ಹೊಸ ಆಲೋಚನೆ, ಕಾರ್ಯಕ್ಷಮತೆ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ವೇಗ ನೀಡುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಇಂದ್ರಾಣಿ ಅಭಿಪ್ರಾಯಪಟ್ಟರು.
ಬಳ್ಳಾರಿ: ಯುವಕರು ದೇಶದ ಶಕ್ತಿ, ಭವಿಷ್ಯದ ಮತ್ತು ಬದಲಾವಣೆಯ ಪ್ರಮುಖ ಪಾತ್ರ ನಿರ್ವಹಿಸಲಿದ್ದು, ಯುವಕರಲ್ಲಿನ ಉತ್ಸಾಹ,
ಹೊಸ ಆಲೋಚನೆ, ಕಾರ್ಯಕ್ಷಮತೆ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ವೇಗ ನೀಡುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಇಂದ್ರಾಣಿ ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎಚ್‌ಐವಿ, ಏಡ್ಸ್ ನಿಯಂತ್ರಣ ಘಟಕ ಹಾಗೂ ಶ್ರೀ ಮೇಧಾ ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಯುವದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಭವಿಷ್ಯ ನಿರ್ಮಾಣದ ಪ್ರಮುಖ ಹಂತ. ಯಾವುದೇ ಕಾರಣಕ್ಕೂ ಗುರಿಯಿಂದ ವಿಮುಖರಾಗದೆ ಶಿಸ್ತುಬದ್ಧ ಜೀವನ ನಡೆಸಬೇಕು. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುವ ಎಚ್‌ಐವಿ, ಸಿಫಿಲಿಸ್‌ನಂತಹ ಸೋಂಕುಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.ಯುವಜನರು ಮಾದಕ ದ್ರವ್ಯ ಸೇರಿದಂತೆ ಎಲ್ಲ ದುಶ್ಚಟಗಳಿಂದ ದೂರವಿರಬೇಕು ಹಾಗೂ ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯುತವಾಗಿ ಬಳಸಿ, ಯಾವುದೇ ವಿಷಯ ಹಂಚಿಕೊಳ್ಳುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ.ಕೆ. ರಾಮಕೃಷ್ಣ ಮಾತನಾಡಿ, ಎಚ್‌ಐವಿ, ಏಡ್ಸ್ ನಿಯಂತ್ರಣದಲ್ಲಿ ಸಮಾಜದ ಪಾತ್ರ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಈ ಬಗ್ಗೆ ವೈಜ್ಞಾನಿಕ ಮಾಹಿತಿ ಹೊಂದಿರಬೇಕು. ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮಗಳಿಗೆ ಸಂಸ್ಥೆ ಸದಾ ಬೆಂಬಲ ನೀಡಲಿದೆ ಎಂದು ತಿಳಿಸಿದರು.ಇದೇವೇಳೆ ‘ಮೊಬಿಲೈಸೇಷನ್ ಫಾರ್ ಏಡ್ಸ್ ಸೇಫ್ಟಿ’ ಅಭಿಯಾನದ ಬಗ್ಗೆ ಮಾಹಿತಿ ನೀಡಿ, ಕ್ಯೂಆರ್ ಕೋಡ್ ಮೂಲಕ ಹೆಚ್ಚಿನ ಅರಿವು ಪಡೆದು ಸಮಾಜದಲ್ಲಿ ಜಾಗೃತಿ ಮೂಡಿಸಲು ಪ್ರೇರೇಪಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನಡೆದ ಎಚ್‌ಐವಿ, ಏಡ್ಸ್ ಜಾಗೃತಿ ರೀಲ್ಸ್ ಮೇಕಿಂಗ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.