ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ರುಡ್‌ಸೆಟ್ ಸಂಸ್ಥೆಯ ವತಿಯಿಂದ 6 ದಿನ ಕಾಲ ಹಿರಿಯಡ್ಕದ ಜಿಲ್ಲಾ ಕಾರಾಗೃಹ ಜೈಲುವಾಸಿಗಳಿಗೆ ನಡೆಯುವ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ
ಬ್ರಹ್ಮಾವರ: ಯುವಜನತೆಗೆ ಸ್ವ- ಉದ್ಯೋಗದ ಮೂಲಕ ಸ್ವಾವಲಂಬಿ ಬದುಕನ್ನು ರೂಪಿಸುತ್ತಿರುವ ರುಡ್‌ಸೆಟ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ಇಲ್ಲಿ ಸಿಕ್ಕಿರುವ ಕೌಶಲ್ಯದ ಅವಕಾಶಗಳನ್ನು ಜೀವನದಲ್ಲಿ ಬಳಸಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಗಂಗಣ್ಣವರ್ ಕರೆ ನೀಡಿದರು.
ಅವರು ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ರುಡ್‌ಸೆಟ್ ಸಂಸ್ಥೆಯ ವತಿಯಿಂದ 6 ದಿನ ಕಾಲ ಹಿರಿಯಡ್ಕದ ಜಿಲ್ಲಾ ಕಾರಾಗೃಹ ಜೈಲುವಾಸಿಗಳಿಗೆ ನಡೆಯುವ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯನ್ನು, ಸಸಿಗೆ ನೀರು ಹಾಕಿ ಉದ್ಘಾಟಿಸಿ, ಜೈಲುವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಇಂದು ಉದ್ದಿಮೆಯನ್ನು ಮಾಡಲು ಕೌಶಲ್ಯಗಳ ಕೊರತೆ ಇದೆ. ಆ ನಿಟ್ಟಿನಲ್ಲಿ ಸಿಸಿಟಿವಿ ರಿಪೇರಿ ಮತ್ತು ಸರ್ವೀಸ್ ಸಂಬಂಧಿಸಿದ ಕೌಶಲ್ಯಗಳ ತರಬೇತಿಗಳನ್ನು ನಿಮ್ಮ ಬಳಿಯೇ ಬಂದು ರುಡ್‌ಸೆಟ್ ಸಂಸ್ಥೆ ಕೊಡುತ್ತಿದೆ. ಹಾಗಾಗಿ ನಿಮ್ಮ ಬದುಕನ್ನು ಪರಿವರ್ತನೆ ಮಾಡಿಕೊಳ್ಳುವುದರ ಮೂಲಕ ತಾವುಗಳು ಇಲ್ಲಿಂದ ಬಿಡುಗಡೆಯಾಗಿ ಹೋದ ಮೇಲೆ ಸ್ವಾವಲಂಬಿ ಬದುಕನ್ನು ರೂಪಿಸಿಕೊಂಡರೆ ನೀವು ಯಶಸ್ವಿಯಾದಂತೆ ಎಂದು ಹೇಳಿ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಉಡುಪಿ ಜಿಲ್ಲಾ ಕಾರಾಗೃಹ ಅಧೀಕ್ಷಕ ವಿಜಯಕುಮಾರ ಡಿ. ಚವ್ಹಾಣ್ ಮಾತನಾಡಿ ಈ ಒಂದು ತರಬೇತಿಯಲ್ಲಿ ಸಿಗುವಂತಹ ಕೌಶಲ್ಯಗಳನ್ನು ಉಪಯೋಗಿಸಿಕೊಂಡು ಯಶಸ್ವಿ ಉದ್ಯಮಿಯಾಗಿ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಎಂದು ಶುಭ ಹಾರೈಸಿದರು.ಮುಖ್ಯ ಅತಿಥಿಗಳಾದ ಉಡುಪಿ ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ ಜಿ. ಮಾತನಾಡಿ ಬ್ಯಾಂಕಿನಿಂದ ದೊರೆಯುವ ಸಾಲ- ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಿ ಎಂದು ಶುಭ ಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿ ಉಡುಪಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್ ಬಿ., ಬದುಕಿನಲ್ಲಿ ಕೌಶಲ್ಯಗಳಿದ್ದರೆ ನಾವು ಎಲ್ಲಿ ಬೇಕಾದರೂ ಜೀವನ ಕಟ್ಟಿಕೊಳ್ಳಬಹುದು. ಹಾಗಾಗಿ ಈ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಯಶಸ್ವಿಯಾಗಿ ಎಂದು ಶುಭ ಹಾರೈಸಿದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಂ., ತಪ್ಪು ಮಾಡುವುದು ಸಹಜ, ಆದರೆ ತಪ್ಪನ್ನು ಅರಿತು ತಿದ್ದಿ ನಡೆಯುವುದು ಮನುಜ ಗುಣ ಎಂದು ಹೇಳಿ, ಮುಂದಿನ ನಿಮ್ಮ ಜೀವನದಲ್ಲಿ ಸ್ವ ಉದ್ಯೋಗ ಕೈಗೊಂಡು ಗೌರವ ಮತ್ತು ಘನತೆಯನ್ನು ಸಂಪಾದಿಸಿಕೊಳ್ಳಿ ಎಂದು ಶುಭ ಹಾರೈಸಿದರು. ಹಿರಿಯ ಉಪನ್ಯಾಸಕ ಸಂತೋಷ್ ಶೆಟ್ಟಿ ನಿರೂಪಿಸಿ, ಜಿಲ್ಲಾ ಕಾರಾಗೃಹದ ಸಿಬ್ಬಂದಿ ರೇಷ್ಮಾ ನಾಯಕ್ ಸ್ವಾಗತಿಸಿ, ಹಿರಿಯ ಕಛೇರಿ ಸಹಾಯಕರಾದ ರವಿ ವಂದಿಸಿದರು.