ಸಾರಾಂಶ
ಗಜೇಂದ್ರಗಡ: ಸಮಾಜವು ಸದೃಢವಾಗಬೇಕಾದರೆ ಯುವಕರು ಆಧ್ಯಾತ್ಮ ಹಾಗೂ ಸೇವಾಮನೋಭಾವನೆ ಅಳವಡಿಸಿಕೊಂಡು ಸಮಾಜದ ಬದಲಾವಣೆಗೆ ಮುಂದಾದಾಗ ಮಾತ್ರ ವಿವೇಕಾನಂದರು ಕಂಡ ಕನಸು ಸಾಕಾರವಾಗಲಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಹೇಳಿದರು.ಬಿಜೆಪಿ ರೋಣ ಮಂಡಲದ ವತಿಯಿಂದ ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದ ನಿಜವಾದ ಸಂಪತ್ತು ಎಂದರೆ ಸದೃಢವಾದ ಯುವಕರು. ಯುವಕರಿಂದಲೇ ದೇಶದ ಅಭಿವೃದ್ಧಿ ಸಾಧ್ಯ ಎಂಬ ಸಂದೇಶವನ್ನು ದೇಶದ್ದುದಕ್ಕೂ ಪ್ರಚುರಪಡಿಸಿದ ವಿವೇಕಾನಂದರು ಭವ್ಯ ಪರಂಪರೆಯನ್ನು ವಿದೇಶಗಳಲ್ಲಿಯೂ ಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿ ಎಂದರು.ಆಧುನಿಕ ತಂತ್ರಜ್ಞಾನದಲ್ಲಿ ಸಿಲುಕಿರುವ ಯುವಕರು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳದ ಪರಿಣಾಮ ಸಮಾಜವು ಇಂದು ಅಮಾನವೀಯ ಘಟನೆಗಳನ್ನು ಕಾಣುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಷ್ಟ್ರಾಭಿಮಾನ ಬಗ್ಗೆ ವಿವೇಕಾನಂದರು ಕಂಡ ಕನಸು ಸಾಕಾರವಾಗಬೇಕಾದರೆ ಪ್ರತಿಯೊಬ್ಬ ಯುವಕರು ಆಧ್ಯಾತ್ಮ, ಸೇವಾ ಮನೋಭಾವನೆ ಹಾಗೂ ಆತ್ಮಾಭಿಮಾನವನ್ನು ರೂಢಿಸಿಕೊಂಡು ಉತ್ತಮ ರಾಷ್ಟ್ರಕ್ಕೆ ಮುನ್ನಡಿ ಬರೆಯಬೇಕಾದ ಅವಶ್ಯಕತೆಯಿದೆ ಎಂದರು.
ಮುಖಂಡ ಉಮೇಶ ಚನ್ನು ಪಾಟೀಲ ಮಾತನಾಡಿ, ಭಾರತ ರಾಷ್ಟ್ರಕ್ಕೆ ವೈಚಾರಿಕತೆಯಂತಹ ಪ್ರಾಚೀನ ಸಂಸ್ಕೃತಿಯನ್ನು ಸಾರಿ ಹೇಳುವ ಪರಂಪರೆಯನ್ನು ಹೊಂದಿದೆ. ಇಂತಹ ಪರಂಪರೆಯನ್ನು ಅಳಿಯದೇ ಉಳಿಯಬೇಕಾದರೆ ಇಂದಿನ ಯುವಕರು ಸ್ವಾಮಿ ವಿವೇಕಾನಂದರ ಆದರ್ಶ, ತತ್ವ ಸಿದ್ಧಾಂತಗಳನ್ನು ಅರಿತು, ಅವುಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸಾಗುವುದು ಸೂಕ್ತವೆಂದು ಸಲಹೆ ನೀಡಿದರು.ಈ ವೇಳೆ ಯು.ಆರ್. ಚನ್ನಮ್ಮನವರ, ಕನಕಪ್ಪ ಅರಳಿಗಿಡದ, ರವಿ ಶಿಂಗ್ರಿ, ಮಹಾಂತೇಶ ಪೂಜಾರ, ಸುಭಾಷ ಮ್ಯಾಗೇರಿ, ಸಿದ್ದಣ್ಣ ಚೋಳಿನ್, ಯಮನೂರು ತಿರಕೋಜಿ, ಬಾಲಾಜಿ ಬೋಸ್ಲೆ, ಶರಣಪ್ಪ ಉಪ್ಪಿನಬೇಟಗೇರಿ, ದುರ್ಗಪ್ಪ ಮುಧೋಳ, ಕುಮಾರ ರಾಥೋಡ ಸೇರಿ ಇತರರು ಇದ್ದರು.