ಕನ್ನಡಪ್ರಭ ವಾರ್ತೆ ಹಾಸನ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಎಪ್ಸ್ಟೀನ್ ಪ್ರಕರಣದಲ್ಲಿ ಭಾರತದ ಪ್ರಧಾನಮಂತ್ರಿಗಳ ಹೆಸರಿನ ಉಲ್ಲೇಖವು ದೇಶದ ಗೌರವಕ್ಕೆ ಧಕ್ಕೆ ತಂದಿದೆ. ಹಾಗಾಗಿ ಪ್ರಧಾನಿಗಳು ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಂಗಳವಾರ ನಗರದ ಹೇಮಾವತಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಂಜಿತ್ ಗೊರೂರು ಮಾತನಾಡಿ, ಇಂತಹ ಗಂಭೀರ ಪ್ರಕರಣದಲ್ಲಿ ಪ್ರಧಾನಮಂತ್ರಿಗಳ ಹೆಸರು ಕೇಳಿಬರುತ್ತಿರುವುದು ದೇಶದ ಘನತೆಗೆ ಕಪ್ಪುಚುಕ್ಕಿಯಾಗಿದೆ ಎಂದು ಸಿಡಿಮಿಡಿಗೊಂಡರು. ಭಾರತವು ವಿಶ್ವದಾದ್ಯಂತ ತನ್ನದೇ ಆದ ಮಾನ, ಗೌರವ ಮತ್ತು ಕೀರ್ತಿಯನ್ನು ಗಳಿಸಿರುವ ಸಂದರ್ಭದಲ್ಲಿ, ಇಂತಹ ವಿವಾದಗಳು ದೇಶದ ಮರ್ಯಾದೆಯನ್ನು ಹಾಳು ಮಾಡುವಂತಿವೆ. ಈ ಪ್ರಕರಣದಲ್ಲಿ ಪ್ರಧಾನಮಂತ್ರಿಯವರು ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ರಾಜೀನಾಮೆ ನೀಡದೇ ಇದ್ದಲ್ಲಿ, ಯುವ ಕಾಂಗ್ರೆಸ್ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿದೇಶ ಪ್ರವಾಸದ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ನಡೆದ ವರ್ತನೆ ಕುರಿತು ಟೀಕಿಸಿದ ಅವರು, ಇದರಿಂದ ದೇಶದ ಗೌರವಕ್ಕೆ ಧಕ್ಕೆಯಾಗಿದೆ. ಇಂತಹ ವರ್ತನೆ ತೋರಿರುವವರಿಗೆ ಯಾವ ರೀತಿಯ ನೈತಿಕತೆ ಇದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಹೇಳಿದರು. ಈ ಎಲ್ಲ ಬೆಳವಣಿಗೆಗಳಿಗೆ ಪ್ರಧಾನಿ ಹೊಣೆಗಾರರಾಗಿದ್ದು, ದೇಶದ ಜನರಿಗೆ ಸ್ಪಷ್ಟನೆ ನೀಡುವ ಜೊತೆಗೆ ರಾಜೀನಾಮೆ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮನು, ಇಸ್ಮಾಯಿಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದರ್ಶನ್, ತಾಲೂಕು ಅಧ್ಯಕ್ಷ ಇರ್ಫಾನ್, ನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನಿಹಾಲ್, ಗ್ರಾಮಾಂತರ ಅಧ್ಯಕ್ಷ ಕಿರಣ್ ಸೇರಿದಂತೆ ಸಾಗರ್, ವಿವೇಕ್, ಟಿಂಕು, ಜೀವನ್, ಆದರ್ಶ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.