ಇತ್ತೀಚಿನ ವರ್ಷಗಳಲ್ಲಿ ಯುವ ಸಮುದಾಯ ಸಾಹಿತ್ಯದಿಂದ ದೂರ ಸರಿಯುತ್ತಿದ್ದು, ಸಾಹಿತ್ಯ ಬಡವಾಗುತ್ತಿದೆ. ಆದ್ದರಿಂದ ಯುವ ಜನಾಂಗ ಹೆಚ್ಚು ಸಾಹಿತ್ಯದ ಕಡೆಗೆ ಗಮನ ಹರಿಸಬೇಕಿದೆ. ಇದಕ್ಕಾಗಿ ಹೆಚ್ಚೆಚ್ಚು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕೆಂದು ಹಿರಿಯ ಸಾಹಿತಿ ಪ್ರೊ. ಶಾಂತಿನಾಥ ದಿಬ್ಬದ ಹೇಳಿದರು.

ಧಾರವಾಡ:

ಯಾವುದೇ ಸಾಹಿತ್ಯ ಜೀವನಕ್ಕೆ ಮಾರ್ಗದರ್ಶನ ನೀಡುವ ಹಾಗೂ ಮನಸ್ಸು ಬೆಸೆಯುವ ಕಾರ್ಯ ಮಾಡಲಿ. ಅಂತಹ ಸಾಹಿತ್ಯ ಹೆಚ್ಚು ರಚನೆಯಾಗಲಿ ಎಂದು ಹಿರಿಯ ಸಾಹಿತಿ ಪ್ರೊ. ಶಾಂತಿನಾಥ ದಿಬ್ಬದ ಹೇಳಿದರು.

ಇಲ್ಲಿಯ ಆಲೂರ ವೆಂಕಟರಾವ್ ಸಭಾಭವನದಲ್ಲಿ ಗುರುವಾರ ನಡೆದ 12ನೇ ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಅವರು, ಇತ್ತೀಚಿನ ವರ್ಷಗಳಲ್ಲಿ ಯುವ ಸಮುದಾಯ ಸಾಹಿತ್ಯದಿಂದ ದೂರ ಸರಿಯುತ್ತಿದ್ದು, ಸಾಹಿತ್ಯ ಬಡವಾಗುತ್ತಿದೆ. ಆದ್ದರಿಂದ ಯುವ ಜನಾಂಗ ಹೆಚ್ಚು ಸಾಹಿತ್ಯದ ಕಡೆಗೆ ಗಮನ ಹರಿಸಬೇಕಿದೆ. ಇದಕ್ಕಾಗಿ ಹೆಚ್ಚೆಚ್ಚು ಓದುವ ಅಭ್ಯಾಸ ರೂಢಿಸಿಕೊಳ್ಳಿ ಎಂಬ ಸಲಹೆ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಹೆಚ್ಚೆಚ್ಚು ಹಮ್ಮಿಕೊಂಡು ಸಾಹಿತ್ಯದ ಬಗ್ಗೆ ಅರಿವು ಉಂಟು ಮಾಡಬೇಕಾಗಿದೆ. ಒಳ್ಳೆಯ ನಾಗರಿಕರಾಗಲು ಸಾಹಿತ್ಯ ಅಧ್ಯಯನ ನಡೆಸಬೇಕು. ಕನ್ನಡ ಬೆಳವಣಿಗೆಗೆ ಪ್ರತಿಯೊಬ್ಬರು ಶ್ರಮಿಸಬೇಕೆಂದು ನುಡಿದರು. ರಾಮಚಂದ್ರ ಕುಲಕರ್ಣಿಯವರ "ಅನುಭೂತ ಅನವರತ "ಪುಸ್ತಕವನ್ನು ಬಿಡುಗಡೆಗೊಳಿಸಿದ ಮೇಯರ್‌ ಜ್ಯೋತಿ ಪಾಟೀಲ, ಕನ್ನಡದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ಹಾಗೆಯೇ ಅಭಿಮಾನ ಇರಬೇಕು. ಕನ್ನಡ ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಡಾ. ಎ.ಎಂ. ಖಾನ್, ಧಾರವಾಡ ಸಾಹಿತಿಗಳ ತವರೂರು. ಇಲ್ಲಿ ಕರ್ನಾಟಕದ ಅರ್ಧದಷ್ಟು ಸಾಹಿತಿ, ಕವಿ ಹಾಗೂ ಕಲಾವಿದರಿದ್ದಾರೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡವು ಹಿತಕರ, ರೋಮಾಂಚನ ಭಾಷೆಯಾಗಿದೆ. ಯುವ ಜನಾಂಗ ಇಂಗ್ಲಿಷ್‌ ಬೆನ್ನು ಬೀಳದೇ ಮಾತೃ ಭಾಷೆಯತ್ತ ಸಹ ಒಲವು ತೋರಬೇಕಿದೆ ಎಂದು ಹೇಳಿದರು.

ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ, ಪಾಲಿಕೆ ಸಭಾನಾಯಕ ಈರೇಶ ಅಂಚಟಗೇರಿ ಹಾಗೂ ನಿಕಟ ಪೂರ್ವ ಸಮ್ಮೇಳನ ಅಧ್ಯಕ್ಷ ಡಾ. ನಿತಿನ್ ಚಂದ್ರ ಹತ್ತಿಕಾಳ ಹಾಗೂ ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು.

ಸಮ್ಮೇಳನಾಧ್ಯಕ್ಷ ಡಾ. ಚಂದ್ರಶೇಖರ ರೊಟ್ಟಿಗವಾಡ, ಡಾ. ರಂಜಾನ ದರ್ಗಾ, ಡಾ. ಬಾಳಣ್ಣ ಶೀಗಿಹಳ್ಳಿ, ಡಾ. ಶ್ರೀನಿವಾಸ ವಾಡಪ್ಪಿ, ಡಾ. ಎಸ್.ಎಸ್. ಅಂಗಡಿ, ಪ್ರೊ. ಕೆ.ಎಸ್. ಕೌಜಲಗಿ ಇದ್ದರು. ಮಹಾಂತೇಶ ನರೇಗಲ್ಲ ಸ್ವಾಗತಿಸಿದರು. ಮೇಘಾ ಹುಕ್ಕೇರಿ ನಿರೂಪಿಸಿದರು. ಪ್ರಮೀಳಾ ಜಕಣ್ಣವರ ನಿರ್ವಹಿಸಿದರು. ಮರ್ತಾಂಡಪ್ಪ ಕತ್ತಿ ವಂದಿಸಿದರು.ಗಮನ ಸೆಳೆದ ಮೆರವಣಿಗೆ

ಕನ್ನಡದ ಧ್ವಜ, ವಿದ್ಯಾರ್ಥಿಗಳ ನೃತ್ಯ ಹಾಗೂ ಕಲಾ ತಂಡಗಳು ಧಾರವಾಡ ಕನ್ನಡ ಸಾಹಿತ್ಯ ಸಮ್ಮೇಳನದ ಭವ್ಯ ಮೆರವಣಿಗೆಯಲ್ಲಿ ವಿಭಿನ್ನವಾಗಿ ಗಮನ ಸೆಳೆದವು. ಸಾಹಿತ್ಯ ಪ್ರೇಮಿಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಉತ್ಸಾಹದಿಂದ ಮೆರವಣಿಗೆಯಲ್ಲಿ ಭಾಗವಹಿಸಿ ಕನ್ನಡದ ಪರಂಪರೆ ಹಾಗೂ ಗೌರವ ಪ್ರದರ್ಶಿಸಿದರು. ಅಂಜುಮನ್ ಕಾಲೇಜಿನಿಂದ ಪ್ರಾರಂಭವಾದ ಮೆರವಣಿಗೆ ಆಝಾದ ಪಾರ್ಕ್, ಜುಬ್ಲಿ ಸರ್ಕಲ್, ಕೆಸಿಡಿ ರಸ್ತೆ ಮಾರ್ಗವಾಗಿ ಮುಖ್ಯ ವೇದಿಕೆಗೆ ತಲುಪಿತು. ಸಮ್ಮೇಳನಧ್ಯಕ್ಷ ಡಾ. ಚಂದ್ರಶೇಖರ ರೊಟ್ಟಿಗವಾಡ ಅವರನ್ನು ಹೊತ್ತ ತೇರು ಎಲ್ಲರ ಗಮನ ಸೆಳೆಯಿತು.