ಕನ್ನಡಪ್ರಭ ವಾರ್ತೆ ಮಧುಗಿರಿ

ಇಂದಿನ ಸಮಾಜ ನೈತಿಕವಾಗಿ ದಾರಿ ತಪ್ಪುತ್ತಿದ್ದು, ಯುವ ಜನರು ಶರಣರ ಆದರ್ಶಗಳನ್ನು ರೂಡಿಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸುವ ಅಗತ್ಯವಿದೆ ಎಂದು ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಮಕ ಕಲಾಶ್ರೀ ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು -ತುಮಕೂರು ಜಿಲ್ಲೆ ಮತ್ತು ಮಧುಗಿರಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಪ್ರೊ.ಹ.ಬ.ಮಹದೇವಪ್ಪ ಸಂಸ್ಮರಣಾ ದತ್ತಿ ಮತ್ತು ಡಿ.ಕೆ.ಉಮಾಮಲ್ಲೇಶ್. ಬಿ.ಮಲ್ಲೇಶ್‌ ಕುಮಾರ್ ವಂಶಾಭಿವೃದ್ಧಿ ದತ್ತಿ ಅಂಗವಾಗಿ ವಚನ ಗಾಯನ,ದತ್ತಿ ಉಪನ್ಯಾಸ ಮತ್ತು ಶರಣ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶರಣ ಚಿಂತನೆ ಮೈಗೂಡಿಸಿಕೊಂಡಿದ್ದ ದಿವಂಗತ ಪ್ರೊ.ಹ.ಬ ಮಹದೇವಪ್ಪ ಅತ್ಯುತ್ತಮ ವಾಗ್ಮಿ ಮತ್ತು ಆದರ್ಶ ಅಧ್ಯಾಪಕರಾಗಿ ಸಾರ್ಥಕ ಸೇವೆ ಸಲ್ಲಿಸಿದ್ದರು. ಅವರಂತೆಯೇ ಇಂದಿನವರೂ ಸಹ ಶರಣರ ಆದರ್ಶಗಳನ್ನು ಜಾರಿಗೆ ತಂದಲ್ಲಿ ಎಲ್ಲ ರೀತಿ ಕೌರ್ಯ ಹಾಗೂ ಇತರೇ ಕೆಟ್ಟ ಸಂಗತಿಗಳಿಂದ ದೂರವಿರಬಹುದಾಗಿದೆ ಎಂದರು.

ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಅನುಭವ ಮಂಟಪದಲ್ಲಿ ಸಂಕಟ-ಸಮಸ್ಯೆ -ಸವಾಲುಗಳನ್ನು ಮಹಿಳೆಯರು, ಶ್ರಮಿಕ ವರ್ಗದವರು ,ಶರಣರು ಮುಕ್ತವಾಗಿ ಮಾತನಾಡಿದ್ದರಿಂದ ಸರ್ವ ಸಮಾನತೆಯ ಸಮಾಜದ ಕನಸು ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು. ಕಾಯಕ ದಾಸೋಹಕ್ಕೆ ಪ್ರಾಮುಖ್ಯತೆ ನೀಡಿದ ವಚನ ಚಳುವಳಿ ವೈಚಾರಿಕತೆಯ ತಳಹದಿಯ ಮೇಲೆ ನಿಂತಿದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಟಿವಿವಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸಿ.ಕೃಷ್ಣಪ್ಪ ಪ್ರೊ.ಹ.ಬ.ಮಹದೇವಪ್ಪ ದಕ್ಷ, ಕಾರ್ಯಕ್ಷಮತೆ, ಬದ್ಧತೆ,ನೇರ ಮಾತಿನ ಮೂಲಕ ಕರ್ತವ್ಯ ನಿರ್ವಹಿಸಿ ಸಮಾಜಮುಖಿ ವ್ಯಕ್ತಿಯಾಗಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಭಾಷೆಯ ಸೊಗಸನ್ನು ವಿಸ್ತರಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿನಲ್ಲಿ ಸಾಹಿತ್ಯದ ಅಭಿರುಚಿ ಬೆಳಸಿದ ಧೀಮಂತ ಅಧ್ಯಾಪಕರು ಎಂದರು.


ಮುಖ್ಯಅತಿಥಿ ವಿಶ್ರಾಂತ ಪ್ರಾಂಶುಪಾಲ ಪ್ರೊ.ಡಿ.ಎಸ್.ಮುನೀಂದ್ರ ಕುಮಾರ್ ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿ ತುಂಬುತ್ತಿದ್ದ ಹ.ಬ.ಮಹದೇವಪ್ಪ, ಶಬ್ದಮಣಿ ದರ್ಪಣ , ಗದಾಯುದ್ಧ, ಅಭಿಜ್ಞಾನ ಶಾಕುಂತಲವನ್ನು ಬೋಧಿಸಿದ ರೀತಿ ನನ್ನಂತಹ ಅದೇಷ್ಟೋ ಅಧ್ಯಾಪಕರಿಗೆ ಅನುಸರಣೀಯವಾಯಿತು.ಆದರ್ಶ ಅಧ್ಯಾಪಕರಾಗಲು ಪ್ರೇರಣೆ ನೀಡಿತು ಎಂದರು.

ತುಮಕೂರು ವಿಶ್ವವಿದ್ಯಾನಿಲಯಕ್ಕೆ ನೂತನ ಸಿಂಡಿಕೇಟ್ ಸದಸ್ಯರಾಗಿ ನೇಮಕವಾಗಿರುವ ಪ್ರೊ.ಕೆ.ಎಸ್.ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಉಮಾಮಲ್ಲೇಶ್, ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ.ಗೋವಿಂದರಾಯ ಎಂ. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಬಿ.ನಿವೃತ್ತ ಶಿಕ್ಷಕ ಬೊಮ್ಮಣ್ಣ,ಈಶ್ವರಯ್ಯ, ಪತ್ರಾಂಕಿತ ವ್ಯವಸ್ಥಾಪಕ ಚಂದ್ರಕಲಾ ,ದೈಹಿಕ ಶಿಕ್ಷಣ ನಿರ್ದೇಶಕ ಮುರುಳೀಧರ,ಕೆ.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್‌.ನಾಗರಾಜು,ವಾಣಿಜ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ದುರ್ಗಪ್ಪ ,ಕನ್ನಡ ಅಧ್ಯಾಪಕ ಡಾ.ಸಿ.ಕುಮಾರ್, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.