ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಆಧುನಿಕ ಯುಗದಲ್ಲಿ ಯುವಜನಾಂಗ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಸರ್ಕಾರ ಶಿಕ್ಷಣ ಇಲಾಖೆ ಮೂಲಕ ಗ್ರಾಮೀಣ ಕ್ರೀಡೆಗಳ ಬಗ್ಗೆ ಅರಿವು ಮೂಡಿಸಿ ಆಸಕ್ತಿ ಬೆಳೆಯುವಂತೆ ಮಾಡಬೇಕು ಎಂದು ನಿವೃತ್ತ ಸೈನಿಕ ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.ಕೊಡಗು ಜಿಲ್ಲಾ ಮತ್ತು ಕುಶಾಲನಗರ ತಾಲೂಕು ಹೆಬ್ಬಾಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿಗಳ ಸಂಯುಕ್ತ ಆಶ್ರಯದಲ್ಲಿ ಹೆಬ್ಬಾಲೆ ಗ್ರಾಮದ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಾನಪದ ಗ್ರಾಮ ಸಿರಿ ಕಾರ್ಯಕ್ರಮದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಗ್ರಾಮ ಸಿರಿ ಆಚರಣಾ ಸಮಿತಿ ಆರ್ಥಿಕ ಸಮಿತಿ ಅಧ್ಯಕ್ಷ ಎಚ್.ಕೆ.ನಟೇಶ್ ಮಾತನಾಡಿ, ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ ಮಾಡಿ ಇಂದಿನ ಯುವ ಪೀಳಿಗೆಯಲ್ಲಿ ಗ್ರಾಮೀಣ ಆಟಗಳ ಬಗ್ಗೆ ಪ್ರೇರೇಪಣೆ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರುತೊರೆನೂರು ಗ್ರಾಮದ ರಾಜ್ಯ ಮಟ್ಟದ ಕ್ರೀಡಾಪಟು ಟಿ.ಎಚ್.ಗಣೇಶ್ ಕ್ರೀಡಾ ಜ್ಯೋತಿ ಬೆಳಗಿದರು.
ನಿವೃತ್ತ ಶಿಕ್ಷಕ ಡಿ.ಪಿ.ವೀರಭದ್ರಪ್ಪ, ಹೆಬ್ಬಾಲೆ ಗ್ರಾ.ಪಂ. ಅಧ್ಯಕ್ಷೆ ಅರುಣಕುಮಾರಿ, ಸದಸ್ಯ ಎಚ್.ಪಿ.ತನುಕುಮಾರ್, ತಾಲೂಕು ಕ.ಸಾ.ಪ. ಅಧ್ಯಕ್ಷ ಕೆ.ಎಸ್.ನಾಗೇಶ್, ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ಎಚ್.ಎಲ್.ರಮೇಶ್, ಕೆ.ವಿ.ಉಮೇಶ್, ಪುಟ್ಟೇಗೌಡ, ಕ್ರೀಡಾ ಸಮಿತಿ ಅಧ್ಯಕ್ಷ ಬೊಜೇಗೌಡ, ವಸ್ತು ಪ್ರದರ್ಶನ ಸಮಿತಿ ಅಧ್ಯಕ್ಷ ಎಚ್.ಆರ್.ಪ್ರದೀಪ್ ರೆಡ್ಡಿ, ಮತ್ತಿತರರು ಇದ್ದರುಗ್ರಾಮದ ಮಹಿಳೆಯರು, ಮಕ್ಕಳು ಮತ್ತು ಪುರುಷರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಿಂದಿಗೆಯಲ್ಲಿ ನೀರು ತುಂಬಿ ಓಡುವುದು, ಕೆರೆ ದಡ, ಚಮಚದಲ್ಲಿ ನಿಂಬೆಹಣ್ಣು ಹಿಡಿದು ಓಡುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟ, ಮಕ್ಕಳಿಗೆ ಚಿನ್ನಿದಾಂಡು, ಗೋಲಿ ಇತರೆ ಹಲವಾರು ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿದರು.