ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಆಧುನಿಕ ತಂತ್ರಜ್ಞಾನದ ಜೊತೆ ಕೃಷಿ ಪೂರಕ ಚಟುವಟಿಕೆಗಳನ್ನು ಸಹ ಉತ್ತೇಜಿಸಬೇಕಿದೆ. ಅದರ ಭಾಗವಾಗಿ ಸಮಗ್ರ ಕೃಷಿ ಮಾಡುವುದರ ಜೊತೆ ಅಣಬೆ ಬೇಸಾಯಯನ್ನು ಸಹ ಆದಾಯದ ಮೂಲವಾಗಿಸಿಕೊಳ್ಳಬಹುದು ಎಂದು ತುಮಕೂರು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ರುದ್ರಪ್ಪ ಎಂ.ಆರ್ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಆಧುನಿಕ ತಂತ್ರಜ್ಞಾನದ ಜೊತೆ ಕೃಷಿ ಪೂರಕ ಚಟುವಟಿಕೆಗಳನ್ನು ಸಹ ಉತ್ತೇಜಿಸಬೇಕಿದೆ. ಅದರ ಭಾಗವಾಗಿ ಸಮಗ್ರ ಕೃಷಿ ಮಾಡುವುದರ ಜೊತೆ ಅಣಬೆ ಬೇಸಾಯಯನ್ನು ಸಹ ಆದಾಯದ ಮೂಲವಾಗಿಸಿಕೊಳ್ಳಬಹುದು ಎಂದು ತುಮಕೂರು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ರುದ್ರಪ್ಪ ಎಂ.ಆರ್ ಅವರು ತಿಳಿಸಿದರು.

೨೦೨೬-೨೭ ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಚಿಕ್ಕನಹಳ್ಳಿ ಹಾಗೂ ನವ್ಯದಿಶ ಸಹಯೋಗದಲ್ಲಿ ಕೇಂದ್ರದಲ್ಲಿ ನಡೆದ ಎರಡು ದಿನಗಳ ಅಣಬೆ ಬೇಸಾಯ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನವ್ಯದಿಶ ಸಂಸ್ಥೆಯ ಸಹಯೋಗದಲ್ಲಿ ಎರಡು ದಿನಗಳ ಅಣಬೆ ಬೇಸಾಯದ ತರಬೇತಿಯನ್ನು ನಡೆಸಲಾಗುತ್ತಿದೆ. ತರಬೇತಿ ಪಡೆದ ನಂತರ ಪ್ರಾಯೋಗಿಕವಾಗಿ ನೋಡಲು ಕ್ಷೇತ್ರ ಭೇಟಿ ಮಾಡಲಾಗುತ್ತದೆ. ಕೃಷಿಕರು ಯಾವುದೇ ಉದ್ಯಮವನ್ನು ಮಾಡುವ ಮೊದಲು ಸಣ್ಣ ಪ್ರಮಾಣದಲ್ಲಿ ಮಾಡುವ ಮೂಲಕ ಪ್ರಯೋಗ ಮಾಡಿ ನಂತರ ಬೃಹತ್ ಪ್ರಮಾಣದಲ್ಲಿ ಮಾಡಲು ಮುಂದಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ತರಬೇತಿ ಕೇಂದ್ರದಲ್ಲಿ ನಡೆಯುವ ಎಲ್ಲ ತರಬೇತಿಗಳಿಗೆ ಯುವ ರೈತರು ಭಾಗವಹಿಸಿ ಕೇಂದ್ರದಲ್ಲಿ ನಡೆಯುವ ತರಬೇತಿಗಳ ಜೊತೆಗೆ ತಮ್ಮ ತಮ್ಮ ಗ್ರಾಮಗಳಲ್ಲೂ ಸಹ ಇಲಾಖೆಯಿಂದ ಸಮುದಾಯಕ್ಕೆ ಬಂದು ತರಬೇತಿ ನೀಡಲಾಗುತ್ತದೆ ಎಂಬುದಾಗಿ ತಿಳಿಸಿದರು.

ನವ್ಯದಿಶದ ಕಾರ್ಯಕ್ರಮ ಸಂಯೋಜಕರಾದ ಮಂಜುನಾಥ್ ಅಮಲಗೊಂದಿರವರು ಮಾತನಾಡಿ ಭಾರತದ ಪ್ರಸ್ತುತ ಅನೇಕ ಯುವಜನರು ಪದವಿ ಪಡೆದಿದ್ದರೂ, ಪ್ರಾಯೋಗಿಕ ಕೌಶಲ್ಯಗಳ ಕೊರತೆಯಿದೆ. ಈ ಕೌಶಲ್ಯದ ಅಂತರವನ್ನು ತುಂಬಲು ಹಲವು ತರಬೇತಿಗಳು ಅಗತ್ಯವಾಗಿ ಬೇಕಿದೆ. ಕೃತಕ ಬುದ್ಧಿಮತ್ತೆ, ಆಟೊಮೇಷನ್ ಮತ್ತು ಡಿಜಿಟಲೀಕರಣದಿಂದಾಗಿ ಸಾಂಪ್ರದಾಯಿಕ ಉದ್ಯೋಗಗಳು ಮಾಯವಾಗುತ್ತಿವೆ. ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಯುವಜನರಿಗೆ ಮರುಕೌಶಲ್ಯ ಅನಿವಾರ್ಯವಾಗಿದೆ ಎಂದರು.

ತರಬೇತಿ ಕಾರ್ಯಕ್ರಮದಲ್ಲಿ ತರಬೇತುದಾರರಾದ ನಾಗಣ್ಣನವರು ಮಾತನಾಡುತ್ತಾ, ಅಣಬೆಯು ಪೌಷ್ಟಿಕಾಂಶಗಳ ಆಗರವಾಗಿದ್ದು ಶರ್ಕರ ಪಿಷ್ಟ, ಪ್ರೋಟಿನ್, ವಿಟಮಿನ್ ಮತ್ತು ನಾರಿನ ಅಂಶ ಹೇರಳವಾಗಿದ್ದು ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣ ಬಹಳ ಕಡಿಮೆ ಇರುವುದರಿಂದ ಅಧಿಕ ರಕ್ತದೋತ್ತಡ ಮತ್ತು ಮಧುಮೇಹಿ ಸ್ನೇಹಿತರಿಗೆ ಶಿಫಾರಸ್ಸು ಮಾಡಬಹುದಾದ ಆಹಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಗಳಾದ ಡಾ.ರಮೇಶ ಸೇರಿದಂತೆ, ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಸುಮಾ, ಕೇಂದ್ರದ ಸಿಬ್ಬಂದಿ ಮಂಜುನಾಥ್ ಅವರು ಹಾಗೂ ೪೦ ರೈತರು ಭಾಗವಹಿಸಿದ್ದರು.