ಸಾರಾಂಶ
ಬೆಂಗಳೂರಿನ ನಿಮ್ಹಾನ್ಸ್ ನ ಜನ ಆರೋಗ್ಯ ಕೇಂದ್ರ ವತಿಯಿಂದ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ತಿತಿಮತಿಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಯುವ ಸ್ಪಂದನ ಅರಿವು ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಸವಾಲುಗಳಿಲ್ಲದ ಕ್ಷೇತ್ರವೇ ಇಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಬದುಕಿನ ಉದ್ದಕ್ಕೂ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವುದೇ ನಿಜವಾದ ಸಾಧನೆ ಎಂದು ಜಿಲ್ಲಾ ಯುವ ಸ್ಪಂದನ ಕಾರ್ಯಕ್ರಮದ ಸಮಾಲೋಚಕ ಎಂ.ಎಸ್. ಲಕ್ಷ್ಮಿ ಅಭಿಪ್ರಾಯಪಟ್ಟಿದ್ದಾರೆ.ಬೆಂಗಳೂರಿನ ನಿಮ್ಹಾನ್ಸ್ ನ ಜನ ಆರೋಗ್ಯ ಕೇಂದ್ರ ವತಿಯಿಂದ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ತಿತಿಮತಿಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಯುವ ಸ್ಪಂದನ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳ ಜೀವನದಲ್ಲಿಯೂ ಹಲವು ಸವಾಲುಗಳು ಎದುರಾಗುತ್ತವೆ. ಇವುಗಳಿಗೆ ಅಂಜಿಕೊಂಡು ಕುಳಿತರೆ ಭವಿಷ್ಯ ರೂಪಿಸುವುದು ಸಾಧ್ಯವಿಲ್ಲ. ಆಗಿಂದಾಗ್ಗೆ ಮೂಡಿಬರುವ ಸವಾಲು ಮತ್ತು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಆದ್ಯತೆಯಾಗಬೇಕು ಎಂದರು.
ಯುವ ಸಮೂಹಕ್ಕೆ ಶಿಕ್ಷಣದ ಅಗತ್ಯತೆ, ಆರೋಗ್ಯ, ಜೀವನ ಶೈಲಿ, ಸುರಕ್ಷತೆ, ಸಂಬಂಧಗಳು, ವ್ಯಕ್ತಿತ್ವ ಬೆಳವಣಿಗೆ, ಲಿಂಗ ಸಮಾನತೆ, ಲೈಂಗಿಕತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಾಯಿತು.ಯುವ ಸ್ಪಂದನ ಕೇಂದ್ರದಿಂದ ಮತ್ತು ಮಾಹಿತಿ ತಂತ್ರಜ್ಞಾನಾಧಾರಿತ ಪೋರ್ಟಲ್ ಗಳ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಯುವಕ ಯುವತಿಯರಿಗೆ ದೊರೆಯುವ ಉಚಿತ ಸೇವೆಗಳ ಕುರಿತೂ ಮಾಹಿತಿ ನೀಡಲಾಯಿತು.
ತಿತಿಮತಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎ.ಪಿ. ಮಂಜುಳಾ, ಶಾಲಾ ಶಿಕ್ಷಕ ಸಿ.ಎಂ. ರಾಘವೇಂದ್ರ, ಪ್ರಸಾದ್, ಶರತ್ ಕುಮಾರ್ ನವೀನ್ ಬಾಸಿತ್, ಭವಿತ್, ಚೆನ್ನಯ್ಯ ಮತ್ತಿತರರು ಪಾಲ್ಗೊಂಡರು.