ಪರಿಸರ ಸಂರಕ್ಷಣೆಯಲ್ಲಿ ಯುವಕರು ಪಾಲ್ಗೊಳ್ಳಿ

| Published : Jul 23 2025, 01:45 AM IST

ಸಾರಾಂಶ

ಅದೆಲ್ಲದಕ್ಕೂ ಮಿಗಿಲಾಗಿ ಮಾನವೀಯ ಮೌಲ್ಯ ಉಳಿಸಿಕೊಂಡು ತಾವು ಜೀವಿಸುತ್ತಿರುವ ಪರಿಸರ ಸಂರಕ್ಷಿಸಬೇಕು

ಯಲ್ಲಾಪುರ: ನೆಟ್ಟ ಗಿಡಗಳನ್ನು ತಾಯಿಯಂತೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದ್ದು. ಪರಿಸರ ಸಂರಕ್ಷಣೆಯಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ತಾಯಿ ಹೆಸರಿನಲ್ಲೊಂದು ಗಿಡ ಅಭಿಯಾನದಡಿಯಲ್ಲಿ ಜು. ೨೧ ರಂದು ನಡೆದ ವನಮಹೋತ್ಸವದಲ್ಲಿ ಗಿಡ ನೆಟ್ಟು ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ಡಿಸಿಎಫ್ ಹರ್ಷಬಾನು ಜಿ.ಪಿ ಮಾತನಾಡಿ, ಎಲ್ಲ ಸಾಧನೆ ನಾವು ಮಾಡಲೇಬೇಕು. ಅದೆಲ್ಲದಕ್ಕೂ ಮಿಗಿಲಾಗಿ ಮಾನವೀಯ ಮೌಲ್ಯ ಉಳಿಸಿಕೊಂಡು ತಾವು ಜೀವಿಸುತ್ತಿರುವ ಪರಿಸರ ಸಂರಕ್ಷಿಸಬೇಕು. ಪರಿಸರ ರಕ್ಷಣೆಯಲ್ಲಿ ಇಲಾಖೆಯೊಂದಿಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ದನ್ ಮಾತನಾಡಿ, ಮನುಷ್ಯ ಹೆಚ್ಚು ಬುದ್ದಿವಂತನಾದಷ್ಟು ತನಗಿಂತ ದುರ್ಬಲವಾದಂತಹ ವನ್ಯ ಜೀವಿಗಳನ್ನು ಹಾಗೂ ಮರಗಿಡಗಳ ಮೇಲೆ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಾನೆ. ಆದರೆ ಮನುಕುಲದಲ್ಲಿ ಭೂಮಿಯ ಮೇಲೆ ಎಲ್ಲ ಜೀವಿಗಳಿಗೂ ಬದುಕುವ ಹಕ್ಕು ಇದೆ ಎಂಬುದನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡಬೇಕು ಎಂದರು.

ಎಸಿಎಫ್ ಹಿಮವತಿ ಭಟ್ಟ, ಆರ್.ಎಫ್.ಓ ನರೇಶ್ ಜಿ.ವಿ, ಕ್ರಿಯೇಟಿವ್ ಕಂಪ್ಯೂಟರ್ಸ್ ನಿರ್ದೇಶಕ ಶ್ರೀನಿವಾಸ ಮುರ್ಡೇಶ್ವರ, ಅರಣ್ಯ ಇಲಾಖೆಯ ಸಿಬ್ಬಂದಿ, ಕಾಲೇಜಿನ ವಿದ್ಯಾರ್ಥಿಗಳು, ಬೋಧಕ,ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಪತ್ರಾಂಕಿತ ವ್ಯವಸ್ಥಾಪಕ ಎನ್. ಬಿ. ಮೆಣಸುಮನೆ ಸ್ವಾಗತಿಸಿದರು. ದ್ವಿದ ಸಹಾಯಕ ಮಹಾದೇವಪ್ಪ ಹುಲಕೊಪ್ಪ ವಂದಿಸಿದರು.