ಸಾರಾಂಶ
ಗದಗ: ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಗದಗ ನಗರದ ಸ್ವಾಮಿ ವಿವೇಕಾನಂದ ಸಮಾರಂಭದಲ್ಲಿ ಜರುಗಿತು. ಸಮಾರಂಭ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಜಿಲ್ಲೆಯ ಮೂಲೆ ಮೂಲೆಯಿಂದ ಅಪಾರ ಸಂಖ್ಯೆಯ ಯುವ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು, ಪದಾಧಿಕಾರಿಗಳು ಆಗಮಿಸಿದ್ದರು. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರದ ಆಡಳಿತ ವೈಖರಿಯ ವಿರುದ್ಧ ಸುಧೀರ್ಘವಾಗಿ ಮಾತನಾಡಿದರು. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥಗೌಡ ಎಚ್.ಎಸ್., ಉಪಾಧ್ಯಕ್ಷೆ ದೀಪಿಕಾ ರೆಡ್ಡಿ, ಸಲೀಂ ಅಹ್ಮದ್ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಹಲವು ಪ್ರಮುಖ ನಾಯಕರು ಮಾತನಾಡಿ, ಪಕ್ಷದ ಸಂಘಟನೆ, ಪ್ರಸ್ತುತ ದೇಶಕ್ಕೆ ಯುವ ನಾಯಕತ್ವದ ಅವಶ್ಯಕತೆ ಕುರಿತು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸರ್ಕಾರದ ಗ್ಯಾರಂಟಿ ಯೋಜನೆಗಳು, ಅವುಗಳನ್ನು ಮನೆ ಮನೆಗಳಿಗೆ ತಲುಪಿಸವುಲ್ಲಿ ಯುವ ಕಾರ್ಯಕರ್ತರ ಪಾತ್ರದ ಕುರಿತು ಮಾತನಾಡಿದರು. ಜಿಲ್ಲಾ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಯುವ ಕಾಂಗ್ರೆಸ್‌ನ ನೂತನ ಜಿಲ್ಲಾಧ್ಯಕ್ಷ ಕೃಷ್ಣಗೌಡ ಪಾಟೀಲ ಅವರಿಗೆ ಧ್ವಜವನ್ನು ಹಸ್ತಾಂತರಿಸುವ ಮೂಲಕ ಅಧಿಕಾರವನ್ನು ಔಪಚಾರಿಕವಾಗಿ ಹಸ್ತಾಂತರಿಸಿದರು. ಬಳಿಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ರೋಣ ಶಾಸಕ ಜಿ.ಎಸ್.ಪಾಟೀಲ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಸ್ವಾಗತಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ, ಮಾಜಿ ಶಾಸಕ ಡಿ.ಆರ್.ಪಾಟೀಲ, ಬಿ.ಆರ್.ಯಾವಗಲ್ಲ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಆನಂದಸ್ವಾಮಿ ಗಡ್ಡದೇವರಮಠ, ಸಿದ್ಧಲಿಂಗೇಶ್ವರ ಪಾಟೀಲ ಸೇರಿದಂತೆ ಅನೇಕ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಆಕ್ರಮಣಕಾರಿ ವಾಗ್ದಾಳಿ: ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ, ಸಚಿವ ಪ್ರಿಯಾಂಕ್ ಖರ್ಗೆ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥಗೌಡ, ಮತ್ತು ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ನಡೆಸಿದ ಆಕ್ರಮಣಕಾರಿ ವಾಗ್ದಾಳಿ. ಪ್ರತಿ ಹಂತದಲ್ಲಿಯೂ ಯೋಜನೆಗಳು ಅದರ ಅಂಕಿಗಳು, ಪ್ರಧಾನಿ ಹೇಳುತ್ತಿರುವ ಸುಳ್ಳುಗಳ ಬಗ್ಗೆ ಆಕ್ರಮಣಕಾರಿಯಾಗಿ ವಾಗ್ದಾಳಿ ನಡೆಸಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ವೇದಿಕೆಯ ಮೇಲೆ ಅತಿಯಾದ ಜನಸಂದಣಿ ಮತ್ತು ಕಾರ್ಯಕರ್ತರ ಗದ್ದಲ ಉಂಟಾಯಿತು. ಅತಿಥಿಗಳು ಬಂದರೂ ಕಾರ್ಯಕರ್ತರನ್ನು ನಿಯಂತ್ರಿಸುವುದು ಕಷ್ಟವಾಯಿತು. ಸ್ವತಃ ನೂತನ ಅಧ್ಯಕ್ಷ ಕೃಷ್ಣಗೌಡ ಪಾಟೀಲರು ಮೈಕ್ ಹಿಡಿದು ಮನವಿ ಮಾಡಿದರೂ, ನಂತರ ಸಚಿವ ಎಚ್.ಕೆ.ಪಾಟೀಲ ಅವರು ಎದ್ದು ನಿಂತು ಮನವಿ ಮಾಡಿದರೂ ಗದ್ದಲ ಮುಂದುವರಿಯಿತು. ಇದರಿಂದಾಗಿ ಕೆಲಕಾಲ ಕಾರ್ಯಕ್ರಮ ಪ್ರಾರಂಭಕ್ಕೆ ವಿಳಂಬವಾಯಿತು. ಮುಂಬರುವ ಜಿಪಂ, ತಾಪಂ ಚುನಾವಣೆಗಳಿಗೆ ಪಕ್ಷದ ಯುವ ಸಂಘಟನೆಯನ್ನು ಬಲಪಡಿಸುವ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಪ್ರಮುಖ ವೇದಿಕೆಯಾಗಿ ಕಾರ್ಯಕ್ರಮ ಮಾರ್ಪಟ್ಟಿತ್ತು. ಕತ್ತೆ ಕಾಯುತ್ತಿದ್ದೀರಾ?:ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ರಾಜ್ಯದಿಂದ 20 ಜನ ಎಂಪಿಗಳು ಆಯ್ಕೆಯಾಗಿ ಹೋಗಿದ್ದಾರೆ. ಇವರೆಲ್ಲಾ ಕತ್ತೆ ಕಾಯುತ್ತಿದ್ದಾರಾ? ರಾಜ್ಯಕ್ಕೆ ಎಲ್ಲಾ ಹಂತಗಳಲ್ಲಿಯೂ ಅನ್ಯಾಯವಾದರೂ ಸುಮ್ಮನೆ ಬಾಯಿ ಮುಚ್ಚಿಕೊಂಡು ಇರುತ್ತೀರಾ?, ನಿಮಗೆ ರಾಜ್ಯದ ನೆನಪಾಗುವುದಿಲ್ಲವೇ? ನಿಮ್ಮಿಂದ ರಾಜ್ಯಕ್ಕೆ ತೀವ್ರ ಅನ್ಯಾಯವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ ಹೇಳಿದರು.2014ರಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಮೋದಿ ಸಾಹೇಬರ ಅಧಿಕಾರಾವಧಿಯಲ್ಲಿ ಒಂದೇ ಒಂದು ಸ್ಮಾರ್ಟ್ ಸಿಟಿ ನಿರ್ಮಾಣವಾಗಿರುವುದನ್ನು ತೋರಿಸಿ, ತಕ್ಷಣವೇ ನಾನು ರಾಜೀನಾಮೆ ಕೊಡುತ್ತೇನೆ. ಬರೀ ಹಸಿ ಸುಳ್ಳುಗಳನ್ನೇ ವೈಭವೀಕರಿಸಿ ಹೇಳುತ್ತಾರೆ ಇದೊಂದು ಸುಳ್ಳಿನ ಸರ್ಕಾರವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.