ಕನ್ನಡಪ್ರಭ ವಾರ್ತೆ ಶಿರಸಿ

ಕಳೆದ ಎರಡು ದಶಕಗಳಿಂದ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುಕೊಂಡು ಬರುತ್ತಿರುವ ಬೆಂಗಳೂರಿನ ಸಪ್ತಕ ಸಂಸ್ಥೆ ನಗರದ ರಂಗಧಾಮದಲ್ಲಿ ಆಯೋಜಿಸಿದ್ದ ಯುವ ಸಂಗೀತೋತ್ಸವ ಕಾರ್ಯಕ್ರಮ ಯಶಸ್ವಿಗೊಂಡಿದೆ.

ಬೆಂಗಳೂರಿನ ಶ್ರೀಹರಿ ಕುಲಕರ್ಣಿ ಇಂಪಾದ ಕಂಠಸಿರಿಯ ಗಾಯನ, ನಂತರ ಅಂತಾರಾಷ್ಟ್ರೀಯ ಖ್ಯಾತಿಯ ಯುವ ತಬಲಾ ವಾದಕ ಮುಂಬಯಿಯ ಯಶವಂತ ವೈಷ್ಣವ ತಬಲಾ ಸ್ವತಂತ್ರ ವಾದನ ಬೆರಗು‌ ಮೂಡಿಸಿತು.

ಕಲಾ ನೈಪುಣ್ಯ ಸಾಧಿಸಿದ ಅದ್ಭುತ ಕಲಾವಿದರು ಒಂದು ಕಾಲು ಘಂಟೆ ಖಚಿತ ಲಯ, ಸ್ಪುಟವಾದ ಬೋಲ್ಗಳ ಪೆಟ್ಟುಗಳ‌ ಮೂಲಕ ಗಮನ ಸೆಳೆದರು. ಪ್ರತೀ ಆವರ್ತನೆಗೂ ಚಪ್ಪಾಳೆಗಳ ಸುರಿಮಳೆ‌ ನಡೆದಿದ್ದು ಕಾರ್ಯಕ್ರಮದ ಯಶಕ್ಕೆ ಸಾಕ್ಷಿಯಾಗಿತ್ತು.

ಹೆಸರಾಂತ ಗಾಯಕ ಬೆಂಗಳೂರಿನ ಸಿದ್ಧಾರ್ಥ ಬೆಳ್ಮಣ್ಣು ಅವರ ಇಂಪು ಸೊಂಪಾದ ಗಾಯನ ಪ್ರಸ್ತುತಿ ಸಂಗೀತದ ಮೂಲ ಉದ್ದೇಶವಾದ ಸ್ವರಾನಂದ-ಆತ್ಮಾನಂದ ಕೊಡುವಲ್ಲಿ ಸಾಫಲ್ಯ ಪಡೆಯಿತು.ರಾಗದ ವ್ಯವಸ್ಥಿತ ವಿಸ್ತಾರ ಮಾಡುತ್ತ ನಿಧಾನವಾಗಿ ಲಯದ ವೇಗ ಹೆಚ್ಚಿಸುತ್ತಾ ಎಲ್ಲಿಯೂ ಆತುರ ಮಾಡದೇ ಹಾಡುವ ಪರಿ ಬಲು ಸೊಗಸು. ಕೊನೆಯಲ್ಲಿ ಎರಡು ಭಕ್ತಿಗೀತೆ ಹಾಡಿ ಮುಗಿಸಿದಾಗ ಶ್ರೋತೃಗಳ ಗಡಚಿಕ್ಕುವ ಚಪ್ಪಾಳೆ, ಪ್ರಶಂಸೆಗಳ ಸುರಿಮಳೆ ಪಡೆದರು.ಎರಡೂ ಗಾಯನ ಕಾರ್ಯಕ್ರಮಗಳಿಗೂ ಸ್ವರ ಸಾಂಗತ್ಯವನ್ನು ಯೋಗೀಶ್ ಭಟ್ಟ ಸಾಗರ ಹಾಗೂ ಭರತ್ ಹೆಗಡೆ, ಹೆಬ್ಬಲಸು ನೀಡಿದರು.ನಾಲ್ಕು ತಾಸುಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ದೂರದೂರದ ಊರಿನಿಂದ ಬಂದ ಪ್ರೇಕ್ಷಕರು, ವಿಶೇಷವಾಗಿ ಕಡತೋಕ ಶಂಭು ಭಟ್ಟ, ಪಂ. ಗಣಪತಿ ಭಟ್ಟ ಹಾಸಣಗಿ ಅವರಂಥ ಸಾಧಕರೂ ಇಡೀ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸಪ್ತಕದ ಸಂಚಾಲಕ ಜಿ.ಎಸ್. ಹೆಗಡೆ, ವೈಶಾಲಿ ವಿ.ಪಿ. ಹೆಗಡೆ ಜಂಟಿಯಾಗಿ ದೀಪ ಬೆಳಗಿದರು.