೆಸ್‌ ನಾಯಕರನ್ನು ಪೊಲೀಸರು ಕಾಂಗ್ರೆಸ್‌ ಭವನದ ಗೇಟ್‌ ಮುಚ್ಚಿ ತಡೆದರು. ಈ ವೇಳೆ ಕೆಲ ಕಾರ್ಯಕರ್ತರು ಗೇಟ್ ಹತ್ತಲು ಯತ್ನಿಸಿದ್ದರಿಂದ ಕೆಲ ಕಾಲ ನೂಕುನುಗ್ಗಲು ಉಂಟಾಗಿತ್ತು. ಬಳಿಕ ಯುವ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಮಂಜುನಾಥ್‌ ಗೌಡ ಸೇರಿದಂತೆ ಪ್ರತಿಭಟನಾ ನಿರತ ಯುವ ಕಾಂಗ್ರೆಸ್‌ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ ಯುವ ಕಾಂಗ್ರೆಸ್‌ ಕಾರ್ಯಕರ್ತರು, ‘ಅಬ್‌ ಕಿ ಬಾರ್‌ ಲೀಕ್‌ ಸರ್ಕಾರ್’, ‘ಲೀಕ್‌ ಮಿನಿಸ್ಟರ್‌ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕು’,‘ಯುದ್ಧಗಳನ್ನು ನಿಲ್ಲಿಸುವ ಪ್ರಧಾನಮಂತ್ರಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ನಿಲ್ಲಿಸಲಾಗಲಿಲ್ಲ’ ಎಂಬ ಭಿತ್ತಿಪತ್ರ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಬಿ.ವಿ.ಶ್ರೀನಿವಾಸ್‌, 33 ಲಕ್ಷ ವಿದ್ಯಾರ್ಥಿಗಳು ನೀಟ್‌ ಪರೀಕ್ಷೆ ಬರೆದಿದ್ದಾರೆ. ನೀಟ್‌ ಪರೀಕ್ಷೆಯ ಲೋಪದಿಂದ 9 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಗುಜರಾತ್‌ನಲ್ಲಿ ಓಎಂಆರ್‌ನಲ್ಲಿಯೇ ಅಕ್ರಮವಾಗಿದೆ. 67 ಜನಕ್ಕೆ ಹೇಗೆ ಮೊದಲ ರ್‍ಯಾಂಕ್‌ ಕೊಡಲಾಗುತ್ತದೆ ಎಂಬುದಕ್ಕೆ ಕೇಂದ್ರ ಉತ್ತರ ನೀಡಬೇಕು.

ಇನ್ನು ದೂರವಾಣಿ ಕರೆ ಮೂಲಕ ಯುದ್ಧ ನಿಲ್ಲಿಸುತ್ತೇವೆ ಎನ್ನುತ್ತಾರೆ. ಮೊದಲು ಪ್ರಧಾನಿಗಳಿಗೆ ಪೇಪರ್‌ ಲೀಕ್‌ ನಿಲ್ಲಿಸಲು ಹೇಳಿ ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿತು. ಇದಕ್ಕಾಗಿಯೇ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್‌ ಅವರು ಮೊದಲು ಅಕ್ರಮ ಆಗಿಲ್ಲ ಎಂದರು. ಬಳಿಕ ಸ್ವಲ್ಪ ಅಕ್ರಮ ಆಗಿದೆ ಎಂದರು. ಲೋಟ, ಚಂಬು, ಹಂಡೆ ಏನು ಕದ್ದರೂ ಕಳ್ಳನೇ ಎಂಬುದು ನೆನಪಿರಲಿ. ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದು, ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡದಿದ್ದರೆ ಅವರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.