ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಮತ ಕಳವು ನಡೆಸುತ್ತಿವೆ. ಬಿಹಾರ, ಮಹಾರಾಷ್ಟ್ರ, ಹರಿಯಾಣ, ಕರ್ನಾಟಕ ಸೇರಿದಂತೆ ಇತರೆಡೆ ಲಕ್ಷಾಂತರ ಮತಗಳನ್ನು ಛೋರಿ ಮಾಡಲಾಗಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಸಮಿತಿ (ಕೆಪಿವೈಸಿಸಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಶನಿವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ, ವಿಧಾನ ಪರಿಷತ್ತು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ, ಯುವ ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯ ಮುಖ್ಯ ಚುನಾವಣಾಧಿಕಾರಿಯವರ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು.
ಸ್ವಾತಂತ್ರ್ಯ ಉದ್ಯಾನದ ಸಮೀಪದಲ್ಲೇ ಬೃಹತ್ ಬ್ಯಾರಿಕೇಡ್ ಅಳವಡಿಸಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಅಲ್ಲಿಯೇ ತಡೆದರು. ಕೆಲವರು ಬ್ಯಾರಿಕೇಡ್ ಹತ್ತಲು ಯತ್ನಿಸಿದರಾದರೂ ಪೊಲೀಸರು ಅವರನ್ನು ಎಳೆದು ಕೆಳಗೆ ತಳ್ಳಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸುಮಾರು 70 ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.ಇದಕ್ಕೂ ಮುನ್ನ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ, ಗೋಡ್ಸೆ ಮಹಾತ್ಮ ಗಾಂಧಿ ಅವರನ್ನು ಕೊಂದಂತೆ ಬಿಜೆಪಿ ಈಗ ಸಂವಿಧಾನವನ್ನು ಹತ್ಯೆ ಮಾಡಲು ಹೊರಟಿದೆ. ಚುನಾವಣಾ ಆಯೋಗ ಬಿಜೆಪಿಯ ಬೂತ್ ಏಜೆಂಟ್ ನಂತೆ ಕೆಲಸ ಮಾಡುತ್ತಿದೆ. ಸಿಬಿಐ, ಇಡಿಯನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಚುನಾವಣಾ ಅಕ್ರಮದ ವಿರುದ್ಧ ಯುವ ಕಾಂಗ್ರೆಸ್ ಹೋರಾಟ, ಅಭಿಯಾನ ಮುಂದುವರಿಸಲಿದೆ ಎಂದು ಹೇಳಿದರು.ಬೆಂಗಳೂರು ಸೆಂಟ್ರಲ್ ಮಹದೇವಪುರ ವಿಧಾನಸಭಾ ಚುನಾವಣೆಯಲ್ಲಿ 1 ಲಕ್ಷ ಮತಗಳನ್ನು ಚುನಾವಣಾ ಆಯೋಗ ಮತ್ತು ಬಿಜೆಪಿ ಸರ್ಕಾರ ಕಳ್ಳತನದಿಂದ ಗೆದ್ದಿದ್ದಾರೆ ಎಂಬುದನ್ನು ರಾಹುಲ್ ಗಾಂಧಿ ಅವರು ಆರೋಪಿಸಿದ್ದರು. ಅದು ಇವತ್ತು ಸತ್ಯ ಅಗಿದೆ. ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಿರುವುದು ಜನರಿಂದ ಅಲ್ಲ, ವೋಟ್ ಛೋರಿಯಿಂದ ಎಂದು ಆರೋಪಿಸಿದರು.
ಮತ ಕಳ್ಳತನ ಅಲ್ಲ, ಡಕಾಯಿತಿ: ಕೇಂದ್ರ ಚುನಾವಣಾ ಆಯೋಗ ಮತ್ತು ಬಿಜೆಪಿ ಮಾಡಿರುವುದು ಮತ ಕಳ್ಳತನ ಅಲ್ಲ, ಅದೊಂದು ಡಕಾಯಿತಿ. ರಾಹುಲ್‌ಗಾಂಧಿ ಅವರು ಮತ ಕಳ್ಳತನ ತಡೆಯಲು ಬಿಹಾರದಲ್ಲಿ ಚುನಾವಣಾ ಆಯೋಗ ಮತ್ತು ಬಿಜೆಪಿಯವರು ನಡೆಸಿದ ಕುತಂತ್ರದಲ್ಲಿ 60 ಲಕ್ಷ ಮತಗಳನ್ನು ತೆಗೆದು ಮತ್ತೆ 20 ಲಕ್ಷ ಮತಗಳನ್ನು ಸೇರಿಸಿದ್ದಾರೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಿದ್ದರು. ಆದರೂ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಚುನಾವಣಾ ಆಯೋಗ ಸೇರಿ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಈ ಗೆಲುವನ್ನು ಬಿಜೆಪಿಯ ಮುಖಂಡರೇ ಒಪ್ಪಲು ಸಿದ್ಧರಿಲ್ಲ ಎಂದು ಟೀಕಿಸಿದರು.ವಿಧಾನಪರಿಷತ್ತು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ರಾಹುಲ್‌ಗಾಂಧಿ ಅವರು ವೋಟ್ ಛೋರಿಯ ಬಗ್ಗೆ ಕೇವಲ ಬಿಹಾರ ಚುನಾವಣೆಯ ಉದ್ದೇಶದಿಂದ ಪ್ರತಿಭಟನೆ ಮಾಡಲಿಲ್ಲ. ಮಹಾರಾಷ್ಟ್ರ, ಹರಿಯಾಣ, ಬಿಹಾರದಲ್ಲಿ ಮತ ಕಳ್ಳತನ ನಡೆದಿದೆ. ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಲ್ಲೂ ಮತಗಳ್ಳತನ ನಡೆಯುವ ಸಾಧ್ಯತೆ ಇದ್ದು, ಈ ಕುರಿತು ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಜಾಗೃತಿ ಅಭಿಯಾನ ನಡೆಯುತ್ತಿದೆ ಎಂದು ಹೇಳಿದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದರು. ಈ ಪ್ರತಿಭಟನೆಯಲ್ಲಿ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ ಭಾನು ಚಿಬ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))