ಸಾರಾಂಶ
ಚನ್ನರಾಯಪಟ್ಟಣ: ತಾಲೂಕು ಆಡಳಿತದ ವತಿಯಿಂದ ನಾಡಪ್ರಭು, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ೫೧೫ ನೇ ಜಯಂತಿಯನ್ನು ಆಚರಿಸಲಾಯಿತು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ ೫೧೫ ನೇ ಜನುಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಭಾಗವಹಿಸಿದ್ದ ಅಳಿಸಂದ್ರ ಶ್ರೀನಿವಾಸ್, ಕೆಂಪೇಗೌಡ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಮಾತನಾಡಿ, ದೇಶದ ಭವಿಷ್ಯದ ಪ್ರಜೆಗಳಾಗಿರುವ ಯುವಕರು ಕೆಂಪೇಗೌಡರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ದೇಶ ಸೇವೆಗೆ ಶ್ರಮಿಸುವಂತೆ ಕರೆ ನೀಡಿದರು.ಬೆಂದಕಾಳೂರು ಎಂಬ ಊರು, ಪ್ರಪಂಚದಲ್ಲಿರುವ ದೊಡ್ಡ ನಗರಗಳಲ್ಲಿ ಒಂದಾಗಿ ಬೃಹತ್ ಪ್ರಮಾಣದಲ್ಲಿ ಬೆಳೆದಿರುವುದಕ್ಕೆ ಕೆಂಪೇಗೌಡರ ದೂರದೃಷ್ಟಿಯೇ ಕಾರಣವಾಗಿದೆ. ಕೆಂಪೇಗೌಡರು ಒಂದು ಜಾತಿ,ಧರ್ಮಕ್ಕೆ ಸೀಮಿತವಾಗಿಲ್ಲ. ಪ್ರತಿಯೊಂದು ಸಮುದಾಯದ ಪರವಾಗಿ ಕೆಲಸ ಮಾಡಿ ಸಾಮ್ರಾಟರಾಗಿದ್ದಾರೆ. ಅಂದೇ ಬೆಂಗಳೂರಿನಲ್ಲಿ ಪ್ರತಿಯೊಂದು ಸಮುದಾಯಕ್ಕೆ ಒಂದೊಂದು ಪೇಟೆಗಳನ್ನು ನಿರ್ಮಾಣ ಮಾಡಿದ್ದರು. ಇಂದು ಹಳ್ಳಿಗಳಿಂದ ಬೆಂಗಳೂರಿಗೆ ಯುವಕರು ಉದ್ಯೋಗವನ್ನು ಅರಸಿಕೊಂಡು ವಲಸೆ ಹೋಗುತ್ತಿದ್ದಾರೆ. ಇದಕ್ಕೆ ಬೆಂಗಳೂರು ನಗರ ಆಕರ್ಷಣೆಯೇ ಕಾರಣ. ಕೆಂಪೇಗೌಡರ ಕಾಲದಲ್ಲಿ ನಗರ ನಿರ್ಮಾಣ ಕಾರ್ಯದಲ್ಲಿ ಕೈಗೊಂಡಿರುವ ಯೋಜನೆಗಳು ಅದ್ಭುತವಾಗಿದ್ದವು ಎಂದು ತಿಳಿಸಿದರು.ಶಾಸಕರಾದ ಸಿ. ಎನ್ ಬಾಲಕೃಷ್ಣ, ತಾಲೂಕು ದಂಡಾಧಿಕಾರಿ ಬಿ.ಎಂ. ಗೋವಿಂದರಾಜು, ತಾಲೂಕು ಪಂಚಾಯಿತಿ ಇಒ ಹರೀಶ್, ಪುರಸಭೆ ಮುಖ್ಯ ಅಧಿಕಾರಿ ಹೇಮಂತ್‌ಕುಮಾರ್, ಡಿವೈಎಸ್ಪಿ ರವಿಪ್ರಸಾದ್, ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕಾಳೆನಹಳ್ಳಿ ಆನಂದ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎನ್. ಲೋಕೇಶ್, ಟಿಎಪಿಎಂಎಸ್ ಅಧ್ಯಕ್ಷೆ ಚಂದ್ರಕಲಾ, ಕನ್ನಡಪರ ಹೋರಾಟಗಾರರಾದ ಭರತ್‌ಗೌಡ, ಪ್ರೇಮ್, ನವೀನ್, ಜಗದೀಶ್ ಕೆರೆಬೀದಿ ಸೇರಿ ಇತರರು ಹಾಜರಿದ್ದರು.