ಪೊಲೀಸರ ಥಳಿತದಿಂದ ಯುವಕನ ಸಾವು; ಆರೋಪ

| Published : Apr 02 2025, 01:03 AM IST / Updated: Apr 02 2025, 01:04 AM IST

ಸಾರಾಂಶ

ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮುಂದೆ ಶಾಸಕ ಡಾ.ಶಿವರಾಜ ಪಾಟೀಲ್‌ ನೇತೃತ್ವದಲ್ಲಿ ದಿಢೀರ್‌ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ವಿಚಾರಣೆಗೆಂದು ಠಾಣೆಗೆ ಕೊರೆದೊಯ್ದ ಪೊಲೀಸರು ಹಿಗ್ಗಾಮುಗ್ಗಾ ಥಳಿತದ ಪರಿಣಾಮ ಯುವಕ ಮೃತಪಟ್ಟಿದ್ದಾನೆ ಎಂದು ಅರೋಪಿಸಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲ್‌ ನೇತೃತ್ವದಲ್ಲಿ ಕುಟುಂಬಸ್ಥರು ಮಂಗಳವಾರ ರಾತ್ರಿ ದಿಢೀರ್‌ ಪ್ರತಿಭಟನೆ ನಡೆಸಿದರು.ಸ್ತಳೀಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮುಂದೆ ಶಾಸಕರ ನೇತೃತ್ವದಲ್ಲಿ ಸೇರಿದ ಮುಖಂಡರು, ಕುಟುಂಬಸ್ಥರು ಹಾಗೂ ನಿವಾಸಿಗಳು ಪಶ್ಚಿಮ ಠಾಣೆ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.ಘಟನೆಯ ಹಿನ್ನೆಲೆ :ರಾಯಚೂರು ನಗರದ ಐಬಿ ಕಾಲೋನಿ ನಿವಾಸಿ ಮೃತ ವೀರೇಶ್ ನಾಯಕ (27) ಹಾಗೂ ಪತ್ನಿ ನಡುವೆ ಜಗಳವಾಗಿದ್ದರಿಂದ ಕುಟುಂಬಸ್ಥರು ಠಾಣೆಗೆ ದೂರು ಸಲ್ಲಿಸಿದ್ದರು. ಇದನ್ನಾಧರಿಸಿ ಪೊಲೀಸರು ಯುವಕ ವೀರೇಶ್ ನಾಯಕ ಅವರನ್ನು ಮೊದಲಿಗೆ ಮಹಿಳಾ ಠಾಣೆ ಹಾಗೂ ಸದರ ಬಜಾರ್‌ ಠಾಣೆಗೆ ಕರೆಸಿ ಹೊಡೆದಿದ್ದಾರೆ. ತದನಂತರ ಪಶ್ಚಿಮ ಠಾಣೆಗೆ ಕರೆಯಿಸಿ ಹಲ್ಲೆ ಮಾಡಿದ್ದರಿಂದ ಮೃತಪಟ್ಟಿದ್ದಾನೆ. ಈ ಕುರಿತು ಠಾಣೆ ವಿರುದ್ಧ ಕುಟುಂಬಸ್ಥರು ದೂರು ಸಲ್ಲಿಸಿದರೂ ಸಹ ಜಿಲ್ಲಾ ಪೊಲೀಸ್‌ ಇಲಾಖೆ ಯಾವುದೇ ಕ್ರಮ ಜರುಗಿಸಿಲ್ಲವೆಂದು ಪ್ರತಿಭಟನಾ ನಿರತರು ದೂರಿದರು.ಪ್ರತಿಭಟನೆಯಲ್ಲಿ ಮುಖಂಡರಾದ ರಾಘವೇಂದ್ರ ಊಟ್ಕೂರು, ರವೀಂದ್ರ ಜಲ್ದಾರ್‌, ವೆಂಕಟೇಶ ನಾಯಕ, ಕಡಗೋಳ ಆಂಜನೇಯ್ಯ, ಎನ್‌.ನಾಗರಾಜ, ವೀರೇಶ್‌, ಶ್ರೀನಿವಾಸರೆಡ್ಡಿ, ಶಶಿಕುಮಾರ, ವಿಜಯಕುಮಾರ, ಪಿ.ಯಲ್ಲಪ್ಪ ಸೇರಿದಂತೆ ಕುಟುಂಬಸ್ಥರು, ಕಾರ್ಯಕರ್ತರು ಇದ್ದರು.

ಲಾಕ್‌ ಆಪ್‌ ಡೆತ್‌: ಕ್ರಮಕ್ಕೆ ಪಾಟೀಲ್‌ ಆಗ್ರಹ

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಡಾ.ಶಿವರಾಜ ಪಾಟೀಲ್‌, ಗಂಡ-ಹೆಂಡತಿ ಜಗಳವನ್ನು ಬಗೆಹರಿಸಬೇಕಾದ ಪೊಲೀಸರೇ ವಿಚಾರಣೆ ಹೆಸರಿನಲ್ಲಿ ಕೂಲಿ ಮಾಡಿಕೊಂಡಿದ್ದ ವೀರೇಶ್‌ ನಾಯಕ ಎನ್ನುವ ಯುವಕನನ್ನು ಮನಬಂದಂತೆ ಹೊಡೆದು ಸಾಯಿಸಿದ್ದಾರೆ. ಇದೊಂದು ಲಾಕ್‌ ಅಪ್‌ ಡೆತ್ ಆಗಿದೆ. ಇಂತಹ ಕೃತ್ಯವನ್ನು ನನ್ನ ಜೀವನದಲ್ಲಿ ಕಂಡಿಲ್ಲ. ಕಾನೂನು ಸಂರಕ್ಷಣೆ ಮಾಡುವವರೇ ಕಾನೂನನ್ನು ಕೈಗೆತ್ತಿಕೊಂಡು ಒಬ್ಬ ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಕನನ್ನು ವಿಚಾರಣೆ ಹೆಸರಿನಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಖಂಡನೀಯ ವಿಷಯವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೂ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬುವುದು ಮತ್ತೊಮ್ಮೆ ಸಾಬೀದಾಗಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪಶ್ಚಿಮ ಠಾಣೆಯ ಅಧಿಕಾರಿ, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು. ಠಾಣೆ ಸಿಪಿಐ, ಪಿಎಸ್‌ಐ ಅವರನ್ನು ಅಮಾನತುಮಾಡಬೇಕು. ನ್ಯಾಯಾಂಗ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಬ್ಬರು ಸಣ್ಣ ಮಕ್ಕಳಿರುವ ಮೃತ ವೀರೇಶ್‌ ಕುಟುಂಬಕ್ಕೆ 1 ಕೋಟಿ ರು. ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.